Advertisement

ಜ್ಯೋತಿಷ್ಯ ಬದಲಿಗೆ ವಿಜ್ಞಾನ ಚರ್ಚಿಸಿ

02:23 PM Aug 27, 2019 | Suhan S |

ಹುಮನಾಬಾದ: ಭವಿಷ್ಯ ರೂಪಿಸುವ ಶಕ್ತಿ ನಮ್ಮ ಕೈಯಲ್ಲೇ ಇದೆ. ಅದು ನಮ್ಮ ಪ್ರಯತ್ನವನ್ನು ಅವಲಂಬಿಸಿದೆ. ಈ ವಿಷಯ ತಿಳಿದಿದ್ದರೂ ಕೂಡ ಇಂದು ಕೇವಲ ಗ್ರಾಮೀಣ ಭಾಗದ ಜನರಲ್ಲದೇ ವಿದ್ಯಾವಂತರೂ ಕೂಡ ತಮ್ಮ ಕೈಯನ್ನು ಜ್ಯೋತಿಷಿಗಳ ಕೈಗೆ ಇಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ತುಮಕೂರು ವಿಶ್ವವಿದ್ಯಾಲಯ ನಿವೃತ್ತ ಉಪಕುಪಲತಿ ಪ್ರೊ| ಎ.ಎಚ್.ರಾಜಾಸಾಬ್‌ ಹೇಳಿದರು.

Advertisement

ಪಟ್ಟಣದ ಶ್ರೀ ವೀರಭದ್ರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರಾವಿಪ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ವಿಜ್ಞಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಜಗತ್ತು ವೈಜ್ಞಾನಿಕವಾಗಿ ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ನಿತ್ಯ ಬೆಳಗಾದರೇ ಜೋತಿಷ್ಯ ಮತ್ತು ವಾಸ್ತುಶಾಸ್ತ್ರ ಪ್ರದರ್ಶಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಗಂಟೆಗಟ್ಟಲೇ ಮೌಡ್ಯ ವಿಷಯ ಕುರಿತು ಚರ್ಚಿಸುವ ಬದಲಿಗೆ ಆ ಸಮಯವನ್ನು ವಿಜ್ಞಾನ ವಿಷಯಗಳ ಚರ್ಚೆಗಾಗಿ ಮೀಸಲಾಗಿಸುವ ಮೂಲಕ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಕಂಕಣ ಬದ್ಧವಾಗಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ಶ್ರಮಿಸುತ್ತಿರುವ ಸಂಸ್ಥೆಗಳ ಜೊತೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಸರ್‌ ಸಿ.ವಿ.ರಾಮನ್‌ ಅವರ ನಂತರ ವಿಜ್ಞಾನ ವಿಷಯದಲ್ಲಿ ಮತ್ಯಾರು ನೊಬೆಲ್ ಪ್ರಶ‌ಸ್ತಿ ಪಡೆಯಲಾಗಿಲ್ಲ. ಕಲಾ ಕ್ಷೇತ್ರಕ್ಕೆ ಮೀಸಲಾಗಿದ್ದರೆ ಬಹುತೇಕ ಆ ಅವಕಾಶ ಭಾರತವಲ್ಲದೇ ಬೇರಾವ ರಾಷ್ಟ್ರಕ್ಕೂ ದಕ್ಕುತ್ತಿರಲಿಲ್ಲ. ವಿಜ್ಞಾನ ವಿಷಯ ಕುರಿತು ಸಂಶೋಧಿಸುವ ಕಾರ್ಯಕ್ಕೆ ಯುವ ಪೀಳಿಗೆ ಆಸಕ್ತಿ ತೋರಿಸುತ್ತಿಲ್ಲ. ಕಾರಣ ಪ್ರಸ್ತುತ ವಯುಕರು ವೈಜ್ಞಾನಿಕ ವಿಷಯಗಳ ಅಧ್ಯಯನದ ಬಗ್ಗೆ ಆಸಕ್ತಿ ವಹಿಸಿ, ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಸಂಪೂರ್ಣ ತೊಡೆದು ಹಾಕಲು ಶ್ರಮಿಸಬೇಕು. ಜನರಲ್ಲಿ ವಿಶ್ವಾಸ ಇರಬೇಕು ಆದರೆ ಅಂಧ ವಿಶ್ವಾಸ ಇರಬಾರದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ| ವೀರಣ್ಣ ತುಪ್ಪದ್‌ ಮಾತನಾಡಿ, ಮೌಡ್ಯ ತೊರೆಯದೇ ದೇಶದ ಪ್ರಗತಿ ಅಸಾಧ್ಯ. ಈ ನಿಟ್ಟಿನಲ್ಲಿ ಹೊಸ ಪೀಳಿಗೆ ಮೌಡ್ಯಗಳ ಮೊರೆಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದೇ ಉಜ್ವಲವಾಗಿ ರೂಪಿಸಿಕೊಳ್ಳಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೆವಾಡ್‌ ಮಾತನಾಡಿ, ದೇಶದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಆಗಮಿಸಿದ ಎಲ್ಲ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿ, ಯಶಸ್ಸಿಗೊಳಿಸಿದ್ದೀರಿ. ಸ್ಪರ್ಧೆಯಲ್ಲಿ ಸೋಲು-ಗೆಲುವು ಖಚಿತ. ಬಂದವರು ಸೋತೆವು-ಗೆದ್ದೆವು ಎಂಬುದಕಿಂತ ಸ್ಪರ್ಧೆಯಲ್ಲಿ ಭಾಗವಹಿಸಿ, ಹೊಸ ಜ್ಞಾನ ಗಳಿಸಿದೆವು ಎಂದು ಸಂತಸ ಪಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ರಾಜ್ಯ ಕಾರ್ಯಕಾರಿಣಿ ಮಾಜಿ ಸದಸ್ಯ ಮಹಾರುದ್ರಪ್ಪ ಆಣದೂರ ವೇದಿಕೆಯಲ್ಲಿದ್ದರು. ಸ್ಪರ್ಧೆ ರಾಜ್ಯ ಕಾರ್ಯಕಾರಿಣಿ ಜಗನ್ನಾಥ ಹಲಮಡ್ಗಿ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ಕಸಾಪ ಅಧ್ಯಕ್ಷ ಸಚ್ಚಿದಾನಂದ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next