Advertisement
ಮೈತ್ರಿ ಸರ್ಕಾರ ರಚನೆಯಾದ ಆರು ತಿಂಗಳಲ್ಲಿಯೇ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಚುನಾವಣೆಯ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ನಡುವಿನ ಸಂಘರ್ಷ, ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಸಾರುವಂತೆ ಮಾಡಿತು. ಹಲವು ಬಾರಿ ಅವರ ಪ್ರಯತ್ನ ವಿಫಲವಾದರೂ, ಕಡೆಗೆ ಬೆಂಗಳೂರಿನ ನಾಲ್ವರು ಶಾಸಕರು ದಿಢೀರ್ ಅತೃಪ್ತರ ಬಣ ಸೇರಿಕೊಳ್ಳುವ ಮೂಲಕ ಬಂಡಾಯ ಶಾಸಕರ ಪ್ರಯತ್ನ ಫಲ ನೀಡಿತು. ಇದು ಅತೃಪ್ತ ಶಾಸಕರಿಗೆ ಹಠ ಸಾಧಿಸಿದ ತೃಪ್ತಿ ನೀಡಿದರೂ, ರಾಜಕೀಯವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಅವರ ವಿರುದ್ಧ ತೆಗೆದುಕೊಂಡ ನಿರ್ಧಾರ, ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಸ್ಪೀಕರ್ ರಮೇಶ್‌ಕುಮಾರ್ ನೀಡಿದ ತೀರ್ಪು ಅತೃಪ್ತ ಶಾಸಕರು ತಾವೇ ಹೆಣೆದ ಬಲೆಯಲ್ಲಿ ತಾವೇ ಸಿಲುಕಿದಂತೆ ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Related Articles
Advertisement
ಹಲವಾರು ಬಾರಿ ಬಂಡಾಯ ಶಾಸಕರನ್ನು ರಾಜೀನಾಮೆ ಸಲ್ಲಿಸುವಂತೆ ಒತ್ತಡ ಹೇರುತ್ತಿದ್ದರೂ, ಸಂಖ್ಯಾ ಬಲದ ಕೊರತೆಯಿಂದ ಹಿನ್ನಡೆಯನ್ನೂ ಅನುಭವಿಸುವಂತಾಗಿತ್ತು. ಮೈತ್ರಿ ಪಕ್ಷಗಳು ಲೋಕಸಭೆ ಚುನಾವಣೆ ನಂತರ ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿದಾಗ ಕಾಂಗ್ರೆಸ್‌ನಲ್ಲಿ ಹೆಚ್ಚಾದ ಅಸಮಾಧಾನವನ್ನೇ ಬಂಡವಾಳ ಮಾಡಿಕೊಂಡು, ಅತೃಪ್ತರನ್ನು ಮತ್ತೆ ಸಂಘಟಿಸುವ ಯತ್ನ ಮಾಡಿದರು. ಅದಕ್ಕೆ ಪೂರಕ ಎನ್ನುವಂತೆ ಬೆಂಗಳೂರಿನ ಶಾಸಕರಾದ ರಾಮಲಿಂಗಾ ರೆಡ್ಡಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಗೋಪಾಲಯ್ಯ ರಾಜೀನಾಮೆ ಸಲ್ಲಿಸಿದ್ದು ಬಿಜೆಪಿಗೆ ವರವಾಗಿ ಪರಿಣಮಿಸಿತು.
ಅದನ್ನೇ ಬಂಡವಾಳ ಮಾಡಿಕೊಂಡ ಬಿಜೆಪಿಯವರು ಅತೃಪ್ತರು ಮುಂಬೈನ ಹೊಟೇಲ್ನಲ್ಲಿ ಗಟ್ಟಿಯಾಗಿ ಉಳಿದುಕೊಳ್ಳುವಂತೆ ನೋಡಿಕೊಂಡು ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಯಶಸ್ವಿಯಾದರು. ಅದರ ಬೆನ್ನಲ್ಲೆ ತಮ್ಮ ಸರ್ಕಾರವನ್ನೂ ರಚಿಸಿದರು. ಅಲ್ಲದೇ ಈಗ ಸ್ಪೀಕರ್ ಕೂಡ ಬಂಡಾಯಗಾರರನ್ನು ಅನರ್ಹಗೊಳಿಸಿರುವುದರಿಂದ ಬಿಜೆಪಿಗೆ ಬಹುಮತ ಸಾಬೀತಿಗೆ ಇದ್ದ ಅಡ್ಡಿಯೂ ನಿವಾರಣೆಯಾದಂತಾಗಿದೆ. ಅಲ್ಲದೇ ಅತೃಪ್ತರಿಗೆ ತಕ್ಷಣಕ್ಕೆ ಮಂತ್ರಿ ಮಾಡಬೇಕೆಂಬ ತೊಂದರೆಯೂ ಇಲ್ಲದಂತಾಗಿರುವುದರಿಂದ ಬಿಜೆಪಿಯಲ್ಲಿ ನಿರಾಳತೆಯ ಭಾವ ಮೂಡುವಂತೆ ಮಾಡಿದೆ.
