Advertisement

ಅವ್ಯವಸ್ಥೆ ಆಗರವಾದ ಮೀನು ಮಾರುಕಟ್ಟೆ

04:53 PM Apr 23, 2019 | Team Udayavani |
ಎನ್‌.ಆರ್‌.ಪುರ: ಪಟ್ಟಣ ವ್ಯಾಪ್ತಿಯ 10ನೇ ವಾರ್ಡ್‌ನ ಹಳೇಪೇಟೆಯಲ್ಲಿರುವ ಮೀನು ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದು, ಅಧಿಕಾರಿಗಳಿಂದಲೂ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದೆ.

ಕನಿಷ್ಠ ಮೂಲ ಸೌಕರ್ಯವನ್ನೂ ಒದಗಿಸುವಲ್ಲಿ ಪಟ್ಟಣ ಪಂಚಾಯತ್‌ ವಿಫಲವಾಗಿದೆ. ಎನ್‌.ಆರ್‌.ಪುರ ತಾಲೂಕಿನ ವ್ಯಾಪ್ತಿಯಲ್ಲಿ ಭದ್ರಾ ನದಿ ಹರಿಯುತ್ತಿದ್ದು,ಇದರಿಂದಾಗಿ ಮೀನುಗಾರಿಕೆಯೂ ಈ ಭಾಗದ ಪ್ರಮುಖ ಉದ್ಯೋಗವಾಗಿದೆ. ಈ ಮೀನುಗಳಿಗೆ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಹಳ ಬೇಡಿಕೆ ಇದೆ. ದೂರದ ಊರುಗಳಿಂದ ಮೀನುಗಳನ್ನು ಕೊಳ್ಳಲು ಪ್ರತಿದಿನ ನೂರಾರು ಜನರು ಮೀನು ಮಾರುಕಟ್ಟೆಗೆ ಆಗಮಿಸುತ್ತಾರೆ. ಇದನ್ನು ಮನಗಂಡು ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಹಿಂದಿನ ಪಟ್ಟಣ ಪಂಚಾಯತ್‌ ಆಡಳಿತ ಮಂಡಳಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಅಭಯಚಂದ್ರ ಜೈನ್‌ರವರ ಮೇಲೆ ಒತ್ತಡ ಎಂದು 60 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ದೂರಕಿತು.

Advertisement

ನಂತರ 2017ರಲ್ಲಿ ಅಂದಿನ ಮೀನುಗಾರಿಕಾ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಅವರು ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರೆವೇರಿಸಿ 6ತಿಂಗಳಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಿದ್ದರು. ನಂತರ ಕಾಮಗಾರಿ ಆಮೆಗತಿಯಲ್ಲಿ ಸಾಗಿ ಹಳೆಯ ಮೀನು ಮಾರುಕಟ್ಟೆಯನ್ನು ತೆರವುಗೊಳಿಸಿ ಹೊಸ ಮೀನುಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಆದರೆ ಕಾಮಗಾರಿ ಆರಂಭಗೊಂಡು 2 ವರ್ಷ ಪೂರೈಸುತ್ತ ಬಂದರೂ ಇನ್ನೂ ಕಾಮಗಾರಿ ಶುರುವಾಗುವ ಹಂತದಲ್ಲಿಯೇ ಇದೆ. ಪ್ರತಿದಿನ ಮೀನು ಮಾರುವ ಮಹಿಳೇಯರು ಸೇರಿದಂತೆ ಎಲ್ಲರೂ ಬಿಸಿಲಿನಲ್ಲಿ ಕುಳೀತು ಮೀನು ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಪಂಚಾಯತ್‌ ಸಹ ಈ ಮೀನು ಮಾರಾಟಗಾರರತ್ತ ಕಣ್ಣೇತ್ತಿ ನೋಡುತ್ತಿಲ್ಲ. ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ವ್ಯಾಪರಸ್ಥರು ಪರದಾಡಬೇಕಾಗಿದೆ. ಇದರಿಂದ ಮಾರುಕಟ್ಟೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪ್ರಶಾಂತ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next