Advertisement

ಅಡಿಕೆಗೆ ಶಾಪವಾದ ಕೊಳೆ ರೋಗ

12:28 PM Nov 26, 2019 | Suhan S |

ಭರಮಸಾಗರ: ನಾಲ್ಕಾರು ವರ್ಷಗಳಿಂದ ಉತ್ತಮ ಮಳೆಯಿಲ್ಲದೆ ಅಡಿಕೆ ತೋಟಗಳು ಒಣಗುವ ಹಂತ ತಲುಪಿದ್ದವು. ಲಕ್ಷಾಂತರ ರೂ. ಖರ್ಚು ಮಾಡಿ ಉಳಿಸಿಕೊಂಡ ತೋಟಗಳಿಗೆ ಕೊಳೆ ರೋಗ ಹಾಗೂ ಪೋಷಕಾಂಶಗಳ ಕೊರತೆಯಿಂದ ಒಂದೊಂದೇ ಮರಗಳು ಒಣಗುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

Advertisement

ಚಿತ್ರದುರ್ಗ ಜಿಲ್ಲೆಯ 33,690 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. “ಅರೆ ಮಲೆನಾಡಿನ ಸೆರಗು’ ಎಂದೇ ಕರೆಯುವ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು ಭಾಗಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಅಡಿಕೆ ಬೆಳೆಯಲಾಗುತ್ತಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿದ್ದರಿಂದ ನೊಂದು ಬೆಂದಿದ್ದ ಬೆಳೆಗಾರರು, ಈ ಬಾರಿ ಉತ್ತಮ ಮಳೆ ಸುರಿಯುತ್ತಿದ್ದಂತೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮರಗಳಿಗೆ ತಗುಲುತ್ತಿರುವ ರೋಗ ಬಾಧೆ ಚಿಂತಾಕ್ರಾಂತರಾಗುವಂತೆ ಮಾಡಿದೆ.

ಚಿತ್ರದುರ್ಗ ಜಿಲ್ಲೆ ಅಡಿಕೆ ಕೃಷಿಗೆ ಶಿಫಾರಸು ಮಾಡಿರುವ ಜಿಲ್ಲೆಗಳ ಪಟ್ಟಿಯಲ್ಲಿ ಇಲ್ಲ. ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾಡಳಿತದ ನಿಬಂಧನೆಗಳಿವೆ. ನರೇಗಾ ಯೋಜನೆಯಡಿ ತೋಟಗಾರಿಕೆ ಅಭಿವೃದ್ಧಿಗೆ ಅವಕಾಶ ಇದ್ದರೂ ಅಡಿಕೆಯನ್ನು ಸೇರಿಸಿಲ್ಲ. ಹಾಗಾಗಿ ಅಡಿಕೆ ಬೆಳೆಗೆ ಹನಿ ನೀರಾವರಿ ಸಬ್ಸಿಡಿ ದೊರೆಯುತ್ತಿಲ್ಲ. ಸೌಲಭ್ಯಗಳಿಲ್ಲದಿದ್ದರೂ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈಗ ಕೊಳೆ ರೋಗ ಹಾಗೂಪೋಷಕಾಂಶಗಳ ಕೊರತೆಯಿಂದ ಸುಳಿಗಳು ಮರದಿಂದ ಹೊರಡದೆ ರೋಗಕ್ಕೆ ತುತ್ತಾಗಿ ಒಣಗುತ್ತಿವೆ. ಗರಿಗಳ ಸಂಖ್ಯೆ ಕ್ಷೀಣಿಸಿ ಹೊಸ ಕುಡಿ ಇಲ್ಲದೆ ಗಿಡ ಒಣಗುತ್ತದೆ. ಆಳದ ನೀರು ಎತ್ತಿ ಬಳಸಿರುವುದರಿಂದ ನೀರಿನಲ್ಲಿನ ಕ್ಯಾಲ್ಸಿಯಂ ಮೆಗ್ನಿಶಿಯಂನಂಥಹ ಅಂಶಗಳು ಗಿಡಗಳನ್ನು ಆಹುತಿ ಪಡೆದಿರಬಹುದು. ಮಳೆಯಿಲ್ಲದೆ ಸಾವಿರಾರು ಅಡಿ ಆಳದ ನೀರನ್ನು ಎತ್ತಿ ಅಡಿಕೆ ಗಿಡಗಳಿಗೆ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಹಲವು ತೋಟಗಳಿಗೆ ಈ ನೀರು ಕಂಟಕವಾಗಿರಬಹುದು ಎಂಬ ಮಾತುಗಳು ಬೆಳೆಗಾರರಿಂದ ಕೇಳಿ ಬರುತ್ತಿವೆ. ಅತಿಯಾದ ಮಳೆಯಾಗಿದ್ದರೂ ತೋಟಗಳು ಒಣಗುತ್ತಿವೆ.

