Advertisement

Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್‌ ಭೇಟಿ

01:03 AM Oct 05, 2024 | Team Udayavani |

ಉಪ್ಪುಂದ: ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಡಿಕಲ್‌ ಮತ್ತು ಕರ್ಕಿಕಳಿ ಭಾಗದಲ್ಲಿ ಶಂಕಿತ ಕಾಲರಾ ರೋಗ ಕಾಣಿಸಿಕೊಂಡು 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಕಾರಣ ತಹಶೀಲ್ದಾರ್‌ ಪ್ರದೀಪ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

ಗ್ರಾಮ ಪಂಚಾಯತ್‌ನಿಂದ ಸರಬರಾಜಾಗುತ್ತಿರುವ ಕುಡಿಯುವ ನೀರಿನಿಂದ ಈ ರೋಗ ಕಾಣಿಸಿಕೊಂಡಿದೆ ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಆ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ಅದರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ತಾಲೂಕು ವೈದ್ಯಾಧಿಕಾರಿ ಡಾ| ರಾಜೇಶ್‌ ಮತ್ತಿತರರಿದ್ದರು.

ನೀರಿನಿಂದ ಸಮಸ್ಯೆ
ಆರೋಗ್ಯ ಅಧಿಕಾರಿಗಳ ಪ್ರಕಾರ ಪ್ರಾರಂಭದಲ್ಲಿ ನೀರಿನಿಂದ ಆರೋಗ್ಯ ಸಮಸ್ಯೆ ಜನರಲ್ಲಿ ಕಾಣಸಿಕೊಂಡಿದ್ದು, ಬಳಿಕ ವ್ಯಕ್ತಿಯಿಂದ ವ್ಯಕ್ತಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸುಮಾರು 145 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಬೈಂದೂರಿನಲ್ಲಿ ತಲಾ ಮೂವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಮತ್ತೆ ಕೆಲವರು ಮನೆಯಲ್ಲೇ ಸ್ವಯಂಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯಾವುದೇ ಗಂಭೀರ ಪ್ರಕರಣ ಇಲ್ಲವೆಂದು ತಿಳಿದುಬಂದಿದೆ.

ನರ್ಸ್‌ಗೆ ಹರಡಿದ ರೋಗ
ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗೆ ಚಿಕಿತ್ಸೆ ನೀಡಿದ ನರ್ಸ್‌ ಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯಾವುದೇ ಸಮಸ್ಯೆ ಇಲ್ಲ
ಕುಂದಾಪುರ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಬಗ್ಗೆ ಮಾಹಿತಿ ನೀಡಿದ ವೈದ್ಯಾಧಿಕಾರಿ ಡಾ| ಪ್ರೇಮಾನಂದ ಅವರು, ಯಾರಲ್ಲೂ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಮೊದಲ ಪ್ರಕರಣ ದಾಖಲಾದ ತತ್‌ಕ್ಷಣವೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಸ್ಥಳಕ್ಕೆ ಹೋಗಿ ಮಾಹಿತಿ ಪಡೆಯಲಾಗಿದೆ. ಚಿಕಿತ್ಸೆ ಬಳಿಕ ಚೇತರಿಕೆ ಉಂಟಾಗಿದ್ದು, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.

Advertisement

“ನಿರಂತರ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದಕ್ಕೆ ಜನರ ಹಾಗೂ ಅಧಿಕಾರಿಗಳ ವಿಶೇಷ ಕಾಳಜಿ ಹಾಗೂ ಸಹಕಾರ ಅಗತ್ಯವಿದೆ.”  -ಮೋಹನಚಂದ್ರ, ಅಧ್ಯಕ್ಷ ಉಪ್ಪುಂದ ಗ್ರಾ.ಪಂ.

“ಈ ವೈರಾಣು ನೀರಿನಿಂದ ಮಾತ್ರವಲ್ಲದೆ ಬಾಧಿತ ವ್ಯಕ್ತಿಯಿಂದಲೂ ಇನ್ನೊಬ್ಬರಿಗೆ ಹರಡುತ್ತದೆ. ಜನರು ಆತಂಕಪಡುವ ಅಗತ್ಯವಿಲ್ಲ. ಬಿಸಿ ನೀರು ಕುಡಿಯುವುದು, ಕೈ ತೊಳೆದು ಆಹಾರ ಸೇವಿಸುವುದು ಹಾಗೂ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ.” – ಡಾ| ರಾಜೇಶ , ಬೈಂದೂರು ವೈದ್ಯಾಧಿಕಾರಿ

ಪರಿಸ್ಥಿತಿ ನಿಯಂತ್ರಣದಲ್ಲಿ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನಾ 
ಉಡುಪಿ: ಉಪ್ಪುಂದದಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನಾ  ಪ್ರತಿಕ್ರಿಯಿಸಿದ್ದಾರೆ. ಕೆರೆಕಟ್ಟೆ ಹಾಗೂ ಮಡಿಕಲ್‌ನಲ್ಲಿ ಹೊಟ್ಟೆನೋವು, ವಾಂತಿ, ಭೇದಿಯಿಂದ ಹಲವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಇತರೆಡೆಯಿಂದ ಔಷಧ ಪಡೆದುಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಕೂಡಲೇ ಇಲಾಖೆಯ ಶೀಘ್ರ ಪತ್ತೆ ತಂಡ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಬೈಂದೂರಿನ ಆರೋಗ್ಯಾಧಿಕಾರಿಯೂ ತಂಡದೊಂದಿಗೆ ಮನೆಮನೆಗೆ ಭೇಟಿ ನೀಡಿದ್ದಾರೆ. ಸೆ.27ರಂದು ಇಲ್ಲಿ ಒಂದು ಪ್ರಕರಣ ಕಂಡುಬಂದಿತ್ತು.

ಸೆ.28ಕ್ಕೆ 15, 29ಕ್ಕೆ 53, ಅ.1ಕ್ಕೆ 24, 2ಕ್ಕೆ 15, 3ಕ್ಕೆ 23 ಸಹಿತ ಒಟ್ಟು 143 ಪ್ರಕರಣಗಳು ಕಂಡು ಬಂದಿದೆ. ಈ ನಡುವೆ ಜಿಲ್ಲೆಯ ಕೆಲವೆಡೆ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ಇದರ ಲಕ್ಷಣಗಳು ಕಂಡುಬಂದರೆ ಮಾಹಿತಿ ನೀಡುವಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ ನೀಡಲಾಗಿತ್ತು. ಪ್ರಸ್ತುತ ಕಂಡು ಬಂದಿರುವ ಪ್ರಕರಣಗಳು ಆ್ಯಂಟಿ ಬಯೋಟಿಕ್‌ ಮೂಲಕ ಗುಣಮುಖವಾಗಿವೆ. ಯಾವುದೇ ಗಂಭೀರ ಪ್ರಕರಣ ವರದಿಯಾಗಿಲ್ಲ. ಇಲ್ಲಿಗೆ ನೀರು ಪೂರೈಕೆ ಆಗುತ್ತಿರುವ ನೀರಿನ ಮಾದರಿ ಸಂಗ್ರಹಿಸಿ ಕ್ಲೋರಿನೇಷನ್‌ ಮಾಡಲಾಗಿದ್ದು, ಸೂಪರ್‌ ಕ್ಲೋರಿನೇಷನ್‌ ಕೂಡ ಮಾಡಿಸಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next