Advertisement

ವಿರೋಧದ ನಡುವೆಯೂ ಡಿಸ್ನಿಲ್ಯಾಂಡ್‌ ನಿರ್ಮಾಣ

04:20 PM Dec 10, 2018 | Team Udayavani |

ಮಂಡ್ಯ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್‌ ಬೇಕೆ? ಬೇಡವೇ ಎಂಬ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ತಜ್ಞರು, ವಿವಿಧ ಸಂಘಟನೆಗಳು, ಚಿಂತಕರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರ ವಿರೋಧದ ನಡುವೆಯೂ ಯೋಜನೆಯನ್ನು ಜಾರಿಗೆ ತರುವ ಹಠಕ್ಕೆ ಬಿದ್ದಿದೆ.

Advertisement

ಕೆಆರ್‌ಎಸ್‌ ಒಂದು ನಿರ್ಬಂಧಿತ ಪ್ರದೇಶ. ಅಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರನ್ನು ಆಹ್ವಾನ ಮಾಡುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಅಣೆಕಟ್ಟೆಗೆ ಅಪಾಯ ಎದುರಾಗುವ ಆತಂಕವಿದೆ. ಇದನ್ನು ಆಳುವವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಆದಾಯ ಮೂಲವನ್ನು ಗುರಿಯಾಗಿಸಿಕೊಂಡು ಅಣೆಕಟ್ಟೆ ಭದ್ರತೆಗೆ ಕಂಟಕ ತರುವ ಯೋಜನೆಯನ್ನು ಸರ್ಕಾರ ರೂಪಿಸಿ ಜಾರಿಗೊಳಿಸುವುದಕ್ಕೆ ಹೊರಟಿದೆ ಎನ್ನುವುದು ಹಲವು ತಜ್ಞರ ವಾದವಾಗಿದೆ.
 
ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಜಾರಿಗೊಳಿಸಲು ರಾಜ್ಯಸರ್ಕಾರ ಮುಂದಾಗಿದೆ. ಯೋಜನೆಯಿಂದ 50 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಸುತ್ತಮುತ್ತಲ ಜನರು ವ್ಯಾಪಾರ ವಹಿವಾಟಿಗೆ ಅನುಕೂಲವಾಗಿ ಆರ್ಥಿಕ ಸದೃಢತೆ ಸಾಧಿಸಬಹುದು ಎನ್ನುವುದು ಸರ್ಕಾರದ ವಾದ.

ಪ್ರವಾಸಿಗರನ್ನು ತಡೆಯಲು ಸಿಐಎಸ್‌ಎಫ್ ಪತ್ರ: ಕೃಷ್ಣರಾಜಸಾಗರ ಜಲಾಶಯದ ಮೇಲೆ ಉಗ್ರರ ಕಣ್ಣು ನೆಟ್ಟಿದೆ. ಭಯೋತ್ಪಾದಕರಿಂದ ಅಣೆಕಟ್ಟೆಗೆ ಅಪಾಯ ಎದುರಾಗಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಕೈಗಾರಿಕಾ ಭದ್ರತಾ ಪಡೆಯನ್ನು ಭದ್ರತೆಗೆ ನಿಯೋಜಿಸಿರುವುದಲ್ಲದೆ, ಅಣೆಕಟ್ಟೆಯ ಮೇಲೆ ಹೈಟೆಕ್‌- ಸೆಕ್ಯುರಿಟಿ ಮೂಲಕ ಹದ್ದಿನ ಕಣ್ಣಿಡಲಾಗಿದೆ. ಕೆಆರ್‌ಎಸ್‌ಗೆ ಬರುವ ಪ್ರವಾಸಿಗರನ್ನೂ ತಪಾಸಣೆಗೊಳಪಡಿಸಿಯೇ ಒಳಬಿಡಲಾಗುತ್ತಿದೆ.

ಈ ನಡುವೆ ಮೈಸೂರು ದಸರಾ ಸಮಯದಲ್ಲಿ ಕೆಆರ್‌ಎಸ್‌ನತ್ತ ಬರುತ್ತಿರುವ ಪ್ರವಾಸಿಗರನ್ನು ತಡೆಯುವುದಕ್ಕೆ ಕೈಗಾರಿಕಾ ಭದ್ರತಾ ಪಡೆಯವರು ಹರಸಾಹಸ ನಡೆಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಕೆಆರ್‌ಎಸ್‌ ವೀಕ್ಷಣೆಗೆ ಬರುವ ಜನರನ್ನು ನಿಯಂತ್ರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿದೆ. ಇದರ ನಡುವೆ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಜಾರಿಗೊಳಿಸಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೆತರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ತಜ್ಞರು ಮುಂದಿಡುತ್ತಿರುವ ಪ್ರಶ್ನೆಯಾಗಿದೆ.