ಯಾವ ಗೊಬ್ಬರ, ಔಷಧ ಬಳಕೆ ಮಾಡಿ ರೋಗ ನಿಯಂತ್ರಿಸಬೇಕು ಎಂಬ ಬಗ್ಗೆ ಬೆಳೆಗಾರರಿಗೆ ಮಾಹಿತಿಯಿಲ್ಲ. ಕೃಷಿ ವಿಜ್ಞಾನಿಗಳ ಮಾರ್ಗದರ್ಶನವೂ ಲಭಿಸುತ್ತಿಲ್ಲ. ಒಂದೆರಡು ಮರಗಳಲ್ಲಿ ಈ ರೋಗ ಬಾಧೆ ಕಂಡುಬಂದರೆ ಅದು ಮುಂದೆ ಇಡೀ ತೋಟಕ್ಕೆ ವ್ಯಾಪಿಸುತ್ತದೆ. ಮೈಕ್ರೋನ್ಯುಟ್ರಿಯೇಂಟ್ಸ್‌ ಕೊರತೆಯಿಂದ ಈ ರೋಗ ಬರುತ್ತದೆ ಎನ್ನಲಾಗುತ್ತಿದೆ. ಈ ಕುರಿತು ತೋಟಗಾರಿಕೆ ಇಲಾಖೆಗೆ ಹೋದರೆ ಇಲಾಖೆಯವರು ಯಾವುದೇ ಮಾಹಿತಿ ನೀಡುತ್ತಿಲ್ಲ. ಅಡಿಕೆ ಬೆಳೆಗಾರರಿಗೆ 1089 ಕೋಟಿ ರೂ. ಪರಿಹಾರ ಬಂದಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಪರಿಹಾರ ವಿತರಣೆ ಮಾನದಂಡಗಳಲ್ಲಿ ಹಲವು ಗೊಂದಲಗಳಿರುವುದರಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ನೀರಿಲ್ಲದೆ ತೊಂದರೆ ಅನುಭವಿಸಿದ್ದ ಅಡಿಕೆ ಬೆಳೆಗಾರರು, ಈಗ ರೋಗ ಬಾಧೆಯಿಂದ ಹೈರಾಣಾಗಿದ್ದಾರೆ.

ತೋಟಗಾರಿಕೆ ಇಲಾಖೆಯವರು ಅಡಿಕೆ ಬೆಳೆಗಾರರ ಬವಣೆಗೆ ಸ್ಪಂದಿಸುತ್ತಿಲ್ಲ. ರೋಗ ಬಾಧೆಗೆ ಯಾವ ಕೀಟನಾಶಕ ಅಥವಾ ಗೊಬ್ಬರ ಬಳಕೆ ಮಾಡಬೇಕೆಂಬ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡದೆ ಬೆಳೆಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ. ಇಲಾಖೆಗೆ ಬಂದ ಸಲಕರಣೆಗಳನ್ನು ವಿತರಣೆ ಮಾಡುವುದಷ್ಟೇ ಕೆಲಸವಲ್ಲ,ತೋಟಗಳಿಗೆ ಬಂದು ಸ್ಪಂದಿಸಬೇಕು. ಐದಾರು ವರ್ಷಗಳಿಂದ ತೋಟಗಳನ್ನು ಉಳಿಸಲು ಹರಸಾಹಸ ಪಟ್ಟಿದ್ದೇವೆ. –ಬಸವನಗೌಡ, ಅಡಿಕೆ ಬೆಳೆಗಾರರು, ಕೋಗುಂಡೆ

Advertisement

 

-ಎಚ್‌.ಬಿ. ನಿರಂಜನ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next