ಬೀದರ: ದೇಶದಲ್ಲೇ ಕೋವಿಡ್ ಹಾಟ್‌ಸ್ಪಾಟ್ ಜಿಲ್ಲೆಯಾಗಿ ಅಪಖ್ಯಾತಿ ಹೊತ್ತಿದ್ದ ಬೀದರ ಈಗ ರಾಜ್ಯದಲ್ಲಿ ಮೊದಲ “ಸೋಂಕು ಮುಕ್ತ’ ಜಿಲ್ಲೆ ಎಂಬ ಹೆಗ್ಗಳಿಗೆಕೆ ಪಾತ್ರವಾಗಿದೆ. ಸದ್ಯ ಸೋಂಕಿತರು ಮಾತ್ರವಲ್ಲ, ಸಕ್ರಿಯ ಪ್ರಕರಣ ಸಹ ಶೂನ್ಯಕ್ಕೆ ಇಳಿದಿರುವುದು ಧರಿನಾಡಿನ ಜನರು ನಿಟ್ಟಿಸಿರು ಬಿಡುವಂತಾಗಿದೆ. ಆದರೂ ಬೀದರ ಗಡಿನಾಡು ಆಗಿರುವುದರಿಂದ ಸಂಭವನೀಯ 3ನೇ ಅಲೆ ಆತಂಕ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ.
ಮೊದಲ ಅಲೆಗಿಂತ ಎರಡನೇ ಅಲೆ ವೇಳೆ ಅಬ್ಬರಿಸಿ ತಲ್ಲಣ್ಣವನ್ನೇ ಸೃಷ್ಟಿಸಿದ್ದ ಬೀದರನಲ್ಲೇ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಕಳೆದೊಂದು ವಾರದಲ್ಲಿಕೇವಲ ಒಂದು ಪಾಸಿಟಿವ್ ಪ್ರಕರಣ ಮಾತ್ರ ಪತ್ತೆಯಾಗಿದ್ದು, ನಿತ್ಯ ಶೂನ್ಯ ಪ್ರಕರಣ ದಾಖಲಾಗಿವೆ. ಜಿಲ್ಲಾಡಳಿತ, ವೈದ್ಯರ ಸತತ ಪರಿಶ್ರಮದ ಜತೆಗೆ ಲಾಕ್‌ಡೌನ್ ಜಾರಿ, ಜನರ ಮುನ್ನೆಚ್ಚರಿಕೆ ಕ್ರಮದಿಂದಾಗಿ ಸದ್ಯದ ಮಟ್ಟಿಗೆ ಜಿಲ್ಲೆ ಕೊರೊನಾ ವೈರಸ್‌ನಿಂದ ಸಂಪೂರ್ಣ ಮುಕ್ತವಾದಂತಾಗಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ದೃಢಪಡಿಸಿದೆ.
ಬೀದರನಲ್ಲಿ ಪ್ರಸಕ್ತ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದಿನಕ್ಕೆ 400 ರಿಂದ 500ರವರೆಗೆ ಪಾಸಿಟಿವ್ ಕೇಸ್‌ಗಳು ಪತ್ತೆಯಾಗುವ ಮೂಲಕ ಅಬ್ಬರಿಸಿದ್ದ ಮಾರಕ ಸಾಂಕ್ರಾಮಿಕ ರೋಗ ನಂತರ ಹತೋಟಿಗೆ ಬರುತ್ತಾ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಬ್ರಿಮ್ಸ್ ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಕೊರತೆ ಎದುರಾಗಿ ರೋಗಿ-ಸಂಬಂಧಕರ ಆಕ್ರಂದನ ಹೆಚ್ಚಿತ್ತು. ಎರಡು ತಿಂಗಳ ಹಿಂದೆ ರಾಜ್ಯದಲ್ಲೇ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ಪ್ರಥಮವಾಗಿ, ಈಗ ಕೋವಿಡ್ ಮುಕ್ತವಾದ ಮೊದಲ ಜಿಲ್ಲೆ ಎನಿಸಿಕೊಂಡಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 24,300 ಪಾಸಿಟಿವ್ ಕೇಸ್‌ಗಳು ವರದಿಯಾಗಿದ್ದು, 23,898 ಜನ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. 398 ಜನ ಸೋಂಕಿತರು ಮತ್ತು 4 ಮಂದಿ ಕೋವಿಡ್ ಸಹಿತ ಇತರೆ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆ, ವೈದ್ಯ ಸಿಬ್ಬಂದಿಗಳ ಮೇಲೆ ನಿಗಾ ವಹಿಸಲು ಎಲ್ಲ ಕೋವಿಡ್ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿ ಕಠಿಣ ಕ್ರಮಗಳ ಜತೆಗೆ ಎರಡು ರಾಜ್ಯದ ಒಟ್ಟು 9 ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರದ ಪರಿಣಾಮ ಇಂದು ರೋಗ ಹತೋಟಿಗೆ ಬರಲು ಸಾಧ್ಯವಾಗಿದೆ.
*ಶಶಿಕಾಂತ ಬಂಬುಳಗೆ