ಭಾಲ್ಕಿ: ಪ್ರತಿನಿತ್ಯ ಸೂರ್ಯೋದಯಕ್ಕಿಂತ ಮುನ್ನ ಎದ್ದು ಯೋಗ ಮಾಡುವುದರಿಂದ ನಿರೋಗಿಯಾಗಿ ಜೀವನ ಸಾಗಿಸಬಹುದು ಎಂದು ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಪತಂಜಲಿ ಯೋಗಪೀಠದ ವತಿಯಿಂದ ಕರ್ನಾಟಕ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗಾಚಾರ್ಯ ಭವರಲಾಲ್ ಆರ್ಯ ಅವರಿಂದ ನಡೆಸಲಾಗುತ್ತಿರುವ ವಿರಾಟ ಉಚಿತ ಯೋಗ ಶಿಬಿರ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಪತಂಜಲಿ ಮಹರ್ಷಿಗಳು ತಿಳಿಸಿಕೊಟ್ಟ ಅಷ್ಟಾಂಗ ಯೋಗಗಳು ಬರೀ ಕೆಲವು ಋಷಿಮುನಿಗಳಿಗೆ ಮಾತ್ರ ಪರಿಚಿತವಾಗಿದ್ದವು. ಇದನ್ನು ಹರಿದ್ವಾರದ ರಾಮದೇವ ಮಹಾರಾಜರು ಜಗತ್ತಿನ ಪ್ರತಿಯೊಬ್ಬರಿಗೂ ತಲುಪುವ ರೀತಿಯಲ್ಲಿ ಪ್ರಚುರ ಪಡಿಸಿದ್ದಾರೆ. ಅಷ್ಟಾಂಗ ಯೋಗದಲ್ಲಿ ನಿರೋಗಿಯಾಗಿ ಬಾಳಲು ಹಲವಾರು ಪದ್ಧತಿಗಳಿವೆ. ಈ ಎಲ್ಲ ಯೋಗ ಪದ್ಧತಿಗಳನ್ನು ಸೂಕ್ತ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಮಾಡುವುದರಿಂದ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿಯ ಗಣಪತರಾವ ಖೂಬಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮದೇವಜಿ ಮಹಾರಾಜರು ಯೋಗ ಪದ್ಧತಿಯನ್ನು ಎಲ್ಲರ ಮನೆ ಮನೆಗೆ ತಲುಪುವ ರೀತಿ ಪ್ರಚಾರ ಮಾಡಿದ್ದಾರೆ. ಹೀಗಾಗಿ ಈ ಯೋಗ ಪದ್ಧತಿಯನ್ನು ಅಳವಡಿಸಿಕೊಂಡ ಹಲವಾರು ಜನರು ತಮ್ಮ ಕಷ್ಟಕರವಾದ ರೋಗದಿಂದ ಮುಕ್ತಿ ಹೊಂದಿದ್ದಾರೆ. ಕಾರಣ ಭಾಲ್ಕಿಯ ನಾಗರಿಕರು ಐದು ದಿನಗಳ ಕಾಲ ನಡೆಯುವ ಈ ಯೋಗ ಶಿಬಿರದ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಯೋಗಾಚಾರ್ಯ ಭವರಲಾಲ್ ಆರ್ಯ ಅವರು ಸುಮಾರು 1.30 ಗಂಟೆ ಕಾಲ ಸಾರ್ವಜನಿಕರಿಗೆ ಯೋಗ ಪದ್ಧತಿಯನ್ನು ತಿಳಿಸಿಕೊಟ್ಟರು. ಹರಿದೇವ ರುದ್ರಮಣಿ, ಸಾಗರ ಮಾಲಪಾಣಿ, ಶೈಲೇಶ ಮಾಲಪಾಣಿ, ಚನ್ನಬಸವ ಬಳತೆ, ಪ್ರಮುಖರಾದ ಜೈಕಿಶಾನ ಬಿಯಾಣಿ, ಈಶ್ವರ ರುಮ್ಮಾ, ಶಿವಾನಂದ ದಾಡಗೆ, ಗೋರಖನಾಥ ಕುಂಬಾರ ಇದ್ದರು.