Advertisement

ಮುಕ್ಕೂರು: ಅಂಚೆ ಕಚೇರಿ ಪೆರುವಾಜೆಗೆ ಸ್ಥಳಾಂತರ

11:02 AM May 27, 2019 | Team Udayavani |

ಸುಳ್ಯ : ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಅಂಚೆ ಕಚೇರಿಯಲ್ಲಿ ವ್ಯವಹಾರ ಹೊಂದಿದ್ದ ಜನರಿಗೆ ತೊಂದರೆ ಉಂಟಾಗಿದೆ.

Advertisement

ಮೇ 22ರ ಅನಂತರ ಅಂಚೆ ಕಚೇರಿ ವ್ಯವಹಾರಕ್ಕೆಂದು ಬಂದವರಿಗೆ ಕಚೇರಿ ಬಾಗಿಲಿಗೆ ಅಂಟಿಸಲಾದ ಸ್ಥಳಾಂತರದ ನೋಟಿಸ್‌ ಕಂಡಿದೆ. ಸ್ಥಳಾಂತರಿಸುವ ಬಗ್ಗೆ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಜನರಿಗೆ ಅನುಕೂಲಕರವಾಗಿದ್ದ ಅಂಚೆ ಕಚೇರಿ ದಿಢೀರ್‌ ವರ್ಗಾವಣೆ ಖಂಡಿಸಿ ಹೋರಾಟಕ್ಕಿಳಿಯಲು ನಿರ್ಧರಿಸಲಾಗಿದೆ.

ಮುಕ್ಕೂರು ಅಂಚೆ ಕಚೇರಿ
ಬೆಳ್ಳಾರೆ ಅಂಚೆ ವಿಭಾಗಕ್ಕೆ ಒಳಪಟ್ಟ ಪೆರುವಾಜೆಯ ಮುಕ್ಕೂರಿನಲ್ಲಿ 55 ವರ್ಷಗಳ ಹಿಂದೆ ಅಂಚೆ ಕಚೇರಿ ತೆರೆಯಲಾಗಿತ್ತು. ಖಾಸಗಿ ಕಟ್ಟಡದಲ್ಲಿ ಕಚೇರಿ ಇತ್ತು. ಈ ಕಚೇರಿ ಪೆರುವಾಜೆ ಗ್ರಾಮದಲ್ಲೆ ಹೆಚ್ಚು ಗ್ರಾಹಕರನ್ನು ಮುಕ್ಕೂರಿನಲ್ಲಿ ಹೊಂದಿತ್ತು. ಮೇ 22ರಿಂದ ಹಿಂದೆ ಅಂಚೆ ಕಚೇರಿಗೆ ಬೀಗ ಹಾಕಿ, 2 ಕಿ.ಮೀ. ದೂರದ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಮುಕ್ಕೂರು ಪರಿಸರದಲ್ಲಿ 250ಕ್ಕೂ ಅಧಿಕ ಮಂದಿ ಆರ್‌ಡಿ ಸೌಲಭ್ಯ ಹೊಂದಿದ್ದರು. ಎಫ್‌ಡಿ, ಇನ್ಶೂರೆನ್ಸ್‌ ಖಾತೆದಾರರು ಇದ್ದಾರೆ. ನೂರಾರು ಮಂದಿಗೆ ಪತ್ರ ವ್ಯವಹಾರಕ್ಕೂ ಅನುಕೂಲವಾಗಿತ್ತು. ಆದರೆ ದಿಢೀರ್‌ ಸ್ಥಳಾಂತರದ ಪರಿಣಾಮ ಗ್ರಾಹಕರು ತೊಂದರೆಗೆ ಈಡಾಗಿದ್ದಾರೆ. ಹಣ ಕಟ್ಟಲು
ಬಂದವರು ಮರಳಿ ಮನೆ ತೆರಳುವ ಸ್ಥಿತಿ ಉಂಟಾಗಿದೆ. ಅಂಚೆ ಕಚೇರಿ ಮುಚ್ಚಿದೆಯೇ ಅಥವಾ ಸ್ಥಳಾಂತರವಾಗಿದೆಯೇ ಎಂಬ ಗೊಂದಲ ಜನರಿಗೆ ಉಂಟಾಗಿದೆ ಅನ್ನುತ್ತಾರೆ ಗ್ರಾಹಕರು.

