Advertisement

“ತಕರಾರು’ಅರ್ಜಿ ವಾಪಸ್‌ ಪಡೆದ ಅಲೋಕ್‌

12:54 AM Aug 17, 2019 | Lakshmi GovindaRaj |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಹುದ್ದೆ ವಿಚಾರದಲ್ಲಿ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಕಾನೂನು ಸಂಘರ್ಷ ಅಂತ್ಯಗೊಂಡಿದೆ. ಎಡಿಜಿಪಿ ಭಾಸ್ಕರ್‌ ರಾವ್‌ ಅವರನ್ನು ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ನಿರ್ಗಮಿತ ಆಯುಕ್ತ ಅಲೋಕ್‌ಕುಮಾರ್‌, ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಾಪಸ್‌ ಪಡೆದುಕೊಂಡಿದ್ದಾರೆ.

Advertisement

ಅಲೋಕ್‌ಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅವರ ಪರ ವಕೀಲರು ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಅರ್ಜಿ ಹಿಂಪಡೆಯುವಿಕೆಗೆ ಅಲೋಕ್‌ ಕುಮಾರ್‌ ಯಾವುದೇ ಕಾರಣ ನೀಡಿಲ್ಲ. ಅರ್ಜಿ ಹಿಂಪಡೆದು ಕಾನೂನು ಹೋರಾಟದಿಂದ ಹಿಂದೆ ಸರಿದ ನಿರ್ಧಾರದ ಕಾರಣ ಏನು ಎಂಬುದರ ಬಗ್ಗೆ ಸ್ಪಷ್ಟೀಕರಣಕ್ಕೆ ಅಲೋಕ್‌ ಕುಮಾರ್‌ ಅವರನ್ನು ದೂರವಾಣಿ ಮೂಲಕ “ಉದಯವಾಣಿ’ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಉನ್ನತ ಅಧಿಕಾರಿಗಳ ಸಂಧಾನ: ಅಲೋಕ್‌ಕುಮಾರ್‌ ಅವರ ಈ ದಿಢೀರ್‌ ನಿರ್ಧಾರದ ಹಿಂದೆ ಇಲಾಖೆಯ ಉನ್ನತ ಅಧಿಕಾರಿಗಳ “ಸಂಧಾನ’ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲೋಕ್‌ಕುಮಾರ್‌ ಅವರ ಕಾನೂನು ಹೋರಾಟದ ಬೆನ್ನಲ್ಲೇ ಆಯುಕ್ತರ ಹುದ್ದೆಗೆ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಭಾಸ್ಕರ್‌ ರಾವ್‌ ಲಾಬಿ ನಡೆಸಿದ್ದಾರೆ ಎಂಬ ಆರೋಪದ ಭಾಸ್ಕರ್‌ ರಾವ್‌ ಅವರ ಧ್ವನಿ ಹೋಲುವ ಆಡಿಯೋ ವೈರಲ್‌ ಆಗಿತ್ತು.

ಹಲವು ಐಪಿಎಸ್‌ ಅಧಿಕಾರಿಗಳು ಆಡಿಯೋ ವೈರಲ್‌ ಮಾಡುವ ಕೆಲಸದಲ್ಲಿ ಕೈ ಜೋಡಿಸಿದ್ದರು ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿತ್ತು. ಆಯಕಟ್ಟಿನ ಹುದ್ದೆಗಳ ಲಾಬಿಗೆ ಅಧಿಕಾರಿಗಳು ನಡೆಸುವ ಲಾಬಿಯ ಹೂರಣವನ್ನು ಬಿಚ್ಚಿಟ್ಟು ಸಾರ್ವಜನಿಕವಾಗಿ ಪೊಲೀಸ್‌ ಇಲಾಖೆಯ ಲೋಪವನ್ನು ಬೆಟ್ಟು ಮಾಡಿ ತೋರಿಸುವ ಹಂತಕ್ಕೆ ಬಂದು ನಿಂತಿದೆ.

