ಚಾಮರಾಜನಗರ: ಕರ್ನಾಟಕ ಹಾಲು ಮಹಾಮಂಡಲಿದಿಂದ ರಾಜ್ಯಾದ್ಯಂತ ಕ್ರಿಸ್‌ಮಸ್ ಹಾಗೂ ನೂತನ ವರ್ಷ ಆಚರಣೆ ಅಂಗವಾಗಿ ಜ.2ರವರೆಗೆ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ನಂದಿನಿಸಿಹಿ ಉತ್ಪನ್ನಗಳ ರಿಯಾಯಿತಿ ಮಾರಾಟ ಮಾಡಲಾಗುತ್ತಿದ್ದು, ನಂದಿನಿ ಸಿಹಿ ಉತ್ಸವಕ್ಕೆ ಜಿಲ್ಲಾ ಕೇಂದ್ರದಲ್ಲಿ ಚಾಲನೆ ನೀಡಲಾಗಿದೆ.
ಜಿಲ್ಲೆಯ ಐದು ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಮತ್ತು ಪಟ್ಟಣಗಳಲ್ಲಿರುವ ಅಧಿಕೃತ ನಂದಿನಿ ಮಳಿಗೆಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮುಖ ಬೆಲೆಗೆ ಶೇ.10ರಷ್ಟು ರಿಯಾಯಿತಿಯನ್ನು ನೀಡಿ, ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಹನೂರಿನಲ್ಲಿ ಚಾಮುಲ್ ಅಧ್ಯಕ್ಷ ಸಿ.ಎಂ. ಗುರುಮಲ್ಲಪ್ಪ, ಕೊಳ್ಳೇಗಾಲದಲ್ಲಿ ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಚಾಮರಾಜನಗರದಲ್ಲಿ ಚಾಮುಲ್ ನಿರ್ದೇಶಕ ಮಲೆಯೂರು ರವಿಶಂಕರ್ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ: ಚಾಮರಾಜನಗರ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಅಸ್ಪತ್ರೆಯ ಮುಂಭಾಗದ ನಂದಿನಿ ಮಳಿಗೆಯನ್ನು ಚಾಮುಲ್ ನಿರ್ದೇಶಕ ರವಿಶಂಕರ್ ಉದ್ಘಾಟಿಸಿ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿದರು. ಜೊತೆಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಪ್ರದರ್ಶನ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಗುಣಮಟ್ಟದ ಹಾಲಿನಿಂದ ಸಿಹಿ ತಯಾರು: ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಕೆಎಂಎಫ್ನಿಂದ ಹೊಸ ವರ್ಷಾಚರಣೆ ಮತ್ತು ಕ್ರಿಸ್‌ಮಸ್ ಹಬ್ಬಕ್ಕೆ ವಿಶೇಷ ರಿಯಾಯಿತಿ ದರದಲ್ಲಿ ಸಿಹಿ ಉತ್ಪನ್ನಗಳ ಮಾರಾಟವನ್ನು ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಗ್ರಾಹಕರು ಗುಣಮಟ್ಟದ ನಂದಿನಿ ಹಾಲಿನಿಂದ ತಯಾರು ಮಾಡಿರುವ ಉತ್ಕೃಷ್ಠವಾದ ಸಿಹಿ ಉತ್ಪನ್ನಗಳನ್ನು ಸೇವನೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಬೇಕು. ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚಾಮುಲ್ ಬೆಳೆಸುವುದು ನಮ್ಮ ಕರ್ತವ್ಯ: ಒಂದು ವಾರಗಳ ಕಾಲ ಈ ಉತ್ಸವ ನಡೆಯಲಿದ್ದು, ನಂದಿನಿ ಹಾಲಿನ ಮಳಿಗೆಗಳಲ್ಲಿ ಈ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ನೀವು ಖರೀದಿ ಮಾಡುವ ಒಂದು ಪ್ಯಾಕೆಟ್ ದರದಲ್ಲಿ ಶೇ.10ರಷ್ಟು ರಿಯಾಯಿತಿ ಗ್ರಾಹಕರಿಗೆ ದೊರೆಯಲಿದೆ. ರೈತರ ಸಂಸ್ಥೆಯಾಗಿರುವ ಚಾಮುಲ್ ಅನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೇಲ್ಲರ ಕರ್ತವ್ಯವಾಗಿದೆ.
ಹೀಗಾಗಿ ರೈತರು ಸಹ ಈ ಉತ್ಸವದಲ್ಲಿ ಭಾಗಿಯಾಗಿ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿ ಮಾಡಿ ಸೇವಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಾಮುಲ್ ಸಹಾಯಕ ವ್ಯವಸ್ಥಾಪಕ ಶಿವಕುಮಾರ್, ಮಾರುಕಟ್ಟೆ ಅಧಿಕಾರಿ ಸೈಯದ್, ರಾಘವೇಂದ್ರ ರಾವ್, ರವಿ, ನೂತನ, ಇಳಿಯಮೂರ್ತಿ, ಶಿವಪ್ರಸಾದ್ ಹಾಜರಿದ್ದರು.