ಹಣ ಹಿಂಪಡೆಯಲು ನಿರ್ಧಾರ ವಯಸ್ಕರು ಸಹಿತ ಹೆಚ್ಚಿನವರು ಇಲ್ಲಿ ಆರ್‌ಡಿ, ಎಫ್‌ಡಿ, ಇನ್ಶೂರೆನ್ಸ್‌ ಖಾತೆ ಹೊಂದಿದ್ದು, ದಿಢೀರ್‌ ಸ್ಥಳಾಂತರದ ಪರಿಣಾಮ ತಾವು ಠೇವಣಿ ಇರಿಸಿರುವ ಹಣವನ್ನು ಹಿಂಪಡೆದು ಖಾತೆ ಮುಚ್ಚಲು ಈ ಭಾಗದ ಗ್ರಾಹಕರು ನಿರ್ಧರಿಸಿದ್ದಾರೆ. ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಪೆರುವಾಜೆಗೆ ಸೀಮಿತ ಬಸ್‌ ಓಡಾಟವಿದೆ. ವಾರಕ್ಕೊಮ್ಮೆ 50, 100 ರೂ. ಪಾವತಿಸುವವರು ಪೆರುವಾಜೆ ತನಕ ತೆರಳಬೇಕಾದರೆ ಅರ್ಧ ದಿನ ವ್ಯಯಿಸಬೇಕು. ಹೀಗಾಗಿ ಅಂಚೆ ವ್ಯವಹಾರದಿಂದ ದೂರ ಸರಿಯಲು ನಿರ್ಧರಿಸಿರುವುದಾಗಿ ಹಲವು ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.

Advertisement

ಶಿಥಿಲ ಕಟ್ಟಡ, ನೆಟ್‌ವರ್ಕ್‌ ಸಮಸ್ಯೆ ಕಾರಣ
ಹಾಲಿ ಕಟ್ಟಡ ಶಿಥಿಲಗೊಂಡಿರುವುದು, ನೆಟ್‌ವರ್ಕ್‌ ಸಮಸ್ಯೆ, ಗ್ರಾ.ಪಂ. ಕಟ್ಟಡದಲ್ಲೇ ಕಾರ್ಯ ನಿರ್ವಹಿಸಬೇಕು ಎಂಬ ಕೇಂದ್ರ ಸರಕಾರದ ಆದೇಶದಿಂದ ಮುಕ್ಕೂರು ಅಂಚೆ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ. ಗ್ರಾ.ಪಂ.ಗೆ ಸೇರಿದ ಕಟ್ಟಡದಲ್ಲೇ ಅಂಚೆ ಕಚೇರಿ ಇರಬೇಕು ಎಂದು ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿರುವ ಕಾರಣ ಸ್ಥಳಾಂತರ ಅನಿವಾರ್ಯವಾಗಿತ್ತು. ಹಾಲಿ ಕಟ್ಟಡದ ಛಾವಣಿ ಶಿಥಿಲಾವಸ್ಥೆಗೆ ತಲುಪಿರುವುದು ತುರ್ತು ಸ್ಥಳಾಂತರಕ್ಕಿರುವ ಪ್ರಮುಖ ಕಾರಣ. ಕೇಂದ್ರ ಸರಕಾರ ಇಂಡಿಯಾ ಪೋಸ್ಟ್‌ ಪೇಮಂಟ್‌ ಬ್ಯಾಂಕ್‌ ಜಾರಿ ಮಾಡಿದ್ದು, ಈ ಮೂಲಕ ಶಾಲಾ ಮಕ್ಕಳಿಗೆ ಶಿಷ್ಯವೇತನ ನೀಡಬೇಕಿದೆ. ಮಕ್ಕಳ ಅಕೌಂಟ್‌ ಮೊಬೈಲ್‌ ಮೂಲಕವೇ ಆಗಬೇಕಿದೆ. ಇದಕ್ಕೆ ಚಾಲನೆ ನೀಡಬೇಕಾದರೆ ನೆಟ್‌ವರ್ಕ್‌ ಅಗತ್ಯವಿದೆ. ಸ್ಥಳಾಂತರಕ್ಕೆ ಇವೇ ಕಾರಣಗಳೆಂದು ಇಲಾಖೆ ಹೇಳಿದೆ.

