Advertisement

ಪೇಜಾವರ ಶ್ರೀಗಳ ಜತೆ ಚರ್ಚಿಸುವೆ 

06:50 AM Jun 05, 2018 | Team Udayavani |

ಚಿಕ್ಕಮಗಳೂರು: “ಪೇಜಾವರ ಶ್ರೀಗಳು ಕೇಂದ್ರ ಸರ್ಕಾರದ ವಿರುದ್ಧ ಏಕೆ ಮಾತನಾಡಿದ್ದಾರೆ ಎಂಬುದು ತಿಳಿದಿಲ್ಲ. ಅವರೊಂದಿಗೆ ಆ ಬಗ್ಗೆ ಚರ್ಚಿಸುವುದಾಗಿ’ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳು ದೇವರ ಸಮಾನ. ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ಶ್ರೀಗಳು ಗಂಗಾನದಿ ಶುದ್ಧೀಕರಣ ಹಾಗೂ ಕಪ್ಪು ಹಣದ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಿಲ್ಲ ಎಂದು ಹೇಳಿದ್ದಾರೆ.

ಅವರ ಹೇಳಿಕೆಯಿಂದ ತಮಗೆ ಆಶ್ಚರ್ಯ, ಆಘಾತ ಎರಡೂ ಆಗಿದೆ ಎಂದರು.ಶ್ರೀಗಳು ಮಂತ್ರಾಲಯಕ್ಕೆ ತೆರಳುವ ಹಿಂದಿನ ದಿನ ತಮಗೆ ದೂರವಾಣಿ ಕರೆ ಮಾಡಿ ನಿಮ್ಮ ಮನೆಯಲ್ಲಿ ಇಂದು ಉಳಿಯುತ್ತೇನೆ ಎಂದಿದ್ದರು. ಅದೇ ರೀತಿ ನಮ್ಮ ಮನೆಗೆ ಬಂದು ರಾತ್ರಿ ತಂಗಿದ್ದರು. ಮಾರನೇ ದಿನ ಮಂತ್ರಾಲಯದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಗಂಗಾ ನದಿಯನ್ನು ಸಾಕಷ್ಟು ಶುದ್ಧಪಡಿಸಲಾಗಿದೆ. ತಾವು ಈ ಬಗ್ಗೆ ಶ್ರೀಗಳೊಂದಿಗೆ ಮಾತನಾಡುತ್ತೇನೆ. ಬಹುಶಃ ಶ್ರೀಗಳು ಇತ್ತೀಚೆಗೆ ಗಂಗಾನದಿಯನ್ನು ನೋಡಿಲ್ಲ ಎನಿಸುತ್ತದೆ. ಸಾಧ್ಯವಾದರೆ ಶ್ರೀಗಳನ್ನು ಅಲ್ಲಿಗೆ ಕರೆದೊಯ್ಯುತ್ತೇನೆ ಎಂದರು.

ಕಪ್ಪುಹಣದ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಆದಾಯ ತೆರಿಗೆ ಇಲಾಖೆ ಹಲವೆಡೆ ದಾಳಿ ನಡೆಸಿ ಅಪಾರ ಪ್ರಮಾಣದ ಕಪ್ಪು ಹಣ ವಶಪಡಿಸಿಕೊಂಡಿದೆ. ಈ ಎಲ್ಲ ವಿಚಾರಗಳ ಕುರಿತು ಶ್ರೀಗಳೊಂದಿಗೆ ಚರ್ಚಿಸಿ ಅವರಿಗೆ ಮನವರಿಕೆ ಮಾಡಿ ಕೊಡುತ್ತೇನೆ ಎಂದು ತಿಳಿಸಿದರು.

Advertisement

ಯಾವುದೇ ನಟನ ಚಲನಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ.ನಾಯಕ ನಟ ಕೇವಲ ಪಾತ್ರಕ್ಕೆ ಮಾತ್ರ ಸೀಮಿತನಾಗಿರುತ್ತಾನೆ. ಬೇರೆ ಭಾಷೆಯ ಚಲನಚಿತ್ರಗಳ ಬಿಡುಗಡೆಗೆ ವಿರೋಧ ಮಾಡಿದರೆ ಬೇರೆ ರಾಜ್ಯಗಳಲ್ಲಿ ಕನ್ನಡ ಚಲನಚಿತ್ರಕ್ಕೂ ವಿರೋಧ ವ್ಯಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next