Advertisement

Sullia: 28 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಯೋಜನೆ

12:50 PM Dec 11, 2024 | Team Udayavani |

ಸುಳ್ಯ: ತಾಲೂಕಿಗೆ ಸಂಬಂಧಿಸಿದಂತೆ ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭಗೊಂಡಿದ್ದು, ತಾಲೂಕಿನ 6 ಕಡೆ ಬೃಹತ್‌ ನೀರು ಸಂಗ್ರಹ ಟ್ಯಾಂಕ್‌ ಹಾಗೂ 650 ಕಿಲೋ ಮೀಟರ್‌ ಪೈಪ್‌ ಲೈನ್‌ ನಿರ್ಮಾಣವಾಗಲಿದೆ.

Advertisement

ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾಗಿರುವ ಡ್ಯಾಂನಿಂದ ಜಾಕ್‌ವೆಲ್‌ ಮೂಲಕ ನೀರೆತ್ತಿ ಅಲ್ಲಿನ ಬೃಹತ್‌ ಟ್ಯಾಂಕ್‌ಗೆ ಪೂರೈಸಿ ಅಲ್ಲಿಯೇ ಶುದ್ಧೀಕರಣ ನಡೆಸುವ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಂಡು ಅಲ್ಲಿಂದ ನೀರು ವಿವಿಧ ಗ್ರಾಮಗಳಿಗೆ ಸರಬರಾಜಾಗಲಿದೆ.

ಯೋಜನೆಯಡಿ ಒಟ್ಟು 56 ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಅಲ್ಲಿಂದ ನೀರು ಸರಬರಾಜಾಗಲಿದ್ದು, ಅದರಲ್ಲಿ ಅವಿಭಜಿತ ಸುಳ್ಯ ತಾಲೂಕಿನ 28 (25 ಸುಳ್ಯದ) ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ನೀರು ಸರಬರಾಜು ಆಗಲಿದೆ.

ಟ್ಯಾಂಕ್‌ ನಿರ್ಮಾಣ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಬಂಟ್ವಾಳದಿಂದ ಶುದ್ಧೀಕರಣಗೊಂಡು ಸರಬರಾಜಾಗುವ ನೀರನ್ನು ಬೆಳ್ಳಾರೆ ಹಾಗೂ ಐವತ್ತೂಕ್ಲು ಎಂಬಲ್ಲಿ ನಿರ್ಮಾಣವಾಗುವ ಬೃಹತ್‌ ಟ್ಯಾಂಕ್‌ಗೆ ಪೂರೈಸಲಾಗುತ್ತದೆ. ಈ ಎರಡು ಟ್ಯಾಂಕ್‌ಗಳಿಂದ ಸಮೀಪದಲ್ಲಿ ನಿರ್ಮಾಣವಾಗುವ ವಿವಿಧ ಟ್ಯಾಂಕ್‌ಗಳಿಗೆ ಪಂಪ್‌ ಮಾಡುವ ಮೂಲಕ ನೀರು ಪೂರೈಸಲಾಗುತ್ತದೆ.

ಅದರಂತೆ ಅಮರಮುಟ್ನೂರು (1.20 ಲಕ್ಷ ಲೀಟರ್‌), ಪಂಬೆತ್ತಾಡಿ (1.80 ಲಕ್ಷ ಲೀಟರ್‌), ಮಂಡೆಕೋಲು (1.40 ಲಕ್ಷ ಲೀಟರ್‌), ಆಲೆಟ್ಟಿ (1.30 ಲಕ್ಷ ಲೀಟರ್‌), ನಾಲ್ಕೂರು (1.30 ಲಕ್ಷ ಲೀಟರ್‌), ಆಲೆಟ್ಟಿ (0.90 ಲಕ್ಷ ಲೀಟರ್‌) ಮೊದಲಾದೆಡೆ ಟ್ಯಾಂಕ್‌ಗಳು ನಿರ್ಮಾಣವಾಗಲಿದೆ. ಇವಲ್ಲದೆ ಎಡಮಂಗಲ (0.50 ಲಕ್ಷ ಲೀಟರ್‌, ಬಳ್ಪ (1 ಲಕ್ಷ ಲೀಟರ್‌) ದಲ್ಲೂ ಟ್ಯಾಂಕ್‌ ನಿರ್ಮಾಣವಾಗಲಿದೆ.