ಈ ಬೆಳವಣಿಗೆಳ ಮಧ್ಯೆಯೇ ಆಯುಕ್ತರ ಹುದ್ದೆಗೆ ಇಬ್ಬರು ಐಪಿಎಸ್‌ ಅಧಿಕಾರಿಗಳ ನಡುವಣ ಕಾನೂನು ಹೋರಾಟ, ಮತ್ತೂಂದೆಡೆ ಇಲಾಖೆಗೆ ಕಪ್ಪು ಚುಕ್ಕೆಯಾಗಲಿರುವ ದೂರವಾಣಿ ಕದ್ದಾಲಿಕೆ (ಆಡಿಯೋ) ಸಾಕಷ್ಟು ಮುಜುಗರ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Advertisement

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಿಯೋ ವೈರಲ್‌ ಉನ್ನತ ಮಟ್ಟದ ತನಿಖೆ ನಡೆದರೆ ಐಪಿಎಸ್‌ ಅಧಿಕಾರಿಗಳೇ ಆರೋಪಿಗಳಾಗಿ ಪರಿಗಣನೆಗೆ ಒಳಗಾಗುವ ಸಾಧ್ಯತೆಯೂ ಇತ್ತು ಎಂದು ಹೇಳಲಾಗುತ್ತಿದೆ. ಮತ್ತೂಂದೆಡೆ ಅಲೋಕ್‌ಕುಮಾರ್‌ ಸಿಎಟಿಯಲ್ಲಿ ಸಲ್ಲಿಸಿರುವ ತಕರಾರು ಅರ್ಜಿ ಇತ್ಯರ್ಥಗೊಂಡ ಬಳಿಕವೂ ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿತ್ತು.

ಹೀಗಾಗಿ ಇಲಾಖೆಯ ಕುರಿತು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬುದನ್ನು ಅರಿತ ಇಲಾಖೆಯ ಉನ್ನತ ಅಧಿಕಾರಿಗಳು ಅಲೋಕ್‌ ಕುಮಾರ್‌ ಹಾಗೂ ಭಾಸ್ಕರ್‌ ರಾವ್‌ ಅವರ ಮನವೊಲಿಸಿದ್ದಾರೆ. ತಕರಾರು ಅರ್ಜಿ ವಾಪಸ್‌ ಪಡೆಯುವ ಸಲಹೆಯನ್ನು ಅಲೋಕ್‌ ಒಪ್ಪಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಅಲೋಕ್‌ಗೆ ಮತ್ತೊಂದು ಅವಕಾಶವಿದೆ!: 1994ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆಗಿರುವ ಅಲೋಕ್‌ಕುಮಾರ್‌ ಅವರ ಐಜಿಪಿ ಹುದ್ದೆಯನ್ನು ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಡಿಜಿಪಿ ಹುದ್ದೆಗೆ ಮೇಲ್ದರ್ಜೆಗೆ ಏರಿಸಿ ಜೂನ್‌ 17ರಂದು ನಗರ ಪೊಲೀಸ್‌ ಆಯುಕ್ತರ ಹುದ್ದೆ ನೀಡಲಾಗಿತ್ತು.

ಭಾಸ್ಕರ್‌ ರಾವ್‌ ಸೇರಿದಂತೆ ನಾಲ್ವರು ಐಪಿಎಸ್‌ ಅಧಿಕಾರಿಗಳು ಸೇವಾ ಹಿರಿತನದಲ್ಲಿ ಆಯುಕ್ತರ ಹುದ್ದೆಗೆ ಅರ್ಹರಾಗಿದ್ದು ಕಮಿಷನರ್‌ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ನಾಲ್ವರು ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಅಲೋಕ್‌ಕುಮಾರ್‌ ಹುದ್ದೆಗಿಟ್ಟಿಸಿದ ವಿಚಾರ ಇಲಾಖೆಯೊಳಗೆ ಅಪಸ್ವರಕ್ಕೆ ಕಾರಣವಾಗಿತ್ತು. ಬದಲಾದ ಸರ್ಕಾರದಿಂದ ಅಲೋಕ್‌ 47 ದಿನಗಳಲ್ಲಿ (ಆಗಸ್ಟ್‌ 2) ಹುದ್ದೆ ಕಳೆದುಕೊಂಡಿದ್ದರು.

ಉನ್ನತ ಅಧಿಕಾರಿಗಳು ಸಂಧಾನದ ವೇಳೆ ಅಲೋಕ್‌ಕುಮಾರ್‌ ಇನ್ನೂ 8 ವರ್ಷಗಳಿಗಿಂತ ಹೆಚ್ಚು ಸೇವಾ ಅವಧಿಯಿದೆ. ಹೀಗಾಗಿ ಮತ್ತೂಮ್ಮೆ ಆಯುಕ್ತರ ಹುದ್ದೆ ಅವಕಾಶವೂ ಇದೆ. ಹೀಗಾಗಿ ಅರ್ಜಿ ವಾಪಸ್‌ ಪಡೆಯುವುದು ಒಳಿತು ಎಂಬ ಸಲಹೆಯನ್ನೂ ನೀಡಿದ್ದರು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next