ಅತೃಪ್ತರಿಗೆ ಆಗಿದ್ದೇನು: ರಮೇಶ್ ಜಾರಕಿಹೊಳಿ ಹಾಗೂ ಅವರ ತಂಡ ಹೇಗಾದರೂ ಮಾಡಿ ಸರ್ಕಾರವನ್ನು ಪತನ ಮಾಡಲೇಬೇಕೆಂದು ಹಠ ತೊಟ್ಟು ಬಂಡಾಯ ಸಾರಿದ್ದರು. ಆದರೆ, ಅದಕ್ಕೆ ಪೂರಕವಾಗಿ ಸಂಖ್ಯಾಬಲದ ಕೊರತೆ ಅವರನ್ನು ಕಾಡುತ್ತಿತ್ತು. ಈ ಸಂದರ್ಭದಲ್ಲಿ ಪಕ್ಷದ ನಾಯಕರನ್ನು ಹೆದರಿಸಿ ಅಧಿಕಾರದ ಗದ್ದುಗೆ ಏರಲು ಬೆಂಗಳೂರಿನ ಶಾಸಕರು ಮಾಡಿದ ಕಾರ್ಯತಂತ್ರ ದಾರಿ ತಪ್ಪಿದಂತೆ ಕಾಣಿಸುತ್ತದೆ.
ಡಾ.ಜಿ.ಪರಮೇಶ್ವರ್ ಅವರಿಂದ ಬೆಂಗಳೂರು ಉಸ್ತುವಾರಿಯನ್ನು ಪಡೆದು ರಾಮಲಿಂಗಾ ರೆಡ್ಡಿ ಅವರಿಗೆ ವಹಿಸಬೇಕೆಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ನ ನಾಲ್ವರು ಹಾಗೂ ಜೆಡಿಎಸ್‌ನ ಗೋಪಾಲಯ್ಯ ಸೇರಿ ಐವರು ರಾಜೀನಾಮೆ ಸಲ್ಲಿಸಿದ್ದರು. ರಾಮಲಿಂಗಾರೆಡ್ಡಿ ರಾಜೀನಾಮೆ ಸಲ್ಲಿಸಿದರೂ, ಬಂಡಾಯ ಶಾಸಕರ ಗುಂಪು ಸೇರದೇ ತಟಸ್ಥವಾಗಿ ಉಳಿದುಕೊಂಡರು. ಆದರೆ, ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಹಾಗೂ ಗೋಪಾಲಯ್ಯ ಅತೃಪ್ತರೊಂದಿಗೆ ಮುಂಬೈ ಹೊಟೇಲ್ ಸೇರಿಕೊಂಡು ಬಿಜೆಪಿಯ ಹಿಡಿತದಿಂದ ಹೊರಬರಲಾಗದೇ ಅಸಹಾಯಕ ರಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ರಾಜಕೀಯ ಭವಿಷ್ಯ ಮಂಕುಬಂಡಾಯ ಸಾರಿ ಅನರ್ಹಗೊಂಡಿರುವ 17 ಶಾಸಕರು ತಮ್ಮ ಹಠ ಸಾಧಿಸುವಲ್ಲಿ ಯಶಸ್ವಿ ಯಾಗಿದ್ದರೂ, ಈಗ ಅನರ್ಹಗೊಂಡಿರು ವುದರಿಂದ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಹೋರಾಟದಲ್ಲಿ ಜಯಗಳಿಸಿದರೂ, ಮತ್ತೆ ಚುನಾವಣೆಯಲ್ಲಿ ಜನರನ್ನು ಎದುರಿಸಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕಾನೂನು ಸಂಘರ್ಷ ಹಾಗೂ ರಾಜಕೀಯ ಹೋರಾಟದಲ್ಲಿ ಜಯಗಳಿಸುವಷ್ಟರಲ್ಲಿ ಅನರ್ಹಗೊಂಡ ಶಾಸಕರಿಗೆ ರಾಜಕೀಯದ ಬಗ್ಗೆಯೇ ಜಿಜ್ಞಾಸೆ ಮೂಡಿದರೂ ಆಶ್ಚರ್ಯ ಪಡುವಂತಿಲ್ಲ. ಕೆಲವರು ರಾಜಕೀಯ ನಿವೃತ್ತಿ ಪಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. -ಶಂಕರ ಪಾಗೋಜಿ