Advertisement

ನಾಲ್ಕೂರಿನಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್‌ ಕಾಮಗಾರಿ ಆರಂಭಗೊಂಡಿದ್ದು, ಉಳಿದ ಕಡೆಗಳಲ್ಲಿ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಬಂಟ್ವಾಳದಿಂದ ಸುಳ್ಯಕ್ಕೆ ನೀರು ಪೂರೈಸಲು 700 ಎಂ.ಎಂ.ನಿಂದ 160 ಎಂಎಂ ಗಾತ್ರದ ಪೈಪ್‌ಗ್ಳು ಅಳವಡಿಕೆಯಾಗಲಿದೆ. ತಾಲೂಕು ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಟ್ಯಾಂಕ್‌ಗಳಿಗೆ ನೀರು ಪೂರೈಸಲು ಹಾಗೂ ಈ ಟ್ಯಾಂಕ್‌ಗಳಿಂದ ವಿವಿಧ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜೆಜೆಎಂ ಟ್ಯಾಂಕ್‌ ಹಾಗೂ ಇತರ ಟ್ಯಾಂಕ್‌ಗಳಿಗೆ ನೀರು ಪೂರೈಸಲು ಸುಮಾರು 650 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗುತ್ತದೆ.

211 ಕೋಟಿ ರೂ. ವೆಚ್ಚದ ಕಾಮಗಾರಿ
ಬಂಟ್ವಾಳದಿಂದ ಆರಂಭವಾಗುವ ಈ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಒಟ್ಟು 706 ಕೋಟಿ ರೂ. ಅನುದಾನ ವೆಚ್ಚವಾಗಲಿದೆ. ಅದರಲ್ಲಿ ಅಂದಾಜು 211 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದ ಅನುದಾನದಲ್ಲಿ ಕಾಮಗಾರಿ ನಡೆಯಲಿದ್ದು, ಜಿಲ್ಲಾ ಪಂಚಾಯತ್‌ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ಗಳು ಕಾಮಗಾರಿಗಳ ಪರಿಶೀಲನೆ ನಡೆಸುತ್ತಿರುತ್ತಾರೆ. ಎಸ್‌ಎನ್‌ಸಿ (ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಕುಂದಾಪುರ) ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದೆ. ತಾಲೂಕಿನ ವಿವಿಧೆಡೆ ಬೃಹತ್‌ ಗಾತ್ರದ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಪೈಪ್‌ಗ್ಳನ್ನು ತರಲಾಗಿದ್ದು ಅವುಗಳನ್ನು ಬೆಳ್ಳಾರೆ ಸಮೀಪ ಸಂಗ್ರಹಿಸಿಡಲಾಗಿದೆ. ಮುಂದಿನ 5 ವರ್ಷದ ವರೆಗೆ ಎಸ್‌ಎನ್‌ಸಿ ಸಂಸ್ಥೆಗೆ ಯೋಜನೆಯ ನಿರ್ವಹಣೆ ಜವಬ್ದಾರಿ ಇರಲಿದೆ.

ಬಹುಗ್ರಾಮದ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸುಳ್ಯದ 6 ಕಡೆ ದೊಡ್ಡ ಗಾತ್ರದ ಟ್ಯಾಂಕ್‌ಗಳು ನಿರ್ಮಾಣವಾಗಲಿದ್ದು, ನಾಲ್ಕೂರಿನಲ್ಲಿ ಟ್ಯಾಂಕ್‌ ನಿರ್ಮಾಣದ ಕೆಲಸ ಆರಂಭಿಸಲಾಗಿದೆ. ಉಳಿದಂತೆ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ರಸ್ತೆಗಳಿಗೆ ಹಾನಿಯಾದರೆ ಕಾಮಗಾರಿ ನಿರ್ವಹಿಸುವ ಸಂಸ್ಥೆಯವರೇ ದುರಸ್ತಿ ಕಾರ್ಯವನ್ನು ನಡೆಸಲಿದ್ದಾರೆ.
– ಚೈತ್ರಾ ಎಸ್‌.ಆರ್‌.,ಎಇಇ, ಜಿ.ಪಂ.ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸುಳ್ಯ.

Advertisement

Udayavani is now on Telegram. Click here to join our channel and stay updated with the latest news.

Next