Advertisement

ಲೋಕೋಪಯೋಗಿ ಇಲಾಖೆಯಲ್ಲಿ ಬಡ್ತಿ ತಾರತಮ್ಯ

03:45 AM Jan 12, 2017 | |

ಬೆಂಗಳೂರು: ಸರ್ಕಾರದ ಆದೇಶವಿದೆ, ಸುಪ್ರೀಂ ಕೋರ್ಟ್‌ ತೀರ್ಪು ಕೂಡ ಇದೆ. ಅಷ್ಟೇ ಅಲ್ಲ, ವಿಧಾನ ಮಂಡಲದ ಎಸ್‌ಸಿ, ಎಸ್ಟಿ ಕಲ್ಯಾಣ ಸಮಿತಿ, ಅರ್ಜಿಗಳ ಸಮಿತಿ, ಇಲಾಖೆ ಸಚಿವರು ಕೂಡ ತಾರತಮ್ಯ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ದೇವರು ಕೊಟ್ಟರೂ ಪೂಜಾರಿ ಬಿಡ ಎನ್ನುವಂತಾಗಿದೆ ಬಡ್ತಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರಿಂಗ್‌ ಡಿಪ್ಲೊಮಾ ಮುಗಿಸಿ ಎಂಜಿನಿಯರ್‌ಗಳಾಗಿ ನೇಮಕಗೊಂಡ ನೂರಾರು ಮಂದಿಯ ಪರಿಸ್ಥಿತಿ.

Advertisement

ಹೌದು, ಯಾವುದೇ ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಕನಿಷ್ಠ ಮೂರು ಬಡ್ತಿ ಪಡೆಯಲು ಅರ್ಹರಾಗಿರುತ್ತಾರೆ ಎಂಬ ಸರ್ಕಾರಿ ಆದೇಶವಿದ್ದರೂ ಎಂಜಿನಿಯರಿಂಗ್‌ ಡಿಪ್ಲೊಮಾ ಮುಗಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್‌ ಎಂಜಿನಿಯರ್‌ (ಸಿವಿಲ್‌) ಹುದ್ದೆಗೆ ನೇಮಕಗೊಂಡವರಿಗೆ ಇದು ಅನ್ವಯವಾಗುತ್ತಿಲ್ಲ. ಅಷ್ಟೇ ಅಲ್ಲ, ಬಡ್ತಿ ವಿಚಾರದಲ್ಲಿ ಪದವಿ ಮತ್ತು ಡಿಪ್ಲೊಮಾ ಮಾಡಿದವರನ್ನು ಸರ್ಕಾರ ಸಮನಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೂ ಅದು ಪಾಲನೆಯಾಗುತ್ತಿಲ್ಲ.

ಇನ್ನೊಂದೆಡೆ ಕೇಂದ್ರ ಸರ್ಕಾರದ ಲೋಕೋಪಯೋಗಿ, ನಗರಾಭಿವೃದ್ಧಿ ಸಚಿವಾಲಯಗಳಷ್ಟೇ ಏಕೆ, ರಾಜ್ಯದ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ರೀತಿಯ ತಾರತಮ್ಯ ಇಲ್ಲದೆ, ಎಂಜಿನಿಯರಿಂಗ್‌ ಪದವಿ ಅಥವಾ ಡಿಪ್ಲೊಮಾ ಮಾಡಿ ಎಂಜಿನಿಯರ್‌ ಹುದ್ದೆಗೆ ನೇಮಕಗೊಂಡ ಬಳಿಕ ಬಡ್ತಿಯಲ್ಲಿ ಅವಕಾಶವಿದೆ. ಆದರೆ, ರಾಜ್ಯದ ಲೋಕೋಪಯೋಗಿ ಇಲಾಖೆ ಮಾತ್ರ ಈ ನಿಯಮದ ಬಗ್ಗೆ ಇನ್ನೂ ಕಣ್ಣುಮುಚ್ಚಿ ಕುಳಿತಿದೆ. ಹೀಗಾಗಿ ಡಿಪ್ಲೊಮಾ ಮುಗಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್‌ ಎಂಜಿನಿಯರ್‌ (ಸಿವಿಲ್‌) ಹುದ್ದೆಗೆ ಸೇರಿದವರು ಅರ್ಹತೆ ಇದ್ದರೂ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಏರಲು ಆಗದಂತಾಗಿದೆ.

