Advertisement

ದಂಡೆಯ 28 ಗ್ರಾಮದ ಜನರ ಸ್ಥಳಾಂತರ

01:11 PM Aug 09, 2019 | Team Udayavani |

ಕಾರವಾರ: ಉತ್ತರ ಕನ್ನಡದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ ಎಂದ ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌, ಅಂಕೋಲಾ, ಕಾರವಾರ ತಾಲೂಕುಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಸನ್ನಿವೇಶ ನಿಯಂತ್ರಣದಲ್ಲಿದೆ ಎಂದರು.

Advertisement

ಸುಪಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಮಳೆ ಕಡಿಮೆಯಾದರೆ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ. ಮಳೆ ಮುಂದುವರಿದರೆ ಮಾತ್ರ ನದಿ ದಂಡೆ ಜನರು ಸ್ಥಳಾಂತರಕ್ಕೆ ಸಜ್ಜಾಗಬೇಕು ಎಂದರು. ಈಗಾಗಲೇ ಕದ್ರಾ ಸಮೀಪದ ಗೋಟೆಗಾಳಿ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳು ಜನರನ್ನು ಕಾರವಾರಕ್ಕೆ ಕರೆದುಕೊಂಡು ಹೋಗಲು ನಿಂತಿವೆ. ಮಲ್ಲಾಪುರ ಭಾಗದ ಪ್ರವಾಹ ಪೀಡಿತ ಜನರನ್ನು ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ.

ಮನೆಗಳನ್ನು ಬಿಟ್ಟು ಬರಲು ಜನರು ಮೊದಲು ಮನಸ್ಸು ಮಾಡುವುದಿಲ್ಲ. ನದಿ ಪ್ರವಾಹ ಹೆಚ್ಚಾಗುವ ಮುನ್ನ ಮಾನಸಿಕವಾಗಿ ಅವರನ್ನು ಸಜ್ಜು ಮಾಡುವ ಕಾರ್ಯ ನಡೆದಿದೆ.

ಕದ್ರಾ ಅಣೆಕಟ್ಟಿನಿಂದ 1.90 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿದಿದೆ. ಸುಪಾ ಜಲಾಶಯದಿಂದ 30 ಸಾವಿರ ಕ್ಯೂಸೆಕ್‌ ನೀರನ್ನು ಶುಕ್ರವಾರ ಬಿಡುವ ಸಾಧ್ಯತೆಗಳಿವೆ. ಮಳೆ ಮುಂದುವರಿದಲ್ಲಿ ಸುಪಾ ಜಲಾಶಯದಿಂದ ನೀರು ಹೊರ ಬಿಡಬೇಕಾಗುತ್ತದೆ. ಹಾಗಾಗಿ ಕಾಳಿ ನದಿ ದಂಡೆಯ ಹಲವು ಗ್ರಾಮಗಳ ಜನರಿಗೆ ಕಾರವಾರದ ಸಾಗರ ದರ್ಶನ ಸೇರಿದಂತೆ ಇತರೆ ಮೂರು ಕಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಜಲಾಶಯಗಳಿಂದ ಜನರಿಗೆ ಹೆಚ್ಚು ತೊಂದರೆಯಾಗದ ರೀತಿಯಲ್ಲಿ ನಾವು ಕದ್ರಾದಲ್ಲೆ ನೆಲೆ ನಿಂತು ನೀರನ್ನು ಹೊರಬಿಡಿಸುತ್ತಿದ್ದೇವೆ. ಉಸ್ತುವಾರಿ ಕಾರ್ಯದರ್ಶಿಗಳಾದ ಮೌನೀಶ್‌ ಮುದ್ಗಿಲ್ ಅವರು ಗಂಜಿ ಕೇಂದ್ರಗಳಿಗೆ ಸ್ವತಃ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿವೃಷ್ಠಿ ನಿಭಾಯಿಸಲು ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಹರೀಶಕುಮಾರ್‌ ಹೇಳಿದರು.

Advertisement

ಎರಡ್ಮೂರು ದಿನಗಳಲ್ಲಿ ಪರಿಸ್ಥಿತಿ ಹತೋಟಿಗೆ ಬರಲಿದೆ. ನಂತರ ಪ್ರವಾಹ ಪೀಡಿತ ಸ್ಥಳಗಳ ಹಾನಿ ಸಮೀಕ್ಷೆ ಮಾಡಲಾಗುವುದು ಎಂದರು. ಕಾಳಿ ನದಿಯ ಐದು ಜಲಾಶಯಗಳ ಹಿನ್ನೀರಿನಲ್ಲಿ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಕದ್ರಾದಿಂದ ಕಳೆದ ಮೂರು ದಿನಗಳಿಂದ 1.9 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಹಾಗಾಗಿ ನದಿ ನೀರು ದಂಡೆಯ ಗ್ರಾಮಗಳನ್ನು ಆವರಿಸಿ ಸದಾಶಿವಗಡ -ಲೋಂಡಾ ರಸ್ತೆಯ ಎರಡು ಕಡೆ ನೀರು ತುಂಬಿಕೊಂಡಾಗ ರಸ್ತೆ ಸಂಚಾರ ಸಹ ದುಸ್ತರವಾಗುತ್ತದೆ ಎಂದರು. ಕಾರವಾರದಲ್ಲಿ ತಾತ್ಕಾಲಿಕ ವಸತಿ ಕೇಂದ್ರಗಳನ್ನು ಸಾಗರ ದರ್ಶನ ಮತ್ತಿತರೆಡೆ ತೆರೆಯಲಾಗಿದೆ, ಅಲ್ಲಿ ಜನರು ಆಶ್ರಯ ಪಡೆಯಬೇಕು ಎಂದರು.

