Advertisement

ಇ-ಶೌಚಾಲಯ ಬಳಕೆಗೆ ನಿರಾಸಕ್ತಿ

11:13 AM Nov 29, 2019 | Suhan S |

ಹುಬ್ಬಳ್ಳಿ: ಸಾರ್ವಜನಿಕ ಶೌಚಾಲಯಗಳನ್ನು ಬದಲಿಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಹೊಸ ಇ-ಶೌಚಾಲಯಗಳು ಸಮರ್ಪಕವಾಗಿ ಬಳಕೆಯಾಗದೇ ಹಲವೆಡೆ ಪ್ರಯೋಜನಕ್ಕೆ ಬಾರದಂತಾಗಿವೆ.

Advertisement

ಈಗಾಗಲೇ ಗೋಕುಲ ರಸ್ತೆ ಅಕ್ಷಯ ಪಾರ್ಕ್‌ ಬಸ್‌ ನಿಲ್ದಾಣ ಬಳಿ 2, ಹೊಸೂರು-ಉಣಕಲ್ಲ ಬೈಪಾಸ್‌ ರಸ್ತೆ ಬಳಿ 2, ಇಂದಿರಾ ಗಾಜಿನ ಮನೆ ಉದ್ಯಾನವನ ಆವರಣದಲ್ಲಿ 2, ಸಿಬಿಟಿಯಲ್ಲಿ 1 ಅಂಗವಿಕಲರಿಗಾಗಿ, ದಾಜಿಬಾನ ಪೇಟೆಯಲ್ಲಿ 2, ಕಮರಿಪೇಟೆಯಲ್ಲಿ 2, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ 2, ಜೆ.ಸಿ.ನಗರದಲ್ಲಿ 2 ಹೀಗೆ ನಗರದಲ್ಲಿ ಸುಮಾರು 15 ಇ-ಶೌಚಾಲಯ ನಿರ್ಮಿಸಲಾಗಿದ್ದು, ಅದರಲ್ಲಿ ಕೆಲವು ಮಾತ್ರ ಬಳಕೆಯಾಗುತ್ತಿವೆ.

ನಾಣ್ಯ ಬಳಕೆಗೆ ಹಿಂದೇಟು: ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ನಿರ್ಮಿಸಿರುವ ಇ-ಶೌಚಾಲಯಗಳನ್ನು ನಾಣ್ಯ ಹಾಕಿ ಬಳಸಬೇಕಿರುವುದರಿಂದ ಶೌಚಾಲಯ ಪಕ್ಕದಲ್ಲೇ ಮೂತ್ರ ವಿಸರ್ಜಿಸುವ ಮೂಲಕ ಸಾರ್ವಜನಿಕರು ಇಡೀ ಪ್ರದೇಶವನ್ನು ಗಬ್ಬೆಬ್ಬಿಸಿದ್ದಾರೆ. ನಾಣ್ಯ ಬಳಕೆ ಮಾಡದಿದ್ದರೆ ಶೌಚಾಲಯ ಬಾಗಿಲು ತೆರೆಯಲ್ಲ. ಹಣ ಉಳಿಸಲು ಜನರು ಹೊರಗಡೆಯೇ ಮೂತ್ರ ವಿಸರ್ಜಿಸುತ್ತಾರೆ.

ದುರುಪಯೋಗ ಹೇಗೆ?: ಇನ್ನು ಇ-ಶೌಚಾಲಯ ಬಳಸಲು ಕೆಲವರು ನಾಣ್ಯದ ಬದಲಾಗಿ ಕಬ್ಬಿಣದ ತುಣುಕುಗಳನ್ನು ಹಾಕುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವರು ಇಂದಿರಾಗಾಜಿನ ಮನೆ ಉದ್ಯಾನವನ ಆವರಣದಲ್ಲಿರುವ ಇ-ಶೌಚಾಲಯಗಳಲ್ಲಿ ಒಂದೇ ನಾಣ್ಯದಲ್ಲಿ ಹಲವರು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಇ-ಶೌಚಾಲಯದಲ್ಲಿ ನಾಣ್ಯ ಹಾಕಿ ಬಳಕೆ ಮಾಡಿ ಬಾಗಿಲು ಮುಚ್ಚಿದ ನಂತರ ಅದು ಫ್ಲೆಶ್ ಆಗಿ ಸಚ್ಛಗೊಳ್ಳುತ್ತದೆ. ಆದರೆ ಬೆಳಿಗ್ಗೆ ವಾಯುವಿಹಾರಕ್ಕೆಂದು ಆಗಮಿಸುವವರು. ಬಾಗಿಲು ಮುಚ್ಚದೇ, ಒಬ್ಬರಾದ ಮೇಲೆ ಒಬ್ಬರು ಅದನ್ನು ಬಳಸಿಕೊಳ್ಳುವ ಮೂಲಕ ದುರುಪಯೋಗ ಮಾಡುತ್ತಿದ್ದಾರೆ. ಇದರಿಂದ ಸೆನ್ಸಾರ್‌ ಬಳಕೆ ಇರುವ ಬಾಗಿಲುಗಳು ಪದೇ ಪದೇ ಹಾಳಾಗುತ್ತಿವೆ. ಮತ್ತೆ ಸಿಬ್ಬಂದಿ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ.