ಏನಿದು ವಿವಾದ?: 
ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ಗಳನ್ನು ನೇಮಕ ಮಾಡುವಾಗ ಶೇ. 68ರಷ್ಟು ಎಂಜಿನಿಯರಿಂಗ್‌ ಪದವೀಧರರು ಮತ್ತು ಶೇ. 32ರಷ್ಟು ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರನ್ನು ಪರಿಗಣಿಸಲಾಗುತ್ತದೆ. ಎಂಜಿನಿಯರಿಂಗ್‌ ಪದವೀಧರರಿಗೆ ಸಹಾಯಕ ಎಂಜಿನಿಯರ್‌ ಹುದ್ದೆ ನೀಡಿದರೆ, ಡಿಪ್ಲೊಮಾ ಎಂಜಿನಿಯರ್‌ಗಳನ್ನು ಕಿರಿಯ ಎಂಜಿನಿಯರ್‌ (ಸಿವಿಲ್‌) ಎಂದು ನೇಮಕ ಮಾಡಲಾಗುತ್ತದೆ.

ಸುಮಾರು 12 ವರ್ಷದ ಸೇವೆ ಬಳಿಕ ಇವರಿಗೆ ಬಡ್ತಿ ನೀಡಲಾಗುತ್ತಿದ್ದು, ಆ ಅವಧಿಯಲ್ಲಿ ಶೇ.30ರಷ್ಟು ಡಿಪ್ಲೊಮಾ ಎಂಜಿನಿಯರ್‌ಗಳಿಗೆ ಸಹಾಯಕ ಎಂಜಿನಿಯರ್‌-2 ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಇದಾಗಿ 9 ವರ್ಷದ ಸೇವೆ ಬಳಿಕ ಅವರು ಮತ್ತೂಂದು ಬಡ್ತಿಗೆ ಅರ್ಹರಾಗುತ್ತಾರೆ. ಆ ಅವಧಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌-1 ಹುದ್ದೆ ನೀಡಿದರೆ, ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌-2 ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರಿಗೆ ಶೇ. 20ರಷ್ಟು ಮಾತ್ರ ಅವಕಾಶವಿರುತ್ತದೆ. ಉಳಿದ ಶೇ. 80 ಭಾಗ ಎಂಜಿನಿಯರಿಂಗ್‌ ಪದವಿ ಪಡೆದವರಿಗೆ ಮೀಸಲಿಡಲಾಗುತ್ತದೆ.

Advertisement

ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರ ಬಡ್ತಿ ಭಾಗ್ಯಕ್ಕೆ ಇಲ್ಲಿಗೆ ತೆರೆ ಬೀಳುತ್ತದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯಿಂದ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡುವಾಗ ಕೇವಲ ಎಂಜಿನಿಯರಿಂಗ್‌ ಪದವಿ ಪಡೆದವರನ್ನು ಮಾತ್ರ ಪರಿಗಣಿಸಲಾಗುತ್ತದೆಯೇ ಹೊರತು ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರಿಗೆ ಅವಕಾಶವಿಲ್ಲ. ಇದಕ್ಕೆ ಕಾರಣ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅದಕ್ಕೆ ಅವಕಾಶ ಇಲ್ಲದೇ ಇರುವುದು.

