ಕಾರವಾರ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಹಾಗೂ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಸಹಕಾರ ನೀಡಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಕೆ. ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಅಂತರ್ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳಿಗೆ ಲಿಂಗ ಭೇದವಿಲ್ಲದೆ ಇಂದು ಎಲ್ಲರೂ ಬಲಿಯಾಗುತ್ತಿದ್ದಾರೆ. ಮಹಿಳೆ ಸಿಗರೇಟ್ ಸೇದುವುದು ಮಹಾನಗರಗಳಲ್ಲಿ ಸಾಮಾನ್ಯವಾಗುತ್ತಿದೆ. ಯುವ ಜನರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು. ಶಿಕ್ಷಣ ಕ್ಲಬ್‌ಗಳನ್ನು ಹುಟ್ಟು ಹಾಕಿ ಅರಿವು ಮೂಡಿಸಬೇಕು. ಕಾಲೇಜು ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರ ಇರುವಂತೆ ಮಾಡಬೇಕೆಂದರು.
ದೂಮಪಾನ ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಟಪರಿಣಾಮಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಿ, ಮುಖ್ಯವಾಗಿ ಸ್ಥಳೀಯ ಟಿ.ವಿ ವಾಹಿನಿಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವುದರ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕಿರುಚಿತ್ರಗಳನ್ನು ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ತೋರಿಸುವ ಕೆಲಸ ಮಾಡಿ ಮಾನಸಿಕ ಪರಿವರ್ತನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡಿದವರಿಗೆ ದಂಡವಿಧಿಸಿರುವುದನ್ನು ದಿನಪತ್ರಿಕೆಗಳ ಮೂಲಕ ಜಾಗೃತಿ ಮೂಡಿಸಬೇಕು. ವೇಣುಧ್ವನಿ ಬಾನುಲಿಯಲ್ಲಿ ಜಾಗೃತಿ ಕಾರ್ಯಕ್ರಮ ಭಿತ್ತರಿಸಬೇಕು ಎಂದು ಸೂಚನೆ ನೀಡಿದರು.
ಮಂಗನ ಕಾಯಿಲೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಮುಂದಿನ ದಿನಗಳಲ್ಲಿ ಮಂಗನ ಕಾಯಿಲೆ ಬರದಂತೆ ಹಾಗೂ ಅದರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇದಕ್ಕೆ ಜಿಲ್ಲೆಯ ಎಲ್ಲ ತಾಲೂಕಾಡಳಿತಗಳು ಸನ್ನದ್ಧರಾಗಿರಬೇಕು. ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆ ಈಗಿನಿಂದಲೇ ಕ್ರಿಯಾ ಯೋಜನೆ ತಯಾರಿಸಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಲ್ಲಾ ತಹಶೀಲ್ದಾರರಿಗೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಆದೇಶಿಸಿದರು.
ಡಿಎಚ್ಒ ಡಾ| ಜಿ.ಎನ್ ಅಶೋಕಕುಮಾರ, ಡಿಡಿಪಿಐ ಕೆ. ಮಂಜುನಾಥ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ, ಎಸ್. ಪುರುಷೋತ್ತಮ, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.