ಧಾರವಾಡ: ಬಾಂಗ್ಲಾ ದೇಶದಲ್ಲಿ ದುರ್ಗಾಪೂಜಾ ಸಂದರ್ಭದಲ್ಲಿಯೇ ಹಿಂದುಗಳ ಮೇಲೆ ನಡೆದ ದಾಳಿಯನ್ನು ಆರ್ ಎಸ್ಎಸ್ ಅವಲೋಕನ ಮಾಡುತ್ತಿದ್ದು, ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ನಲ್ಲಿ ಈ ಕುರಿತು ಚರ್ಚೆ ಮಾಡುವುದಾಗಿ ಆರ್ ಎಸ್ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಹೇಳಿದರು.
ಅವರು ಮಂಗಳವಾರ ಇಲ್ಲಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ದೇಶದ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಜಕ್ಕೂ ಕಳವಳಕಾರಿಯಾಗಿದೆ. ಈ ಕುರಿತು ಬೈಠಕ್ ನಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದರು.
ಇನ್ನುಳಿದಂತೆ ಧಾರವಾಡದಲ್ಲಿ ಅ.28, 29 ಮತ್ತು 30ರಂದು ನಡೆಯುವ ಈ ಬೈಠಕ್ ನಲ್ಲಿ ಸರಸಂಘ ಚಾಲಕ ಡಾ|ಮೋಹನ್ ಭಾಗವತ್ ಮತ್ತು ಮಾ. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಕ್ಷತ್ರೀಯ ಮತ್ತು ಪ್ರಾಂತ ಸ್ತರದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದೇಶಾದ್ಯಂತ ಸುಮಾರು 350 ಪ್ರತಿನಿಧಿಗಳು ಈ ಬೈಠಕ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸಂಘವು ಯೋಜನೆಯನ್ನು ರೂಪಿಸುತ್ತದೆ. ಇದಾದ ಆರು ತಿಂಗಳ ನಂತರ ನಡೆಯುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳ ಬೈಠಕ್ ಪರಿಶೀಲನಾ ಸಭೆ, ವಿಸ್ತರಣೆಯ ಯೋಜನೆಗಳು, ಕಾರ್ಯಕರ್ತರ ತರಬೇತಿ, ಸಂಘಟನಾತ್ಮಕ ಚಟುವಟಿಕೆ ಬಗ್ಗೆ ಚರ್ಚಿಸಲಿದೆ ಎಂದರು.
ಕೋವಿಡ್ 10 ಲಕ್ಷ ಕಾರ್ಯಕರ್ತರಿಗೆ ತರಬೇತಿ: ಕೋವಿಡ್ ಸಂಕಷ್ಟ ದೇಶದಲ್ಲಿ ಇನ್ನೂ ಪೂರ್ಣವಾಗಿಲ್ಲ. 3ನೇ ಅಲೆ ಮತ್ತೆ ಕಾಣಿಸಿಕೊಳ್ಳುವ ಸಂಭವವಿದೆ. ಹೀಗಾಗಿ ಅದಕ್ಕೆ ಪೂರ್ವಭಾವಿಯಾಗಿ ಸಮಾಜಮುಖಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವ 10 ಲಕ್ಷ ಕಾರ್ಯಕರ್ತರನ್ನು ಆರ್ ಎಸ್ ಎಸ್ ತರಬೇತಿಗೊಳಿಸಿದೆ. 1.5 ಲಕ್ಷ ಸ್ಥಳಗಳಲ್ಲಿ ಈ ಕುರಿತು ಚರ್ಚಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ ಎಂದು ಅಂಬೇಕರ್ ಹೇಳಿದರು.
ಇದನ್ನೂ ಓದಿ:ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ
ಉಳಿದಂತೆ ದೇಶ 75ನೇ ಸ್ವಾತಂತ್ರೋತ್ಸವ ಆಚರಿಸುತ್ತಿದ್ದು ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಾಧ್ಯಂತೆ ಇನ್ನಷ್ಟು ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಮಾಡುವ ಕುರಿತು ಬೈಠಕ್ ನಲ್ಲಿ ಬೆಳಕು ಚೆಲ್ಲಲಾಗುವುದು. ಇನ್ನುಳಿದಂತೆ ಆರ್ಎಸ್ಎಸ್ ನ ಶಾಖೆಗಳ ಸಂಖ್ಯೆ ಹೆಚ್ಚಳಗೊಳಿಸುವ ಕುರಿತು ಚಿಂತನೆ ನಡೆಯಲಿದೆ ಎಂದರು. ಆದರೆ ಬೆಲೆ ಏರಿಕೆ, ರಾಜಕೀಯ ಸ್ಥಿತ್ಯಂತರ ಮತ್ತು ಬಿಜೆಪಿಯಲ್ಲಿನ ಒಳಜಗಳ ಕುರಿತು ಪತ್ರಕರ್ತರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಅಂಬೇಕರ್ ಉತ್ತರಿಸಲಿಲ್ಲ.