ಬೆಂಗಳೂರು: ಶಿಕ್ಷಣ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ಆರ್ಥಿಕ ಸಹಾಯ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರ ಸಾಧ್ಯತೆಗಳ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ಮೂಲಕ ಶಿಕ್ಷಣ ವಲಯಕ್ಕೆ 2 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದ್ದು, ಇದರಲ್ಲಿ ಸುಮಾರು 1800 ಕೋಟಿ ರೂ.ಗಳನ್ನು ಉನ್ನತ ಶಿಕ್ಷಣಕ್ಕೆ ಉಪಯೋಗಿಸಲು ಬೇಕಾದ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಹಾಗೆಯೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ಹೆಚ್ಚುವರಿಯಾಗಿ 400 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಿದ್ಧಪಡಿಸುವ ಬಗ್ಗೆಯೂ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ನಬಾರ್ಡ್‌ನ ಅಧಿಕಾರಿಗಳು ಇದ್ದರು. ಸರ್ಕಾರಿ ಶಾಲಾ ಕಾಲೇಜಿನಲ್ಲಿ ಮೂಲ ಸೌಕರ್ಯ ಒದಗಿಸಲು ಕೇಂದ್ರದಿಂದ ಸುಮಾರು 2 ಸಾವಿರ ಕೋಟಿ ಬೇಡಿಕೆಗಾಗಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಸಾಲಿನಿಂದ ನಬಾರ್ಡ್ ಹಣವನ್ನು ಶಿಕ್ಷಣ ಇಲಾಖೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಇಲಾಖೆ ಸಚಿವ ರೇವಣ್ಣ ಅವರು ಸಹಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಪ್ರಸ್ತಾವನೆ ನೀಡುವಂತೆಯೂ ರೇವಣ್ಣ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ನಬಾರ್ಡ್‌ನಿಂದ ನೇರವಾಗಿ ಉನ್ನತ ಶಿಕ್ಷಣ ಇಲಾಖೆಗೆ ಅನುದಾನ ನೀಡಲು ಅವಕಾಶಗಳಿಲ್ಲ. ಆದರೆ, ಪಾಲಿಟೆಕ್ನಿಕ್ ಕಾಲೇಜುಗಳಿಗೆ ಅನುದಾನ ನೀಡಬಹುದಾದ ಸಾಧ್ಯತೆ ಇದೆ ಎಂಬುದನ್ನು ನಬಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸರ್ಕಾರಿ ಕಾಲೇಜು ಮತ್ತು ಪಾಲಿಟೆಕ್ನಿಕ್ ಅಭಿವೃದ್ಧಿಗೆ ವಿಸ್ತೃತ ವರದಿ ನೀಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಹಾಗೆಯೇ 100 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ತಲಾ 3 ಕೋಟಿಯನ್ನು ನಬಾರ್ಡ್ ಅನುದಾನದಲ್ಲಿ ಬಳಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಮೊದಲಾದವರು ಸಭೆಯಲ್ಲಿದ್ದರು.