Advertisement

ಸಚಿವರಿಂದ ರಹಸ್ಯ ಕಡತ ವಿಲೇವಾರಿ

06:55 AM Mar 29, 2018 | Team Udayavani |

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿ ನೀತಿ ಸಂಹಿತೆ ಜಾರಿಗೆ ಬಂದನಂತರವೂ “ಕಡತ ವಿಲೇವಾರಿ ‘ ರಹಸ್ಯವಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ.ಹಳೆಯ ದಿನಾಂಕಗಳನ್ನು ನಮೂದಿಸಿ ಸರ್ಕಾರಿ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisement

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್‌, ಇಂಧನ ಸಚಿವ ಡಿ.ಕೆ ಶಿವಕುಮಾರ್‌, ನಗರಾಭಿವೃದ್ಧಿ ಸಚಿವ ರೋಷನ್‌  ಬೇಗ್‌, ಸಮಾಜ ಕಲ್ಯಾಣ ಸಚಿವ ಎಚ್‌ ಆಂಜನೇಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ಸಚಿವರುಗಳು ಅಧಿಕಾರಿಗಳ ಸಭೆ ನಡೆಸಿ ತಮ್ಮ ಇಲಾಖೆಗೆ ಸಂಬಂಧಿಸಿದ ಕೋಟ್ಯಾಂತರ ರೂಪಾಯಿಗಳ ಯೋಜನೆಗಳ ಬಾಕಿಯಿರುವ ಅಭಿವೃದ್ಧಿ ಕಾಮಗಾರಿಗೆ ಗುಪ್ತವಾಗಿ ಸರ್ಕರಿ ಆದೇಶ ಜಾರಿ ಮಾಡಿಸಿದ್ದಾರೆನ್ನಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಸಹ ಗೌಪ್ಯವಾಗಿ ಕಡತಗಳ ವಿಲೇವಾರಿಯು ಶಕ್ತಿ ಕೇಂದ್ರಗಳಾದ ವಿದಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಮತ್ತು ಕೆಲವು ಸಚಿವರ ನಿವಾಸದಲ್ಲಿ ನಡೆದಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಸಚಿವರ ಜತೆ ಉತ್ತಮ ಬಾಂಧವ್ಯ ಹೊಂದಿದ ಉನ್ನತ ಅಧಿಕಾರಿಗಳು ನೀತಿ ಸಂಹಿತೆ ಜಾರಿಯಾದರೂ ಕಾನೂನಿನ ಲೋಪವಾಗದಂತೆ ಕಡತ ವಿಲೇವಾರಿ ಮಾಡಿದರೆ, ಬಹಳಷ್ಟು ಅಧಿಕಾರಿಗಳು ಸಚಿವರ ಕೈಗೆ ಸಿಗದೇ ತಪ್ಪಿಸಿಕೊಂಡು ಓಡಾಡಿದ್ದಾರೆಂದು ಗೊತ್ತಾಗಿದೆ. ಸಭೆಗೆ ಕರೆದರೂ ಸಬೂಬು ಹೇಳಿಕೊಂಡು ಜಾಣತನದಿಂದ ಕಡತ ವಿಲೇವಾರಿ ಮಾಡಲು ನಿರಾಕರಿಸಿದ್ದಾರೆಂದು ಹೇಳಲಾಗುತ್ತಿದೆ.

ಬಿಬಿಎಂಪಿಯ ಯೋಜನೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಸಚಿವ ಜಾರ್ಜ್‌ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಹಲವಾರು ಯೋಜನೆಗಳ ಜಾರಿ ಕುರಿತು ಸರ್ಕಾರಿ ಆದೇಶ ಹೊರಡಿಸಲು ಸೂಚಿಸಿದ್ದಾರೆಂದು ತಿಳಿದುಬಂದಿದೆ.ಸಚಿವರ, ಮೇಯರ್‌ ಅವರ ಸೂಚನೆಯಂತೆ ಸುಮಾರು ನೂರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

Advertisement

ಸಾಮಾನ್ಯ ಸಂಗತಿ :
ವಿಧಾನಸಭೆ ಚುನಾವಣೆ ಘೋಷಣೆಯಾದಾಗ ಹಾಗು ಸಚಿವರ, ಮುಖ್ಯಮಂತ್ರಿಗಳ ಅಧಿಕಾರ ಕೊನೆಗೊಂಡಾಗ ರಹಸ್ಯವಾಗಿ ಕಡತ ವಿಲೇವಾರಿ ಮಾಡಿ ಅದಕ್ಕೆ ಹಿಂದಿನ ದಿನಾಂಕ ನಮೂದಿಸುವುದು ಸಾಮಾನ್ಯ ಸಂಗತಿ ಎನ್ನುವುದು ಪ್ರಚಲಿತದಲ್ಲಿರುವ ಮಾತು. ಒಂದು ವೇಳೆ ತಪ್ಪೆಸಗಿರುವ ಕಡತವೇನಾದರೂ ಪತ್ತೆಯಾದಲ್ಲಿ ಮಾತ್ರ ಅದು ರದ್ದಾಗುತ್ತದೆ.

ದಿನ ನಿತ್ಯದ ಆಡಳಿತಕ್ಕೆ ಸಂಬಂಧಿಸಿದಂತೆ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಚಿವರು ಅದಿಕಾರಿಗಳ ಸಭೆ ನಡೆಸಿ ಆದೇಶ ಹೊರಡಿಸಲು ಕಾನೂನಿನಲ್ಲಿ ಅವಕಾಶವಿದೆ. ನೀತಿ ಸಂಹಿತೆ ಅಡ್ಡ ಬಂದರೆ ಕಂದರ ಚುನಾವಣೆ ಆಯೋಗದ ಅನುಮತಿಯೊಂದಿಗೆ ಸರ್ಕಾರಿ ಆದೇಶವನ್ನು ಸರ್ಕಾರ ಹೊರಡಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next