Advertisement

ಬ್ಯಾಂಕ್‌ಗಳ ಅಸಹಕಾರ: ವಿದ್ಯಾರ್ಥಿ ವೇತನಕ್ಕೆ ಕತ್ತರಿ

06:47 AM Jan 25, 2019 | |

ಹುಣಸೂರು: ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪಿಸಲು ಬ್ಯಾಂಕ್‌ಗಳು ಶೂನ್ಯ ಖಾತೆ ತೆರೆಯಲು ಸಹಕರಿಸುತ್ತಿಲ್ಲ. ಹೀಗಾಗಿ ತಾಲೂಕಿನ ಇನ್ನೂ 7 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಬ್ಯಾಂಕ್‌ಗಳಿಗೆ ಮಾರ್ಗದರ್ಶನ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌ ತಿಳಿಸಿದರು.

Advertisement

ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ, ಮಾದರಿ ಪರೀಕ್ಷೆ ನಡೆಸುವುದು ಸೇರಿದಂತೆ ಅಗತ್ಯ ಕ್ರಮ ವಹಿಸಲಾಗಿದೆ. ವಿಶ್ವಾಸ ಕಿರಣ ಯೋಜನೆಯಡಿ ಹುಣಸೂರು ಮತ್ತು ಗುರುಪುರದಲ್ಲಿ ಪ್ರತಿ ಶನಿವಾರ ತರಬೇತಿ ನೀಡಲಾಗುತ್ತಿದೆ ಎಂದರು.

ಹಾಸ್ಟೆಲ್‌ ಅವ್ಯವಸ್ಥೆ: ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್‌ ಮಾತನಾಡಿ, ಹಾಸ್ಟೆಲ್‌ಗ‌ಳಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ಸಾಕಷ್ಟು ದೂರಿದ್ದು, ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಗಿರಿಜನ ಹಾಸ್ಟೆಲ್‌ನಲ್ಲಿ ಶೌಚಾಲಯದ ತೊಂದರೆ ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿದ್ದು, ಹಾಸ್ಟೆಲ್‌ ಅನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಮಂಜುಳಾ ತಿಳಿಸಿದರೆ, ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಈಗಾಗಲೇ ಸೋಲಾರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಬಂಧಿಸಿ ವಾರ್ಡನ್‌ ಹಾಗೂ ಮುಖ್ಯ ಅಡುಗೆಯವರಿಗೆ ಎಚ್ಚರಿಕೆಯ ನೋಟಿಸ್‌ ನೀಡಲಾಗಿದೆ ಎಂದು ಬಿಸಿಎಂ ಅಧಿಕಾರಿ ಶಿವಕುಮಾರ್‌ ಹೇಳಿದರು.

ಇನ್ನು ಮುಂದೆ ಹಾಸ್ಟೆಲ್‌ಗ‌ಳಿಗೆ ಆಗಾಗ ಭೇಟಿ ನೀಡುತ್ತಿರುತ್ತೇವೆ. ದೂರುಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್‌ ಎಚ್ಚರಿಸಿದರು.

Advertisement

ತಾಲೂಕಿನ ಎಲ್ಲಾ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಅಂತರ ನಿಲಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸುವ ಮೂಲಕ ಸಾಮರಸ್ಯ ಬೆಸೆಯ ಬೇಕೆಂದು ತಾಪಂ ಇಒ ಕೃಷ್ಣಕುಮಾರ್‌ ತಿಳಿಸಿದರು.

ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ನ್ಯಾಯಬೆಲೆ ಅಂಗಡಿಗಳ ಮೂಲಕ ಜನರಿಗೆ ಸಮಗ್ರ ಮಾಹಿತಿ ನೀಡಲು ಕ್ರಮವಹಿಸಲಾಗಿದೆ ಎಂದರು.

ತಾಲೂಕಿನಲ್ಲಿ19 ಕ್ಷಯರೋಗಿಗಳು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ ತಾಲೂಕಿನಲ್ಲಿ ಮೂರು ನವಜಾತ ಶಿಶುಗಳು ಮರಣಹೊಂದಿವೆ ಎಂದು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್‌ ತಿಳಿಸಿದರು.

ಸಮಗ್ರ ಮಾಹಿತಿ: ಜಾತ್ರೆಗಳಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಿ, ಅಲ್ಲಿ ಸರಕಾರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಅವರಿಗೆ ಅಧ್ಯಕ್ಷರು ಸೂಚಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next