Advertisement

ವಿವೇಚನೆಯ ಮತ ದೇಶಕ್ಕೆ ಹಿತ

11:49 AM Apr 01, 2019 | |

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ದೊಡ್ಡ ಶಕ್ತಿ. ಮತದಾನ ನಮ್ಮ ಹಕ್ಕು. ಸೂಕ್ತ ವ್ಯಕ್ತಿಗೆ ಮತ ಹಾಕುವ ಮೂಲಕ ಉತ್ತಮ ಆಡಳಿತದ ನಿರೀಕ್ಷೆ ಇಟ್ಟುಕೊಳ್ಳಬೇಕು ಎಂದು ಪತ್ರಕರ್ತ ಶಿವರಂಜನ್‌ ಸತ್ಯಂಪೇಟೆ ಹೇಳಿದರು.

Advertisement

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕದ ವತಿಯಿಂದ ನಗರದ ಹೊರ ಹೊರವಲಯದ ಕೆಸರಟಗಿ ರಸ್ತೆಯಲ್ಲಿರುವ ಸಮಾಧಾನ ಧ್ಯಾನ ಕೇಂದ್ರದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ “ರಾಷ್ಟ್ರನಿರ್ಮಾಣದಲ್ಲಿ ಮತದಾನದ ಮಹತ್ವ’ ವಿಷಯ ಕುರಿತು ಅವರು ಮಾತನಾಡಿದರು.

ಮತ ಎಂದರೆ ಆಯ್ಕೆ, ಅಭಿಪ್ರಾಯ, ಒಲವು, ನಿಲುವು ಎಂದರ್ಥ. ಇಂತಹ ಮತ ಸ್ವತಃ ಮತದಾರನದ್ದೇ ಎನ್ನುವುದು ಈಗಿನ ಕಾಲದ ದೊಡ್ಡ ಪ್ರಶ್ನೆಯಾಗಿದೆ. ಚುನಾವಣೆ ಎನ್ನುವುದು ಪ್ರಹಸನವಾಗಿ ಪರಿಣಮಿಸಿದ್ದು, ಇಂತಹ ಸಂದರ್ಭದಲ್ಲಿ ಮತದಾರ ತನ್ನ ಹಕ್ಕು ಹಾಗೂ ಕರ್ತವ್ಯವನ್ನು ಪ್ರಾಮಾಣಿಕ ರೀತಿಯಿಂದ ಚಲಾಯಿಸಬೇಕು ಎಂದರು.

ಹಣ, ಹೆಂಡ ಹಾಗೂ ಇನ್ನಿತರ ಆಮಿಷಗಳಿಗೆ ಬಲಿಯಾಗದೆ ನಿರ್ಭಯವಾಗಿ ಮತ ಚಲಾಯಿಸಬೇಕು. ಈ ಮೂಲಕ ಸದೃಢ ರಾಷ್ಟ್ರ ನಿರ್ಮಾಣ ಮಾಡಬೇಕು. ಈ ಮೂಲಕ ನಮ್ಮ ನಿಜವಾದ ದೇಶಪ್ರೇಮ ಮೆರೆಯಬೇಕು ಎಂದು ಕರೆ ನೀಡಿದರು.

ವಿವೇಚನೆಯಿಂದ ಹಾಕಿದ ಮತ ದೇಶದ ಜನರಿಗೆ ಎಂದೆಂದಿಗೂ ಹಿತವಾಗುವುದರಿಂದ ನಮ್ಮ ಮತ ದೇಶಕ್ಕೆ, ನಮ್ಮ ಮತ ಅಭಿವೃದ್ಧಿಗೆ ಎನ್ನುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಈಶ್ವರಯ್ಯ ಮಠ ಮಾತನಾಡಿ, ಪ್ರತಿಶತ ಮತದಾನದಿಂದ
ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಜಾತಿ, ಧರ್ಮ, ಹಣ, ಅಂತಸ್ತುಗಳನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಸಂವಿಧಾನದ ಆಶಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಗುಪ್ತ ಮತದಾನವೇ ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು, ವಿವೇಚನೆ, ಆಲೋಚನೆಯಿಂದ ಮತದಾನ ಮಾಡಬೇಕು. ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಭಾರತದ ಪ್ರಜಾಪ್ರಭುತ್ವದ ಹಿರಿತನ ಕಾಪಾಡಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಶಿವರಾಜ ಮೂಲಗೆ, ಎಂಎಸ್‌ಐ ಪದವಿ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ಡಾ| ಮಹೇಶ ಗಂವ್ಹಾರ ಮುಖ್ಯ ಅತಿಥಿಗಳಾಗಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಪ್ರೊ| ಮೋಹನರಾಜ ಪತ್ತಾರ, ಡಾ| ಫರವೀನ್‌ ರಾಜೇಸಾಬ್‌ ಹಾಜರಿದ್ದರು.

ಸಾದಿಯಾ ಅಂಜುಮ್‌ ಸ್ವಾಗತಿಸಿದರು, ಪ್ರೀತಿಕಾ ನಿರೂಪಿಸಿದರು, ಫರಾ ವಂದಿಸಿದರು. ನಂತರ ರಾಣಿ
ಚನ್ನಮ್ಮ ತಂಡದ ಶಿಬಿರಾರ್ಥಿಗಳಿಂದ ನೃತ್ಯ, ಕೋಲಾಟ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು
ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next