ಭಟ್ಕಳ: ಮೊಗೇರರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಏ.18 ರೊಳಗೆ ವಿಧಾನಸಭೆಯಲ್ಲಿ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ಮೊಗೇರ ಸಮಾಜದ ಮುಖಂಡರ ಸಭೆ ಕರೆದು ಕಾನೂನಾತ್ಮಕ ಅಂಶದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಗುರುವಾರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊಗೇರರು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕೆಂದು ಕಳೆದ ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದು, ಮುಖಂಡರ ಬಳಿ ಧರಣಿ ವಾಪಸ್ ಪಡೆಯಿರಿ ಎಂದು ಹೇಳಿದ್ದೇನೆ.
ಧರಣಿ ವಾಪಸ್ ಪಡೆಯುವ ವಿಶ್ವಾಸವಿದೆ ಎಂದರು. ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊಗೇರ ಸಮಾಜದ ಕಾನೂನು ಸಲಹೆಗಾರ ಮತ್ತು ಮುಖಂಡ ನಾಗರಾಜ ಈ.ಎಚ್. ಮಾತನಾಡಿ, ಮೊಗೇರರ ಸಂಕಷ್ಟಮಯ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿದ ಮುಖ್ಯಮಂತ್ರಿ ದೇವರಾಜ ಅರಸು ಅವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರು. ಮೊಗೇರರು 2011ರ ವರೆಗೂ ಪರಿಶಿಷ್ಟ ಪ್ರಮಾಣ ಪತ್ರ ಪಡೆದಿದ್ದು, ಅದರ ನಂತರ ಸರಕಾರ ಸ್ಥಗಿತಗೊಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾವು ಹೈಕೋರ್ಟ್, ಸುಪ್ರೀಂ ಕೋರ್ಟ್, ರಾಷ್ಟ್ರೀಯ ಪರಿಶಿಷ್ಟ ಆಯೋಗ, ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಸಿದಾಗ ನಮ್ಮ ಪರವಾಗಿ ತೀರ್ಪು ಬಂದಿದೆ. ಆದರೆ ರಾಜ್ಯ ಸರಕಾರ ಮಾತ್ರ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದೆ. ಕಳೆದ ಹತ್ತನ್ನೆರಡು ವರ್ಷಗಳಿಂದ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಿಗದೇ ಇರುವುದರಿಂದ ಮಕ್ಕಳ ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ, ಸರಕಾರ ಸೌಲಭ್ಯ ಪಡೆಯಲು ಭಾರೀ ಹಿನ್ನಡೆಯಾಗಿದೆ. ಅದೂ ಅಲ್ಲದೇ ಇತ್ತೀಚೆಗೆ ಸರಕಾರ ಮೊಗೇರರಿಗೆ ಪ್ರವರ್ಗ 1ರಲ್ಲಿ ಜಾತಿ ಪ್ರಮಾಣ ಪತ್ರ ಮುದ್ರಿಸಿ ಗೊಂದಲವನ್ನುಂಟು ಮಾಡಿದೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದ ಉತ್ತರ ಕನ್ನಡ ಮೊಗೇರರಿಗೆ ಸರಕಾರ ಪ್ರವರ್ಗ 1ರಲ್ಲಿನ ಜಾತಿ ಪ್ರಮಾಣ ಪತ್ರ ನೀಡಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಪಡೆಯುವುದಿಲ್ಲ. ಕೋರ್ಟಿನ ಆದೇಶದಂತೆ ಸರಕಾರ ಮೊಗೇರರಿಗೆ ಈ ಹಿಂದೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕು. ಸಮಾಜ ಕಲ್ಯಾಣ ಸಚಿವರು ತಾವೇ ಆಗಿರುವುದರಿಂದ ಈ ಮೊದಲಿನಂತೆ ಜಾತಿ ಪ್ರಮಾಣ ಪತ್ರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ, ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಆದಷ್ಟು ಶೀಘ್ರದಲ್ಲಿ ನಮ್ಮ ಸಮಸ್ಯೆ ಬಗೆಹರಿಸಬೇಕೆಂದು. ನಮ್ಮ ಬೇಡಿಕೆ ಈಡೇರುವ ವರೆಗೂ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೊಗೇರ ಮುಖಂಡರ ಅಹವಾಲುಗಳನ್ನು ಶಾಂತಚಿತ್ತದಿಂದ ಕೇಳಿದರು. ಶಾಸಕ ಸುನೀಲ ನಾಯ್ಕ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಎಸಿ ಮಮತಾದೇವಿ, ಡಿವೈಎಸ್ಪಿ ಬೆಳ್ಳಿಯಪ್ಪ, ತಹಶೀಲ್ದಾರ್ ಸುಮಂತ, ಸಮಾಜ ಕಲ್ಯಾಣ ಅಧಿಕಾರಿಗಳು, ಮೊಗೇರ ಸಮಾಜದ ಹೋರಾಟ ಸಮಿತಿ ಅಧ್ಯಕ್ಷ ಎಫ್.ಕೆ. ಮೊಗೇರ, ಕುಮಾರ ಹೆಬಳೆ, ದಿವಾಕರ ಮೊಗೇರ, ವೆಂಕಟ್ರಮಣ ಮೊಗೇರ, ಅನಂತ ಮೊಗೇರ, ಜಟಕಾ ಮೊಗೇರ, ಪುಂಡಲೀಕ ಹೆಬಳೆ ಸೇರಿದಂತೆ ಹಲವು ಮುಖಂಡರಿದ್ದರು.