ಕುಂದಾಪುರ: ದೇಸೀ ಆಹಾರ ಉತ್ಪನ್ನಗಳ ವಿರುದ್ಧ ವಿದೇಶಿ ಉತ್ಪನ್ನಗಳು ಅಪಪ್ರಚಾರ ಮಾಡಿ ಮಾರುಕಟ್ಟೆ ಹಿಡಿತ ಸಾಧಿಸುತ್ತವೆ. ಅದಕ್ಕಾಗಿ ದೇಸೀ ಉತ್ಪನ್ನಗಳ ಕುರಿತು, ಸಿರಿ ಧಾನ್ಯಗಳ ಕುರಿತು, ನಮ್ಮ ರೈತರ ಬೆಳೆ ಕುರಿತು ವ್ಯಾಪಕ ಪ್ರಚಾರ ಅಗತ್ಯವಿದೆ. ಸಿರಿ ಧಾನ್ಯಗಳ ಖಾದ್ಯದ ಮುಂದೆ ವಿದೇಶಿ ಆಹಾರ ಏನೇನೂ ಅಲ್ಲ ಎಂದು ಉದ್ಯಮಿ ಜಿ. ದತ್ತಾನಂದ ಗಂಗೊಳ್ಳಿ ಹೇಳಿದರು.
ಅವರು ಸೋಮವಾರ ಇಲ್ಲಿನ ಕುಂದೇಶ್ವರ ದೇವಸ್ಥಾನದ ವಠಾರದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ನೇತೃತ್ವದಲ್ಲಿ ನಡೆದ ಸಿರಿ ಧಾನ್ಯ ಮೇಳ, ಸಿರಿ ಧಾನ್ಯ ಆಹಾರ ಉತ್ಪನ್ನ ಪ್ರದರ್ಶನ, ಸಿರಿ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸಿರಿ ಉತ್ಪನ್ನಗಳ ಮೇಳವನ್ನು ಕುಂದೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಾನಂದ ಛಾತ್ರ ಉದ್ಘಾಟಿಸಿದರು.
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ್ ಪಿ.ಕೆ., ಕುಂದಾಪುರ ತಾಲೂಕು ಯೋಜನಾಧಿಕಾರಿ ಮುರಳೀಧರ ಕೆ. ಶೆಟ್ಟಿ, ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಸತೀಶ್ ಗಾಣಿಗ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಂಜು ಬಿಲ್ಲವ, ಮೈಲಾರೇಶ್ವರ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪಯ್ಯ, ಲಯನ್ಸ್ ಕ್ಲಬ್ ಸಿಟಿ ಅಧ್ಯಕ್ಷ ಕೆ.ಎನ್. ಅಶೋಕ್ ಆಚಾರ್ಯ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಎಚ್.ಎಂ. ಕೃಷ್ಣ ಪೂಜಾರಿ, ಜೆಸಿಐಯ ಮುತಾರಿಫ್ ತೆಕ್ಕಟ್ಟೆ, ರಾಮಕ್ಷತ್ರಿಯ ಯುವಕ ಮಂಡಲ ಅಧ್ಯಕ್ಷ ಗಣೇಶ್, ರಾಮಕ್ಷತ್ರಿಯ ಮಹಿಳಾ ಮಂಡಲದ ಅಧ್ಯಕ್ಷೆ ಶೈಲಾ ಶರಶ್ಚಂದ್ರ ಉಪಸ್ಥಿತರಿದ್ದರು.
ತಾಲೂಕು ಕೃಷಿ ಅಧಿಕಾರಿ ಚೇತನ್ ನಿರ್ವಹಿಸಿ, ವಲಯ ಮೇಲ್ವಿಚಾರಕ ಪಾಂಡ್ಯನ್ ಸ್ವಾಗತಿಸಿ, ಸಿರಿ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ರಾಮ್ ಕುಮಾರ್ ವಂದಿಸಿದರು.
ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಕುಂದೇಶ್ವರ ದೇವಾಲಯದ ಆವರಣದಲ್ಲಿ ಜ. 21ರಿಂದ 28ರ ವರೆಗೆ ಸಿರಿ ಧಾನ್ಯ ಮೇಳ ಹಾಗೂ ಸಿರಿ ಆಹಾರ ಮೇಳ ನಡೆಯಲಿದೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೇಳದಲ್ಲಿ ಏನೇನಿವೆ?
ಮೇಳದಲ್ಲಿ ಏಕದಳ ಧಾನ್ಯಗಳಾದ ನವಣೆ, ಹಾರಕ, ಊದಲು, ಸಾವೆ, ಕೊರಲೆ, ಬರಗು, ರಾಗಿ, ಸಜ್ಜೆ, ಜೋಳ ಮೊದಲಾದ ಸಿರಿ ಧಾನ್ಯಗಳಿವೆ. ಜತೆಗೆ ಸಿರಿಧಾನ್ಯಗಳಿಂದ ಮಾಡಿದ ಆಹಾರ ಪ್ರದರ್ಶನ, ಪ್ರಾತ್ಯಕ್ಷಿಕೆ ಇದೆ. ಸಿರಿಧಾನ್ಯ ಖಾದ್ಯ ಸವಿಯಲು ಕೂಡಾ ಲಭ್ಯ. ಗ್ರಾಮೀಣ ಮಹಿಳೆಯರು ತಯಾರಿಸಿದ ಸಿರಿ ಸಂಸ್ಥೆಯ ವಿವಿಧ ಉತ್ಪನ್ನಗಳು, ಖಾದಿ ಬಟ್ಟೆಗಳೂ ಲಭ್ಯವಿವೆೆ.