ಸೇವೆಗೆ ತೊಂದರೆ ಇಲ್ಲ
ಕೇಂದ್ರ ಸರಕಾರದ ಆದೇಶದ ಪ್ರಕಾರ ಗ್ರಾ.ಪಂ. ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಶಿಥಿಲ ಕಟ್ಟಡ ಹಾಗೂ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಅಕೌಂಟ್‌ ತೆರೆಯಲು ನೆಟ್‌ವರ್ಕ್‌ ಅಗತ್ಯ ಮನಗಂಡು ತುರ್ತಾಗಿ ಸ್ಥಳಾಂತರಿಸಲಾಗಿದೆ. ಆರಂಭದಿಂದಲೂ ಪೆರುವಾಜೆ ಅಂಚೆ ಕಚೇರಿ ಎಂದು ನಮೂದಾಗಿದ್ದು, ಅಲ್ಲಿ ಕಟ್ಟಡ ಇಲ್ಲದ ಕಾರಣ ಮುಕ್ಕೂರಿನಲ್ಲಿ ತೆರೆಯಲಾಗಿತ್ತು. ಗ್ರಾಹಕರಿಗೆ ಸೇವೆಯಲ್ಲಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಸ್ಥಳಾಂತರದ ಬಗ್ಗೆ ಅಂಚೆ ಪೇದೆ ಮೂಲಕ ಮನೆ ಮನೆಗೆ ಮಾಹಿತಿ ನೀಡಲಾಗುತ್ತಿದೆ.
– ಮೆಲ್ವಿನ್‌ ಲೋಬೋ ಇನ್‌ಸ್ಪೆಕ್ಟರ್‌ ಆಫ್‌ ಅಂಚೆ ಇಲಾಖೆ, ಸುಳ್ಯ

ಮಾಹಿತಿ ನೀಡದೆ ಸ್ಥಳಾಂತರ
ಸ್ಥಳಾಂತರದ ವಿಚಾರವನ್ನು ಯಾರೂ ನಮ್ಮ ಗಮನಕ್ಕೆ ತಂದಿಲ್ಲ. ಇದಕ್ಕೆ ನಮ್ಮ ಆಕ್ಷೇಪ ಇದೆ. ಗ್ರಾಹಕರನ್ನು ಹೊಂದಿರುವ ಊರಿಂದ ಸ್ಥಳಾಂತರಿಸುವ ಮೊದಲು ಕನಿಷ್ಠ ಗ್ರಾಹಕರ ಗಮನಕ್ಕಾದರೂ ತರಬೇಕಿತ್ತು. ಇದರ ವಿರುದ್ಧ ಮುಂದಿನ ಹೋರಾಟ ಬಗ್ಗೆ ಜನರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
 - ಉಮೇಶ್‌ ಕೆಎಂಬಿ, ಗ್ರಾ.ಪಂ. ಸದಸ್ಯರು

ಏಕಾಏಕಿ ನಿರ್ಧಾರ ಸರಿಯಲ್ಲ
ಅಂಚೆ ಕಚೇರಿಯನ್ನು ಏಕಾಏಕಿ ಸ್ಳಾಂತರಿಸಿರುವುದು ಸರಿಯಲ್ಲ. ಊರವರ ಜತೆ ಚರ್ಚಿಸಬೇಕಿತ್ತು. 50 ವರ್ಷಗಳ ಅಧಿಕ ಕಾಲ ಈ ಊರಿನವರಿಗೂ, ಅಂಚೆ ಕಚೇರಿಗೆ ಒಳ್ಳೆಯ ನಂಟಿತ್ತು. ಆದರೆ ಯಾರ ಗಮನಕ್ಕೆ ತಾರದೆ ಇದನ್ನು ಸ್ಥಳಾಂತರಿಸಲಾಗಿದೆ.
 - ಕುಂಬ್ರ ದಯಾಕರ ಆಳ್ವ, ಅಧ್ಯಕ್ಷರು, ಮುಕ್ಕೂರು ಹಾ.ಉ.ಸ. ಸಂಘ

ಸ್ಥಳಾಂತರ ಸರಿಯಲ್ಲ
ದೀರ್ಘ‌ ಕಾಲದಿಂದ ಇರುವ ಅಂಚೆ ಕಚೇರಿ ಸ್ಥಳಾಂತರದಿಂದ ಅನೇಕರಿಗೆ ತೊಂದರೆ ಆಗಿದೆ. ಇಳಿ ವಯಸ್ಕರು ಸೌಲಭ್ಯಕ್ಕಾಗಿ ಅಲೆದಾಡುವ ಸ್ಥಿತಿ ಉಂಟಾಗಿದೆ. ಈ ಅಂಚೆ ಕಚೇರಿ ಮುಕ್ಕೂರಿನಲ್ಲೇ ಉಳಿಯಬೇಕು.
 - ರಮೇಶ್‌ ಕಾನಾವು ಗಣೇಶೋತ್ಸವ ಸಮಿತಿ, ಕಾರ್ಯದರ್ಶಿ, ಮುಕ್ಕೂರು

Advertisement

Udayavani is now on Telegram. Click here to join our channel and stay updated with the latest news.

Next