ಯಾರೇ ಹೇಳಿದರೂ ಬದಲಾಗುತ್ತಿಲ್ಲ ನಿಯಮ: 
ಈ ತಾರತಮ್ಯದ ಕುರಿತು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಎಂಜಿನಿಯರ್‌ಗಳ ಕ್ಷೇಮಾಭಿವೃದ್ಧಿ ಸಂಘವು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿದಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ, ಅರ್ಜಿಗಳ ಸಮಿತಿ, ಇಲಾಖೆ ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ದೂರು ಸಲ್ಲಿಸಿದೆ. ತಮ್ಮ ಬೇಡಿಕೆಗೆ ಪೂರಕವಾಗಿ ಸರ್ಕಾರದ ಆದೇಶ, ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರತಿಗಳನ್ನೂ ಒದಗಿಸಿ, ಎಂಜಿನಿಯರಿಂಗ್‌ ಪದವೀಧರರಂತೆ ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿದವರಿಗೂ ಕನಿಷ್ಠ ಮೂರು ಬಡ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ಅದರಂತೆ ಕಲ್ಯಾಣ ಸಮಿತಿಯು ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಶಿಫಾರಸು ಮಾಡಿದೆ. ಇನ್ನೊಂದೆಡೆ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರೂ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ 2015ರಲ್ಲೇ ಪತ್ರ ಬರೆದಿದ್ದಾರೆ. 

ಅಷ್ಟೇ ಅಲ್ಲ, ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿ ಎಂಜಿನಿಯರ್‌ ಹುದ್ದೆಗೆ ಸೇರಿದವರಿಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡುವ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2014ರಲ್ಲೇ ಸಮಿತಿ ರಚಿಸಿ ಎರಡು ತಿಂಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೂ ತೀರ್ಮಾನ ಕೈಗೊಂಡಿಲ್ಲ.

ಇಂದು ಮತ್ತೆ ಸಭೆ
ಎಂಜಿನಿಯರಿಂಗ್‌ ಡಿಪ್ಲೊಮಾ ಮಾಡಿ ಎಂಜಿನಿಯರ್‌ ಹುದ್ದೆಗೆ ಸೇರಿದವರಿಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡುವ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿ ಸಲ್ಲಿಸಿರುವ ಮನವಿ ಹಿನ್ನೆಲೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯ ಸಭೆ ಗುರುವಾರ (ಜ. 12) ವಿಕಾಸಸೌಧದಲ್ಲಿ ನಡೆಯಲಿದೆ. ಈ ಬಾರಿಯಾದರೂ ನಿಯಮಾವಳಿ ತಿದ್ದುಪಡಿಗೆ ಸಮಿತಿ ಒಪ್ಪಿಗೆ ನೀಡಿ ತಮ್ಮ ಬೇಡಿಕೆ ಈಡೇರುವುದೇ ಎಂದು ಬಡ್ತಿಗೆ ಕಾಯುತ್ತಿರುವ ಎಂಜಿನಿಯರಿಂಗ್‌ ಡಿಪ್ಲೊಮಾ ಕೋರ್ಸ್‌ ಪೂರೈಸಿ ಸೇವೆಗೆ ಸೇರಿದವರು ಕಾಯುತ್ತಿದ್ದಾರೆ.

ಪ.ಜಾತಿ, ಪಂಗಡದವರೇ ಹೆಚ್ಚು
ಲೋಕೋಪಯೋಗಿ ಇಲಾಖೆಯಲ್ಲಿ ಪ್ರಸ್ತುತ 465 ಮಂದಿ ಎಂಜಿನಿಯರಿಂಗ್‌ ಡಿಪ್ಲೊಮಾದವರಿದ್ದಾರೆ. ಈ ಪೈಕಿ ಸಾಕಷ್ಟು ಮಂದಿ ಕಾರ್ಯನಿರ್ವಾಹಕ ಹುದ್ದೆಗೆ ಬಡ್ತಿ ಹೊಂದಲು ಅರ್ಹತೆ ಹೊಂದಿರುವವರು. ವಿಶೇಷವೆಂದರೆ, ಎಂಜಿನಿಯರಿಂಗ್‌ ಪದವಿಗೆ ಅವಕಾಶ ಸಿಗದೆ ಡಿಪ್ಲೊಮಾ ಮಾಡಿ ಸೇವೆಗೆ ಸೇರಿದವರಲ್ಲಿ ಹೆಚ್ಚಿನ ಭಾಗ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಹೀಗಾಗಿ ಬಡ್ತಿ ವಿಚಾರದಲ್ಲಿ ಅನ್ಯಾಯಕ್ಕೊಳಗಾದವರೂ ಈ ವರ್ಗದವರೇ ಆಗಿದ್ದಾರೆ.

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next