ದಾವಣಗೆರೆ:ಯಾರದ್ದೋ ಶವವನ್ನು ಇನ್ನೊಬ್ಬರಿಗೆ ನೀಡಿ ಯಡವಟ್ಟು ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ದಾವಣಗೆರೆ ತಾಲೂಕಿನ ಬೂದಾಳ್ ಗ್ರಾಮದ ಕೆಂಚಮ್ಮ(60) ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೆಂಚಮ್ಮರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದ್ದರು. ಬುಧವಾರ ಕೆಂಚಮ್ಮ ಅವರ ಶವಪರೀಕ್ಷೆ ಮಾಡಿ ಶವವನ್ನು ನೀಡಲಾಗುವುದು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು.
ಏತನ್ಮಧ್ಯೆ ಮಲೇಬೆನ್ನೂರು ಗ್ರಾಮದ 28 ವರ್ಷದ ಶಿಲ್ಪಾ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದರು. ಬುಧವಾರ ಶವ ಪರೀಕ್ಷೆ ನಡೆಸಲ್ಲ ಎಂದು ಕೆಂಚಮ್ಮ ಅವರ ಶವವನ್ನು ಶವಾಗಾರಕ್ಕೆ ಶಿಫ್ಟ್ ಮಾಡಿದ್ದರು. ಶವಾಗಾರದ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಂಚಮ್ಮ ಹಾಗೂ ಶಿಲ್ಪಾಳ ಶವ ಇರಿಸಲಾಗಿತ್ತು.
ಬುಧವಾರ ರಾತ್ರಿ ಆಸ್ಪತ್ರೆಯ ಸಿಬ್ಬಂದಿ ಯುವತಿಯ ಶವದ ಬದಲು ಕೆಂಚಮ್ಮ ಶವವನ್ನು ಮಲೇಬೆನ್ನೂರು ಗ್ರಾಮಸ್ಥರಿಗೆ ನೀಡಿದ್ದರು. ಅವರು ಕೂಡಾ ಶವವನ್ನು ನೋಡದಯೇ ತಾಯಿಯ ಶವಸಂಸ್ಕಾರ ನಡೆಸಿಬಿಟ್ಟಿದ್ದರು. ಗುರುವಾರ ಬೆಳಗ್ಗೆ ಕೆಂಚಮ್ಮ ಸಂಬಂಧಿಕರು ಬಂದಾಗ ಶವಾಗಾರದಲ್ಲಿ ಶವ ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾರೆ, ಇದರಿಂದ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡಾಗ ವಿಷಯ ಬಯಲಾಗಿತ್ತು ಎಂದು ವರದಿ ವಿವರಿಸಿದೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ದೂರು ನೀಡುವುದಾಗಿ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.