ಸಾರ್ವಜನಿಕರ ಶೌಚಾಲಯ ಕಾಣೆ: ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಈ ಹಿಂದೆ ಇದ್ದ ಸಾರ್ವಜನಿಕ ಮೂತ್ರಾಲಯಗಳನ್ನು ತೆಗೆದು ಹಾಕಲಾಗುತ್ತಿದೆ. ಈ ಹಿಂದೆ ದೇಶಪಾಂಡೆ ನಗರದ ವೃತ್ತದಲ್ಲಿದ್ದ ಸಾರ್ವಜನಿಕ ಮೂತ್ರಾಲಯವನ್ನು ನವೀಕರಣ ನೆಪದಲ್ಲಿ ತೆಗೆದು ಹಾಕಲಾಯಿತು. ನಂತರ ಹೊಸ ಮೂತ್ರಾಲಯ ನಿರ್ಮಿಸಿ ಅದರ ಉದ್ಘಾಟನೆಯ ಮುನ್ನವೇ ಹೊಸದಾಗಿ ನಿರ್ಮಿಸಿದ್ದ ಸಾರ್ವಜನಿಕ ಮೂತ್ರಾಲಯವನ್ನು ರಸ್ತೆ ನಿರ್ಮಾಣದ

Advertisement

ನೆಪದಲ್ಲಿ ಸಂಪೂರ್ಣ ನೆಲಸಮ ಮಾಡಲಾಯಿತು. ಅದೇ ರೀತಿ ಜೆ.ಸಿ.ನಗರದ ಕೋಯಿನ್‌ ರಸ್ತೆ ವೃತ್ತದಲ್ಲಿದ್ದ ಸಾರ್ವಜನಿಕ ಮೂತ್ರಾಲಯ ನೆಲಸಮ ಮಾಡಿ ವರ್ಷಗಳೇ ಗತಿಸಿವೆ. ಅಲ್ಲಿ ಶೌಚಾಲಯ ಡಬ್ಬಿ ಇಡಲಾಗಿತ್ತು. ಇದೀಗ ಅದು ಕೂಡಾ ಕಣ್ಮರೆಯಾಗಿದೆ. ಇದೇ ರೀತಿ ನಗರದ ಹಲವಡೆ ನಡೆದಿದೆ.

ಏನಿದು ಇ-ಶೌಚಾಲಯ? : ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸ್ಮಾರ್ಟ್‌ ಸಿಟಿ ಯೋಜನೆಯಡಿ ಲಕ್ಷಾಂತರ ರೂ.ವ್ಯಯಿಸಿ ಸ್ವಯಂ ಚಾಲಿತ ಇ-ಶೌಚಾಲಯ ನಿರ್ಮಿಸಿದೆ. ಈ ಶೌಚಾಲಯಗಳು ಸೆನ್ಸಾರ್‌ ಮೇಲೆ ಕಾರ್ಯ ನಿರ್ವಹಿಸುತ್ತವೆ. ನಾಣ್ಯ ಹಾಕಿದ ತಕ್ಷಣ ಬಾಗಿಲು ತೆರೆಯುತ್ತದೆ. ಬಳಕೆ ಮಾಡಿ ಬಾಗಿಲು ಮುಚ್ಚಿದ ಬಳಿಕ ಫ್ಲಶ್ ಆಗಿ ಸ್ವಚ್ಛವಾಗುತ್ತದೆ. ಓವರ್‌ ಹೆಡ್‌ ಟ್ಯಾಂಕ್‌ನಿಂದ ನೀರು ಪೂರೈಕೆಯಾಗುತ್ತದೆ. ಶೌಚಾಲಯದೊಳಗೆ ಹೋಗಿದ್ದಾರೆ ಎಂಬುದನ್ನು ಸೂಚಿಸಲು ಕೆಂಪು ದೀಪ ಉರಿಯುತ್ತದೆ. ಹಸಿರು ದೀಪ ಬಳಸಬಹುದು ಎಂಬುದನ್ನು ಸೂಚಿಸುತ್ತದೆ.

ಅವಳಿನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇ-ಶೌಚಾಲಯ ನಿರ್ಮಿಸಿದ್ದು, ಸಾರ್ವಜನಿಕರು ಬಳಸದೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜೆ.ಸಿ.ನಗರದಲ್ಲಿರುವ ಇ-ಶೌಚಾಲಯ ಬಳಸಿಕೊಳ್ಳದೇ, ಹೊರ ಭಾಗದಲ್ಲಿ ಮೂತ್ರ ವಿಸರ್ಜಿಸುತ್ತಿರುವುದು ಸರಿಯಲ್ಲ. ಇನ್ನು ಇಂದಿರಾ ಗಾಜಿನ ಮನೆ ಆವರಣದಲ್ಲೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ತಿಳಿದು ಮುನ್ನಡೆಯಬೇಕು. ಇಲ್ಲವಾದಲ್ಲಿ ಮತ್ತೇ ಹಳೇ ಸ್ಥಿತಿಗೆ ಬರಬೇಕಾದೀತು. ಎಸ್‌.ಎಚ್‌.ನರೇಗಲ್ಲ, ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್‌ ಸಿಟಿ ಕಂಪನಿ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next