ಖಾಸಗಿಯವರ ನಿಯಂತ್ರಣ ಕಷ್ಟ: ಡಿಸ್ನಿಲ್ಯಾಂಡ್‌ ಯೋಜನೆ ಸಂಪೂರ್ಣ ಖಾಸಗಿಯವರಿಂದ ನಿರ್ಮಿಸಲಾಗುವುದು ಸರ್ಕಾರ ಒಂದು ರೂಪಾಯಿ ಹಣವನ್ನೂ ಖರ್ಚು ಮಾಡುತ್ತಿಲ್ಲ. ಭೂಮಿ ಮಾತ್ರ ಸರ್ಕಾರದ್ದು ಎಂದು ಹೇಳಲಾಗುತ್ತಿದೆ. 50 ರಿಂದ 60 ವರ್ಷ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಬಹುದು. ಅವರ ಮೇಲೆ ಸರ್ಕಾರ ಯಾವ ರೀತಿ ನಿಯಂತ್ರಣವನ್ನಿಟ್ಟುಕೊಳ್ಳಲು ಸಾಧ್ಯ, ಹೊರಗಿನಿಂದ ಇಲ್ಲಿಗೆ ಬರುವವರನ್ನು ನಿಯಂತ್ರಿಸುವುದಾದರೂ ಹೇಗೆ ಎನ್ನುವುದು ಎಲ್ಲರನ್ನೂ ಕಾಡುತ್ತಿದೆ. 

Advertisement

ಅಣೆಕಟ್ಟೆಗೆ ಅಪಾಯದ ಆತಂಕ: ಪ್ರತಿಮೆಯ ಜೊತೆಯಲ್ಲೇ ವೀಕ್ಷಣಾ ಗೋಪುರ ನಿರ್ಮಾಣವೂ ಯೋಜನೆಯೊಳಗೆ ಅಡಕವಾಗಿದೆ. ಪ್ರತಿಮೆ ಮತ್ತು ವೀಕ್ಷಣಾ ಗೋಪುರ ನಿರ್ಮಾಣವಾಗಬೇಕಾದರೆ ಸುಮಾರು 30 ರಿಂದ 40 ಅಡಿ ಆಳ ತೆಗೆಯಬೇಕು. ಆಗ ಒಳಗಿರುವ ಕಲ್ಲು-ಬಂಡೆಗಳನ್ನು ತೆಗೆಯಲೇಬೇಕು. ಕೆಆರ್‌ಎಸ್‌ ಬಳಿಯೇ ಪ್ರತಿಮೆ ಹಾಗೂ ವೀಕ್ಷಣಾ ಗೋಪುರ ನಿರ್ಮಾಣವಾಗುವು ದರಿಂದ ಅಣೆಕಟ್ಟೆಗೆ ಅಪಾಯ ಉಂಟಾಗಲಿದೆ ಎನ್ನುವುದು ಹಲವು ತಜ್ಞರ ಅಭಿಪ್ರಾಯವಾಗಿದೆ. ರಾಜ್ಯಸರ್ಕಾರ ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿ ಕಲ್ಲು-ಬಂಡೆಗಳನ್ನು
ಕತ್ತರಿಸಿ ಅಣೆಕಟ್ಟೆಗೆ ಯಾವುದೇ ಅಪಾಯವಾಗದಂತೆ ತೆಗೆಯಲಾಗುವುದು ಎಂದು ಹೇಳುತ್ತಿದ್ದರೆ, ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿದರೂ ಕಲ್ಲನ್ನು ಸೀಳುವ ಸಮಯದಲ್ಲಿ ಉಂಟಾಗುವ ಶಬ್ಧ ತರಂಗ (ವೈಬ್ರೇಷನ್‌)ಗಳಿಂದ ಅಣೆಕಟ್ಟು ಕಲ್ಲಿಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ಈ ಸಂಕಷ್ಟದ ನಡುವೆ ಕೆಆರ್‌ಎಸ್‌ ಬಳಿಯೇ ಯೋಜನೆ ಜಾರಿಗೆ ಸರ್ಕಾರ ಹಠ ಬಿದ್ದಿರುವುದೇಕೆ. ಅಣೆಕಟ್ಟೆಯಿಂದ 20-30 ಕಿ.ಮೀ. ದೂರದಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಜಾರಿಗೆ ತರಲಿ. ಅದರ ಸನಿಹವಂತೂ ಬೇಡವೇ ಬೇಡ ಎನ್ನುವುದು ಪ್ರಗತಿಪರರು, ಚಿಂತಕರ ವಾದವಾಗಿದೆ.
 
