ಹೊಸದಿಲ್ಲಿ : “ನನ್ನ ಮೊಬೈಲ್ ಸಂಪರ್ಕವನ್ನು ಬೇಕಾದರೂ ಕಳೆದುಕೊಳ್ಳುತ್ತೇನೆ,ಆದರೆ ಅದನ್ನು ಆಧಾರ್‌ಗೆ ಜೋಡಿಸುವುದಿಲ್ಲ” ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಮೊಬೈಲ್ ಬಳಕೆದಾರರು ತಮ್ಮ ಫೋನ್ ಸಂಪರ್ಕವನ್ನು ಆಧಾರ್ ನಂಬರ್‌ಗೆ ಜೋಡಿಸಿಕೊಳ್ಳಬೇಕು; ಇಲ್ಲವಾದರೆ ಸಂಪರ್ಕ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಟೆಲಿಕಾಂ ಇಲಾಖೆಯ ಸೂಚನೆಯ ಔಚಿತ್ಯವನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, “ನಾನು ನನ್ನ ಮೊಬೈಲ್ ಫೋನಿಗೆ ಆಧಾರ ಲಿಂಕ್ ಮಾಡುವುದಿಲ್ಲ; ಬೇಕಿದ್ದರೆ ಅವರು ನನ್ನ ಫೋನ್ ಡಿಸ್‌ಕನೆಕ್ಟ್ ಮಾಡಲಿ’ ಎಂದು ಇಂದು ಬುಧವಾರ ಹೇಳಿದರು.
ಮಮತಾ ಬ್ಯಾನರ್ಜಿ ಅವರ ಹಿಂದಿನಿಂದಲೂ ಆಧಾರ್ ಕಡ್ಡಾಯ ಮಾಡುವ ಕೇಂದ್ರವನ್ನು ಟೀಕಿಸುತ್ತಲೆ ಬಂದಿದ್ದಾರೆ; ಇದು ಬಡವರ ವಿರೋಧಿ ಮತ್ತು ಜನರ ಖಾಸಗಿತನಕ್ಕೆ ಲಗ್ಗೆ ಹಾಕುವ ಯೋಜನೆ ಎಂದು ಟೀಕಿಸಿದ್ದರು.
ಈ ವಿಷಯದಲ್ಲಿ ಮಮತಾ ಒಂಟಿ ಅಲ್ಲ; ಆಧಾರ್ ಸಂಖ್ಯೆಯನ್ನು ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗೆ ಜೋಡಿಸುವುದನ್ನು ಪ್ರಶ್ನಿಸಿರುವ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದೆ ಇತ್ಯರ್ಥಕ್ಕೆ ಬಾಕಿ ಇವೆ.
ಆಧಾರ್ ಕಡ್ಡಾಯಗೊಳಿಸುವ ಸರಕಾರದ ಕ್ರಮವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅ.30ರಂದು ಕೈಗೆತ್ತಿಕೊಳ್ಳಲಿದೆ.