ಎಸ್ಪಿ ವಿನಾಯಕ ಪಾಟೀಲ್ ಮಾತನಾಡಿ ಇಡೀ ಪೊಲೀಸ್‌ ಇಲಾಖೆ ಜನರನ್ನು ಸ್ಥಳಾಂತರಿಸುವ ಕೆಲಸದಲ್ಲಿದೆ. ಹೋಂಗಾರ್ಡ್ಸ್‌, ಕರಾವಳಿ ಕಾವಲು ಪಡೆ, ನೇವಿ, ಅಗ್ನಿಶಾಮಕದಳ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಯಾವುದೇ ಭಯ ಪಡುವ ಅಗತ್ಯವಿಲ್ಲ. ನದಿ ದಂಡೆಗಳ ಜನರು ಸ್ಥಳಾಂತರವಾಗಬೇಕು ಎಂದು ಮನವಿ ಮಾಡಿದರು.

ಜಿಪಂ ಸಿಇಒ ಮೊಹಮ್ಮದ್‌ ರೋಶನ್‌ ಗಂಜಿ ಕೇಂದ್ರಗಳಿಗೆ ನೀರು, ಬೆಡ್‌ಶೀಟ್ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಶಾಲೆಗಳ ಬಿಸಿಯೂಟ ಸಾಮಾಗ್ರಿ, ಅಂಗನವಾಡಿಗಳ ಆಹಾರ ಸಾಮಾಗ್ರಿಯನ್ನು ಗಂಜಿ ಕೇಂದ್ರಕ್ಕೆ ನೀಡುತ್ತಿದ್ದೇವೆ ಎಂದರು.

ಲಿಂಗನಮಕ್ಕಿ-ಗೇರುಸೊಪ್ಪ ಪ್ರವಾಹದ ಮುನ್ನೆಚ್ಚರಿಕೆ:

 ಗುರುವಾರ ಸಂಜೆ 4ಕ್ಕೆ ಲಿಂಗನಮಕ್ಕಿ ಜಲಾಶಯ ನೀರಿನಮಟ್ಟ 1801 ಅಡಿಗೆ ಏರಿದೆ. ಒಳಹರಿವು 1,89,000 ಕ್ಯೂಸೆಕ್‌ ಆಗಿರುತ್ತದೆ. ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರಿದರೆ ಜಲಾಶಯಮಟ್ಟ ಗರಿಷ್ಠ ಮಟ್ಟ ಮುಟ್ಟುವ ಸಂಭವ ಇರುತ್ತದೆ. ಗೇರಸೊಪ್ಪ ಅಣೆಕಟ್ಟಿನಲ್ಲಿಯೂ ಗರಿಷ್ಠ ನೀರು ತುಂಬಿದೆ. ವಿದ್ಯುತ್‌ ಉತ್ಪಾದನೆ ಸತತ ನಡೆದಿದೆ. ವಿದ್ಯುತ್‌ ಬೇಡಿಕೆ ಕುಸಿದರೆ, ಲಿಂಗನಮಕ್ಕಿ ತುಂಬಿದರೆ ನೀರು ಬಿಡುವ ಸಂಭವವಿದೆ. ಆದ್ದರಿಂದ ಶರಾವತಿಕೊಳ್ಳದ ಜನರು ಎಚ್ಚರಿಕೆ ವಹಿಸಬೇಕು. ನೀರಿನಮಟ್ಟ, ಒಳಹರಿವನ್ನು ಮಾಧ್ಯಮದ ಮುಖಾಂತರ ನಿತ್ಯ ತಿಳಿಸಲಾಗುವುದು ಎಂದು ಪ್ರವಾಹದ ಮೊದಲ ಮುನ್ಸೂಚನೆ ಕೆಪಿಸಿ ನೀಡಿದೆ. ನೀರು ಬಿಡುವ ಮೊದಲು ಇನ್ನೆರಡು ಸೂಚನೆ ಬರಲಿವೆ.
Advertisement

Udayavani is now on Telegram. Click here to join our channel and stay updated with the latest news.

Next