ಯೋಜನೆಗೆ ಅಗತ್ಯವಿರುವಷ್ಟು ಭೂಮಿ ಇಲ್ಲ: ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಒಳಗೊಂಡಿರುವ ನೀಲಿ ನಕಾಶೆಯನ್ನು ನೋಡಿದರೆ, ಅದರೊಳಗೆ ಬರುವ ರೂಪುಗೊಳ್ಳುವ ಕಾರ್ಯಯೋಜನೆಗಳನ್ನು ಗಮನಿಸಿದರೆ ಇದು 250 ರಿಂದ 350 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುವುದು ಅಸಾಧ್ಯದ ಮಾತು. ಕನಿಷ್ಠವೆಂದರೂ 700 ರಿಂದ 800 ಎಕರೆಯಷ್ಟು ಪ್ರದೇಶ ಬೇಕಾಗುತ್ತದೆ. ಈ ವಿಷಯವನ್ನು ಸರ್ಕಾರ ಮರೆಮಾಚುತ್ತಿದೆ. 

ಕೊನೆಯಲ್ಲಿ ಸುತ್ತಮುತ್ತ ವಾಸಿಸುತ್ತಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಮುಂದಾಗಬಹುದು. ಜನರನ್ನು ಒಕ್ಕಲೆಬ್ಬಿಸುವ ಆತಂಕ ಮಾತ್ರ ತಪ್ಪಿದ್ದಲ್ಲ ಎಂಬುದು ಯೋಜನೆಯ ರೂಪು-ರೇಷೆಗಳನ್ನು ವಿಶ್ಲೇಷಣೆ ಮಾಡಿರುವವರು ಹೇಳುವ ಮಾತಾಗಿದೆ.

ರಾಜ್ಯಸರ್ಕಾರ ಯೋಜನೆಗೆ ಅಗತ್ಯವಿರುವಷ್ಟು ಭೂಮಿ ನಮ್ಮಲ್ಲಿದೆ ಎಂದು ಹೇಳುತ್ತಿದೆ. ವಾಸ್ತವದಲ್ಲಿ ಅಷ್ಟೊಂದು ಪ್ರಮಾಣದ ಸರ್ಕಾರಿ ಭೂಮಿ ಕೆಆರ್‌ ಎಸ್‌ ಸುತ್ತಮುತ್ತ ಇಲ್ಲ. ಯೋಜನೆಯೊಳಗೆ ರೂಪಿಸಿರುವ ಕಾರ್ಯಯೋಜನೆಗಳು ಅನುಷ್ಠಾನಕ್ಕೆ ತರಬೇಕಾದರೆ ಗ್ರಾಮಗಳನ್ನು ಸ್ಥಳಾಂತರ
ಮಾಡಲೇಬೇಕು. ಆರಂಭದಲ್ಲಿ ಜನರು ಯೋಜನೆಗೆ ಅಡ್ಡಿಪಡಿಸಬಹುದು ಎಂಬ ಕಾರಣಕ್ಕೆ ಸರ್ಕಾರ ಈ ಸತ್ಯವನ್ನು ಮರೆಮಾಚುತ್ತಿದೆ ಎಂದು ಹೇಳಲಾಗುತ್ತಿದೆ. 

