ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಟ್ಟಲಾಗುತ್ತಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸುವಲ್ಲಿ ತಾರತಮ್ಯ ಧೋರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಗರಸಭೆ ಹಾಗೂ ತಾಪಂ ಕಚೇರಿ ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಇಷ್ಟು ವರ್ಷಗಳ ಕಾಲ ಎಂದೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಬ್ಯಾನರ್‌ಗಳನ್ನು ಕಟ್ಟುವ ಕೆಟ್ಟ ಚಾಳಿಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಆಗುವ ರೀತಿಯಲ್ಲಿ ಬ್ಯಾನರ್‌ಗಳನ್ನು ಕಟ್ಟುವುದೇ ಕೆಲವರಿಗೆದೊಡ್ಡ ಸಾಧನೆಯಾಗಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಸಹ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಿಯಮ ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲರಿಗೂ ಒಂದೇ ನಿಯಮ ಇರಲಿ: ಶುಲ್ಕ ಪಾವತಿ ಇಲ್ಲದೇ ಇರುವ ಯಾವುದೇ ಬ್ಯಾನರ್‌ಗಳನ್ನು ಕಟ್ಟಲು ಅವಕಾಶ ನೀಡಬಾರದು. ಆದರೆ, ಕೆಲವರಿಗೆ ಮಾತ್ರ
ತಿಂಗಳುಗಟ್ಟಲೆ ಸಾರ್ವಜನಿಕ ರಸ್ತೆ ಬದಿಗಳಲ್ಲಿ ಬ್ಯಾನರ್ ಕಟ್ಟಲು ಅವಕಾಶ ನೀಡುವ ಮೂಲಕ ತಾರತಮ್ಯ ನಿಯಮವನ್ನು ಪಾಲಿಸುತ್ತಿದ್ದಾರೆ. ಎಲ್ಲರಿಗೂ ಒಂದೇ ರೀತಿಯ ನಿಯಮ ಪಾಲಿಸಬೇಕು ಎಂದು ಆಗ್ರಹಿಸಿದರು.
ತೆರವು ಮಾಡುವಂತೆ ಸೂಚನೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಶ್ರೀನಾಥಗೌಡ ಅವರು, ತಾಲೂಕಿನ ಎಲ್ಲಾ 28 ಗ್ರಾಪಂಗಳಲ್ಲೂ ಅನಧಿಕೃತವಾಗಿ ಕಟ್ಟಲಾಗಿರುವ ಬ್ಯಾನರ್ ಗಳನ್ನು ತಕ್ಷಣ ತೆರವುಗೊಳಿಸುವಂತೆ ಈಗಾಗಲೇ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಆದೇಶ ನೀಡಲಾಗಿದೆ.ಅನುಮತಿ ಪಡೆದರೂ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಬ್ಯಾನರ್ ಕಟ್ಟಿದ್ದರು ತೆರವುಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ. ಭೈರೇಗೌಡ, ಕಸಬಾಬ್ಲಾಕ್ ಅಧ್ಯಕ್ಷ ವೆಂಕಟೇಶ್, ಕೆಪಿಸಿಸಿ ಸದಸ್ಯ ಬಿ.ಜಿ. ಹೇಮಂತರಾಜ್, ಆದಿತ್ಯ, ನಾಗೇಶ್ ಹಾಗೂ ನಗರಸಭಾ ಸದಸ್ಯರು, ಮುಖಂಡರು ಇದ್ದರು.