ಹುಬ್ಬಳ್ಳಿ: ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ವ್ಯಾಜ್ಯಗಳ ವಿರುದ್ಧ ಮಾತ್ರ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿರುವುದು ಖಂಡನೀಯ ಎಂದು ಶಾಸಕ ಪ್ರಸಾದ ಅಬ್ಬಯ್ಯ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಸಂದೀಲ್ ಕುಮಾರ ಅವರ ವಿರುದ್ಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿ ಆದೇಶ ಹೊರಡಿಸಿರುವುದನ್ನು ಖಂಡಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್‌ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಾತಿ ಪ್ರಮಾಣಪತ್ರ ಪ್ರಶ್ನಿಸಿ ದಾಖಲಿಸಲಾದ ವ್ಯಾಜ್ಯಗಳು ನ್ಯಾಯಾಲಯದಲಿದ್ದರೂ 10 ವರ್ಷಗಳ ಕಾಲ ಪಾಲಿಕೆ ಸದಸ್ಯರಾಗಿ ಆಡಳಿತ ನಡೆಸಿದ ಬಿಜೆಪಿ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು, ಪಾಲಿಕೆಯ ಕಾಂಗ್ರೆಸ್ ಸದಸ್ಯರ ವಿರದ್ಧ ಕ್ರಮ ಕೈಗೊಳ್ಳುತ್ತಿರುವುದು ಖೇದಕರ ಸಂಗತಿ. ಪಕ್ಷಾತೀತ ಮತ್ತು ಪಾರದರ್ಶಕವಾಗಿ ಇರಬೇಕಿದ್ದ ಆಡಳಿತ ಮತ್ತು ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೈಗೊಂಬೆಯಂತೆ ವರ್ತಿಸುತ್ತಿರುವುದು ಸರಿಯಲ್ಲ.
ಇದನ್ನು ಕಾಂಗ್ರೆಸ್ ಯಾವತ್ತೂ ಸಹಿಸುವುದಿಲ್ಲ ಎಂದರು. ಕೂಡಲೇ ಕಾಂಗ್ರೆಸ್ ಸದಸ್ಯ ಸಂದೀಲ್ ಕುಮಾರ ವಿರುದ್ಧ ಹೊರಡಿಸಿರುವ ನಿರ್ಬಂಧದ ಆದೇಶವನ್ನು ಹಿಂಪಡೆಯಬೇಕು. ಪಾಲಿಕೆ ಕಾಂಗ್ರೆಸ್ ಸದಸ್ಯರಾದ ಕವಿತಾ ಕಬ್ಬೇರ ಅವರ ವಿರುದ್ಧವೂ ಸಂದೀಲ್‌ಕುಮಾರ ಅವರ ಮಾದರಿಯಲ್ಲೇ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅ ಧಿಕಾರಿಗಳ ಆಂತರಿಕ ಮಸಲತನ್ನು ಕೈ ಬಿಡಬೇಕು.
ಬಿಜೆಪಿ, ಕಾಂಗ್ರೆಸ್ ಎನ್ನದೇ ಪ್ರತಿಯೊಬ್ಬರ ವಿರುದ್ಧ ಪಾರದರ್ಶಕ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರಗತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಗ್ರಾಮೀಣ ಜಿಲ್ಲಾಧ್ಯಕ್ಷ ಅಧ್ಯಕ್ಷ ಅನೀಲಕುಮಾರ ಪಾಟೀಲ, ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ್ ಮಣಿಕುಂಟ್ಲಾ, ಸದಾನಂದ ಡಂಗನವರ, ದಾನಪ್ಪ ಕಬ್ಬೇರ, ಕವಿತಾ ಕಬ್ಬೇರ, ರಾಬರ್ಟ್ ದದ್ದಾಪುರಿ ಇನ್ನಿತರರಿದ್ದರು.
ಅನುದಾನ ಹಂಚಿಕೆಯಲ್ಲಿಯೂ ತಾರತಮ್ಯ
ಪ್ರಸಕ್ತ ವರ್ಷದಲ್ಲಿ ನೀಡಲಾಗದ 15ನೇ ಹಣಕಾಸು ಅನುದಾನ ಹಂಚಿಕೆಯಲ್ಲಿ ಮಹಾಪೌರರು ತಾರತಮ್ಯ ಮಾಡಿದ್ದಾರೆ. ಪಾಲಿಕೆ ಸರ್ವ ಸದಸ್ಯರಿಗೂ ಸಮಾನವಾಗಿ ಹಂಚಿಕೆಯಾಗಬೇಕಿದ್ದ ಅನುದಾನದಲ್ಲಿ ಬಿಜೆಪಿ ಸದಸ್ಯರಿಗೆ ಹೆಚ್ಚು ಪ್ರಮಾಣದ ಅನುದಾನ, ಕಾಂಗ್ರೆಸ್ ಸದಸ್ಯರಿಗೆ ಕಡಿಮೆ ಅನುದಾನ ಹಂಚಿಕೆ ಮಾಡಿದ್ದಾರೆ. ಹಣಕಾಸು ಹಂಚಿಕೆ ಒಪ್ಪಿಗೆ ಸೂಚಿಸಿ ಕಾಮಗಾರಿಗೆ ಪಟ್ಟಿ ನೀಡದೇ ಇದ್ದರೆ, ಕಾಂಗ್ರೆಸ್ ಸದಸ್ಯರ ಅನುದಾನವನ್ನು ಬೇರೆ ಕಾಮಗಾರಿಗೆ ನೀಡುವುದಾಗಿ ದರ್ಪ ಮೆರೆಯುತ್ತಿದ್ದಾರೆ. ಅದು ಸರ್ಕಾರದ ಅನುದಾನ ಎಲ್ಲ ಸದಸ್ಯರಿಗೂ ಸಮಾನವಾಗಿ ಹಂಚಬೇಕು. ಇಲ್ಲ ವಾದರೇ ಕಾಂಗ್ರಸ್ ಸದಸ್ಯರ್ಯಾರು ಆ ಅನುದಾನ ಪಡೆಯುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.