ಈ ಯೋಜನೆಯನ್ನು ಜಾರಿಗೆ ತರಬೇಕಾದರೆ ಪ್ರಮುಖವಾಗಿ ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿಯ ಒಪ್ಪಿಗೆಯನ್ನು ಪಡೆಯಬೇಕು. ಸರ್ಕಾರ ಇನ್ನೂ ಅಲ್ಲಿಯವರೆಗೂ ಮುಂದಾಗಿಲ್ಲ. ಕೇಂದ್ರದ ಗಮನಕ್ಕೆ ತಾರದೆ ಸರ್ಕಾರ ಯೋಜನೆಯ ರೂಪು-ರೇಷೆಗಳನ್ನು ತಯಾರಿಸಿ ಜಾರಿಗೆ ಸಿದ್ಧವಾಗುತ್ತಿದೆ. ಡಿಸ್ನಿಲ್ಯಾಂಡ್‌ ಯೋಜನೆ ವಿಚಾರ ಕೇಂದ್ರ ಸರ್ಕಾರದ ಗಮನಕ್ಕೆ ಬಂದಲ್ಲಿ ಅದನ್ನು ತಿರಸ್ಕರಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾವೇರಿ ನದಿ ದಂಡೆಯಲ್ಲಿ ನಿರ್ಮಿಸಿ
ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಪ್ರತಿಮೆಯನ್ನು ನರ್ಮದಾ ನದಿ ದಂಡೆಯ ಮೇಲೆ ನಿರ್ಮಾಣ ಮಾಡಿರುವಂತೆ ಕಾವೇರಿ ನದಿ ತೀರವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಪ್ರತಿಮೆ, ಗೋಪುರ ಸೇರಿದಂತೆ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆಯನ್ನು ನಿರ್ಮಾಣ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಕೃಷ್ಣರಾಜ ಸಾಗರ ಜಲಾಶಯದ ಬಳಿಯೇ ನಿರ್ಮಾಣ ಮಾಡುತ್ತೇವೆ ಎನ್ನುವುದು ಒಪ್ಪತಕ್ಕ ವಿಚಾರವಲ್ಲ ಎನ್ನುವುದು ಪರಿಸರವಾದಿಗಳ ವಾದವಾಗಿದೆ.

ಡಿಸ್ನಿಲ್ಯಾಂಡ್‌ಗೆ ಜೆಡಿಎಸ್‌ನಲ್ಲೇ ಅಪಸ್ವರ
ಡಿಸ್ನಿಲ್ಯಾಂಡ್‌ ಯೋಜನೆ ಜಾರಿ ಬಗ್ಗೆ ಜೆಡಿಎಸ್‌ ಪಕ್ಷದಲ್ಲೇ ಅಪಸ್ವರವಿದೆ. ಈ ಯೋಜನೆಯನ್ನು ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಜಾರಿಗೊಳಿಸುತ್ತಿರುವ ಬಗ್ಗೆ ಶ್ರೀರಂಗಪಟ್ಟಣ ಕ್ಷೇತ್ರದ ಸ್ಥಳೀಯ ಶಾಸಕರಲ್ಲೇ ಅಸಮಾಧಾನವಿದೆ. ಸಾವಿರಾರು ರೂ. ಕೋಟಿ ವೆಚ್ಚದ ಯೋಜನೆ ಕ್ಷೇತ್ರದಲ್ಲಿ ಜಾರಿಗೊಳಿಸಲು ಮುಂದಾಗಿರುವ ಸರ್ಕಾರ ಯೋಜನೆಯ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸದಿರುವುದೇ ಬೇಸರಕ್ಕೆ ಕಾರಣ ಎನ್ನಲಾಗಿದೆ. ಸರ್ಕಾರಿ ಅಧಿಕಾರಿಗಳೂ ಆ ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿಲ್ಲವೆಂಬ ಅಸಮಾಧಾನವನ್ನೂ ಅವರು ತೋಡಿಕೊಂಡಿದ್ದಾರೆ. ಯೋಜನೆ ಜಾರಿ ಮಾಡುವ ವಿಷಯದಲ್ಲಿ ಸ್ಥಳೀಯ ಶಾಸಕರನ್ನು ನಿರ್ಲಕ್ಷ್ಯ ಮಾಡಲಾಗು ತ್ತಿದೆಯೇ ಎಂಬ ಅನುಮಾನಗಳು ಮೂಡಿವೆ. ಇದೇ ಕಾರಣಕ್ಕೆ ಸ್ಥಳೀಯ ಶಾಸಕರು ಜಿಲ್ಲೆಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳಿಗೆ ಗೈರಾಗುತ್ತಿರು ವುದು ಎದ್ದು ಕಾಣುತ್ತಿದೆಂದೂ ಹೇಳಲಾಗುತ್ತಿದೆ. 

