ಹುಣಸೂರು: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆ ಹಲವು ರೋಗಗಳಿಗೆ ತುತ್ತಾಗಿದ್ದು, ತಂಬಾಕು ಬೆಳೆಗಾರರು ಕಂಗಾಲಾಗಿದ್ದಾರೆ. ಎಷ್ಟೇ ನಿಗಾ ವಹಿಸಿದರೂ ಕಡಿಮೆ ಮಳೆ, ಹೆಚ್ಚಿದ ಉಷ್ಟಾಂಶದಿಂದಾಗಿ ಎಲೆ ಸುರುಳಿ, ಕಾಂಡ ಕೊಳೆಯುವ ರೋಗ, ಹಸಿರು ಹುಳು ಬಾಧಿಸುತ್ತಿದೆ.
ಎಲೆ ಸುರುಳಿ: ಈ ರೋಗ ನಿಯಂತ್ರಣಕ್ಕೆ 15 ಲೀಟರ್ ನೀರಿಗೆ 5 ಎಂ.ಎಲ್. ಕಾನಿಡಾರ್ ದ್ರಾವಣ ಹಾಗೂ 150 ಪೊಟಾಶಿಯಂ ನೈಟ್ರೇಟ್ ದ್ರಾವಣ 15 ಲೀಟರ್ ನೀರಿಗೆ 5 ಎಂ.ಎಲ್. ಮಿಶ್ರಣ ಮಾಡಿ ಸಿಂಪಡಿಸಬೇಕು.
ಕಾಂಡ ಕೊಳೆಯುವ ರೋಗ:ಈ ಬಾರಿ ಬಿಸಿಲು ಹೆಚ್ಚಾಗಿ ಕಾಂಡ ಕೊಳೆಯುವ ರೋಗ ಬಂದಿದೆ. ಕೊಸೈಡ್ 20 ಗ್ರಾಂ ಅಥವಾ ಸ್ಪ್ರಿಂಟ್ ಅಥವಾ ಬ್ರೈಟೆಕ್ಸ್ 20 ಗ್ರಾಂ ಪೌಡರ್ ನೀರಿನಲ್ಲಿ ಮಿಶ್ರಣ ಮಾಡಿ ಗಿಡದ ಬುಡಕ್ಕೆ ಹಾಕಬೇಕು.
ಹಸಿರು ಹುಳು ಕಾಟ: ಇದೀಗ ಎಲ್ಲೆಡೆ ಎಲೆ ತಿನ್ನುವ ಹಸಿರು ಹುಳುಗಳ ನಿಯಂತ್ರಣಕ್ಕೆ 15 ಲೀಟರ್ ನೀರಿನಲ್ಲಿ 5 ಎಂ.ಎಲ್.ಕೊರಾಜಿನ್ ದ್ರಾವಣ ಮಿಶ್ರಣ ಮಾಡಿ ಸಿಂಪಡಿಸಬೇಕು. ಕಪ್ಪುಕಾಂಡ ರೋಗ: ಕೆಲವೆಡೆ ಮಾತ್ರ ಕಪ್ಪುಕಾಂಡ ರೋಗ ಕಾಣಿಸಿಕೊಂಡಿದೆ. ನಿಯಂತ್ರಣಕ್ಕಾಗಿ 15 ಲೀಟರ್ ನೀರಿಗೆ 20 ಗ್ರಾಂ ಬ್ರೈಟೆಕ್ಸ್ ಅಥವಾ ಬಾವಸ್ಟಿನ್ ದ್ರಾವಣ ಮಿಶ್ರಣ ಮಾಡಿ ಸಿಂಪಡಿಸಬೇಕು.
ಪೊಟಾಶಿಯಂ ನೈಟ್ರೇಟ್ ಸಂಜೀವಿನಿ: ತಂಬಾಕು ನಾಟಿಯ 40-45 ಹಾಗೂ 50-55 ದಿನಗಳ ನಂತರ ಪೊಟಾಶಿಯಂ ನೈಟ್ರೇಟ್‌ನ್ನು ಒಂದು ಕ್ಯಾನ್ ನೀರಿಗೆ 150 ಗ್ರಾಂನಂತೆ ಮಿಶ್ರಣ ಮಾಡಿ ತಂಬಾಕು ಎಲೆ ಮೇಲೆ ಸ್ಪ್ರೆ ಮಾಡಬೇಕು. ರೋಗ ಕಂಡು ಬಂದಲ್ಲಿ ತಂಬಾಕು ಸಂಶೋಧನಾ ಕೇಂದ್ರದ ಅಧಿಕಾರಿಗಳ ಶಿಫಾರಸು ಮಾಡಿದ ಔಷಧ, ಸಲಹೆ ಅನುಸರಿಸಬೇಕೆನ್ನುತ್ತಾರೆ ತಂಬಾಕು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಅವರು ತಿಳಿಸಿದ್ದಾರೆ.