Advertisement
ಶಾಸಕ ಮುನಿರತ್ನ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಬಿಡದೆ, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಕೌನ್ಸಿಲ್ ಸಭೆಯಲ್ಲಿ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗ ಸದಸ್ಯರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮೂವರು ಪಾಲಿಕೆ ಸದಸ್ಯೆಯರು ಅವ್ಯವಹಾರ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ಬೆಥೆಲ್ ಸಂಸ್ಥೆಯ ಮುಖ್ಯಸ್ಥ ಡಾ.ಸನ್ನಿ ಮಾತನಾಡಿ, “ಲಗ್ಗೆರೆ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ವೈದ್ಯಕೀಯ ಕಾಲೇಜಿನಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಆರೋಪಿಸಿ ಮಂಜುಳಾ ನಾರಾಯಣಸ್ವಾಮಿ ಅವರು, 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡುವಂತೆ ಇನ್ನಿಲ್ಲದ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಎರಡೂವರೆ ಲಕ್ಷ ರೂ. ನೀಡಿದ್ದೇನೆ,’ ಎಂದು ಆರೋಪಿಸಿದರು.
ಕಾನೂನುಗಳನ್ನು ಉಲ್ಲಂಘನೆ ಮಾಡದಿದ್ದರೆ ಹಣ ಏಕೆ ನೀಡಿದಿರಿ? ಎಂಬ ಪ್ರಶ್ನೆಗೆ ತಬ್ಬಿಬ್ಟಾದ ಡಾ.ಸನ್ನಿ, “ಕಿರುಕುಳ ನೀಡುತ್ತಿದ್ದರಿಂದ ಹಣ ನೀಡಿದ್ದು, ಹಣ ನೀಡಿರುವ ವಿಡಿಯೋ ನನ್ನ ಬಳಿಯಿದೆ,’ ಎಂದು ವಿಡಿಯೋ ತೋರಿಸಿದರು. ವಿಡಿಯೋದಲ್ಲಿ ಹಳೆಯ ಒಂದು ಸಾವಿರ ರೂ. ನೋಟಿರುವ ಬಗ್ಗೆ ಪ್ರಶ್ನಿಸಿದಾಗ, “ಆರು ತಿಂಗಳ ಹಿಂದೆ ಹಣ ನೀಡಿದ್ದು, ಈಗ ಮತ್ತಷ್ಟು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ,’ ಎಂದರು. ಕಟ್ಟಡ ನಿರ್ಮಾಣದ ಕುರಿತ ದಾಖಲೆಗಳನ್ನು ಕೇಳಿದಾಗ, ದಾಖಲೆಗಳು ಶಾಲೆಯಲ್ಲಿದ್ದು ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸಮಜಾಯಿಶಿ ನೀಡಿದರು.
ಸುಳ್ಳು ದೂರು, ಜಾತಿ ನಿಂದನೆ ಪ್ರಕರಣ!: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಶಾ ಸುರೇಶ್, ರಾಜರಾಜೇಶ್ವರಿ ನಗರ ಕ್ಷೇತ್ರದ ಒಕ್ಕಲಿಗ ಸಮುದಾಯದ ಸದಸ್ಯೆಯರಿಗೆ ಮುನಿರತ್ನ ಅವರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ದೂರುಗಳು ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಮಹಿಳಾ ಸದಸ್ಯರ ಮಾತು ಕೇಳದಂತೆ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜನಪ್ರತಿನಿಧಿಗಳ ಹಕ್ಕಿಗೆ ಚ್ಯುತಿ ತಂದಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ಕಾಂಗ್ರೆಸ್ ಪಕ್ಷದಿಂದ ನನ್ನನ್ನು ವಜಾಗೊಳಿಸುವಂತೆ ಹೇಳಲು ಶಾಸಕ ಎಚ್.ಟಿ.ಸೋಮಶೇಖರ್ ಯಾರು?’ ಎಂದು ಪ್ರಶ್ನಿಸಿದ ಅವರು, “ಶಾಸಕ ಮುನಿರತ್ನ ನೀಡುತ್ತಿರುವ ಕಿರುಕುಳದ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೇನೆ. ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ,’ ಎಂದು ಸ್ಪಷ್ಟನೆ ನೀಡಿದ ಅವರು, “ಸೋಮಶೇಖರ್ ಅವರು ಸಚಿವ ಸ್ಥಾನ ದೊರೆಯಲಿಲ್ಲ ಎಂಬ ಹತಾಶೆಯಿಂದ ಹೈಕಮಾಂಡ್ ನನ್ನ “ಪುಟುಗೋಸಿ’ ಎಂಬ ಪದ ಬಳಿಸಿದ್ದರು. ಈಗ ನನ್ನ ಮೇಲೆ ಶಿಸ್ತು ಕೈಗೊಳ್ಳಲು ಅವರ್ಯಾರು?,’ ಎಂದು ದೂರಿದರು.
ರಾಹುಲ್ ಗಾಂಧಿಗೆ ದೂರು: “ಶಾಸಕ ಮುನಿರತ್ನ ಅವರು ಕಿರುಕುಳ ನೀಡುತ್ತಿರುವ ಕುರಿತು ರಾಜ್ಯದ ಎಲ್ಲ ನಾಯಕರಿಗೆ ದೂರು ನೀಡಲಾಗಿದೆ. ಆದರೆ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಜೂ.28ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲಾಗುವುದು,’ ಎಂದು ಆಶಾ ಸುರೇಶ್ ತಿಳಿಸಿದರು.