Advertisement

ಬಹಿರಂಗ ಚರ್ಚೆ ಸಿದ್ಧವೆಂದರೂ ಸಿದ್ದು ಉತ್ತರಿಸಿಲ್ಲ

01:32 PM Mar 24, 2019 | Lakshmi GovindaRaju |

ಮೈಸೂರು: ಮೈಸೂರು-ಕೊಡಗು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಕಾಂಗ್ರೆಸ್‌ಗೆ ಬಿಡಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಾಪ್‌ ಸಿಂಹ ಸೇರಿದಂತೆ ರಾಜ್ಯದ ಬಿಜೆಪಿ ಸಂಸದರ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ.

Advertisement

ಈ ಬಗ್ಗೆ ನಾವು ಚರ್ಚೆಗೆ ಸಿದ್ಧ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದರೂ ಈವರೆಗೆ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದು, ನಾವು ಸಾಧನೆಯ ಆಧಾರದ ಮೇಲೆಯೇ ಮತಯಾಚನೆ ಮಾಡಲಿದ್ದೇವೆ ಎಂದರು.

ಅಭ್ಯರ್ಥಿ ಮುಖ್ಯವಲ್ಲ: ಶಾಸಕ, ಸಂಸದ, ವಿಧಾನಪರಿಷತ್‌ ಸದಸ್ಯ, ಸಚಿವ ಹೀಗೆ ಬಿಜೆಪಿಯಿಂದ ಎಲ್ಲ ರೀತಿಯ ಸವಲತ್ತು ಪಡೆದವರು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಹೆಸರೇಳದೆ ಟೀಕಿಸಿದ ರಾಮದಾಸ್‌, ಅಭ್ಯರ್ಥಿ ಯಾರೆಂಬುದು ನಮಗೆ ಮುಖ್ಯವಾಗುವುದೇ ಇಲ್ಲ.

1996ರಲ್ಲಿ ಕ್ಷೇತ್ರದಲ್ಲಿ ಶೇ.32ರಷ್ಟು ಮತಗಳಿಕೆಯೊಂದಿಗೆ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ನಂತರದ ಪ್ರತಿ ಚುನಾವಣೆಯಲ್ಲೂ ಬಿಜೆಪಿಯ ಮತಗಳಿಕೆಯ ಶೇಕಡಾವಾರು ಪ್ರಮಾಣ ಹೆಚ್ಚುತ್ತಲೇ ಇದೆ, ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶಾಸಕ ಎಲ್‌.ನಾಗೇಂದ್ರ ಮಾತನಾಡಿ, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತ ಕೊಡಿಸುವುದಾಗಿ ಹೇಳಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಚಾಲಕ ಎನ್‌.ವಿ.ಫ‌ಣೀಶ್‌, ಮುಖಂಡ ಭಾರತೀಶ್‌, ನಗರ ಬಿಜೆಪಿ ಮಾಧ್ಯಮ ಪ್ರಮುಖ್‌ ಪ್ರಭಾಕರ ಸಿಂಧ್ಯಾ ಸುದ್ದಿಗೋಷ್ಠಿಯಲ್ಲಿದ್ದರು.

ನಾಳೆ ಶೋಭಾಯಾತ್ರೆಯೊಂದಿಗೆ ಪ್ರತಾಪ್‌ ಸಿಂಹ ನಾಮಪತ್ರ ಸಲ್ಲಿಕೆ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

ಅಂದು ಬೆಳಗ್ಗೆ 10ಗಂಟೆಗೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೂತ್‌ಮಟ್ಟದ ಕಾರ್ಯಕರ್ತರ ಬೃಹತ್‌ ಶೋಭಾಯಾತ್ರೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮಧ್ಯಾಹ್ನ 12.30ಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಸೇರಿದಂತೆ ಪಕ್ಷದ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next