ಇದೊಂದು ಸೂಕ್ಷ್ಮ ವಿಚಾರ. ಸದ್ಯಕ್ಕೆ ಆ ವಿಷಯವಾಗಿ ಏನನ್ನೂ ಮಾತನಾಡುವುದಿಲ್ಲ, ಬೆಳಗಾವಿ ಅಧಿವೇಶನ ಮುಗಿಸಿ ಕೊಂಡು ಬಂದು ವಿವರವಾಗಿ ಹೇಳುತ್ತೇನೆ.
 ರವೀಂದ್ರ ಶ್ರೀಕಂಠಯ್ಯ, ಶಾಸಕ 

ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಹಾಗೂ ಪ್ರತಿಮೆ, ವೀಕ್ಷಣಾ ಗೋಪುರವನ್ನು ಕೆಆರ್‌ಎಸ್‌ ಬಳಿ ನಿರ್ಮಾಣ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ. ಇದೊಂದು ನಿರ್ಬಂಧಿತ ಪ್ರದೇಶ. ಆ ಪ್ರದೇಶದಲ್ಲೇ ನೀವು ಲಕ್ಷಾಂತರ ಜನರನ್ನು ಆಕರ್ಷಿಸುವ ಯೋಜನೆ ಜಾರಿಗೊಳಿಸುತ್ತೇವೆ ಎನ್ನುವ ಸರ್ಕಾರಕ್ಕೆ
ಸಾಮಾನ್ಯ ಜ್ಞಾನವಿಲ್ಲವೇ. ಬೇರೆ ಎಲ್ಲಾದರೂ ಈ ಯೋಜನೆಯನ್ನು ಕಾರ್ಯಗತಗೊಳಿಸಲಿ. ಆದರೆ, ಕೆಆರ್‌ಎಸ್‌ ಭದ್ರತೆ ದೃಷ್ಟಿಯಿಂದ ಆ ಜಾಗದಲ್ಲಿ ನಿರ್ಮಾಣ ಮಾಡುವುದಕ್ಕೆ ವಿರೋಧವಿದೆ.
 ಎಂ.ಲಕ್ಷ್ಮಣ್‌, ಸಂಚಾಲಕರು, ಕಾವೇರಿ ತಾಂತ್ರಿಕ ಸಲಹಾ ಸಮಿತಿ

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕೆಆರ್‌ಎಸ್‌ ಬಳಿ ಯಾರು ಎಷ್ಟೇ ವಿರೋಧ ಮಾಡಿದರೂ ಡಿಸ್ನಿಲ್ಯಾಂಡ್‌ ನಿರ್ಮಿಸಲಾಗುತ್ತದೆ. ಅಣೆಕಟ್ಟೆಗೆ ತೊಂದರೆಯಾಗದಂತೆ, ರೈತರ ಜಮೀನು ವಶಪಡಿಸಿಕೊಳ್ಳದಂತೆ, ಸರ್ಕಾರದ ಜಾಗದಲ್ಲೇ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಡಿಸ್ನಿಲ್ಯಾಂಡ್‌ ನಿರ್ಮಿಸಲಾಗುವುದು. 50 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ. 
 ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಸಚಿವ

ಕೃಷ್ಣರಾಜಸಾಗರವನ್ನು ಉಳಿಸುವುದಕ್ಕಿಂತ ಹೆಚ್ಚಾಗಿ ಅದಕ್ಕೆ ಅಪಾಯ ತರುವುದಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈಗಾಗಲೇ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟೆಯ ಸುರಕ್ಷತೆ ಪರಿಶೀಲಿಸುವಂತೆ ಹಾಗೂ ಅಣೆಕಟ್ಟೆ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸಲಹೆ ನೀಡಿದೆ. ಅದಾವುದನ್ನೂ ಪರಿಗಣಿಸದ ಸರ್ಕಾರ ಡಿಸ್ನಿಲ್ಯಾಂಡ್‌ ಯೋಜನೆ ಜಾರಿಗೆ ಆಸಕ್ತಿ ತೋರುತ್ತಿರುವುದು ಎಷ್ಟಮಟ್ಟಿಗೆ ಸರಿ.
 ಕೆ.ಆರ್‌.ರವೀಂದ್ರ, ಸಾಮಾಜಿಕ ಹೋರಾಟಗಾರ

 ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next