Advertisement

ದಲಿತ ರೈತರಿಗೆ ಕೃಷಿ ಸಮ್ಮಾನ್‌ ಸಹಾಯಧನ ವಿತರಣೆ ಲೋಪ ಚರ್ಚೆ- ಸದನದಲ್ಲಿ ಉದಯವಾಣಿ ವರದಿ ಪ್ರಸ್ತಾಪ-

08:29 PM Dec 22, 2022 | Team Udayavani |

ಬೆಳಗಾವಿ: ರಾಜ್ಯದ ಎಸ್ಸಿ/ಎಸ್ಟಿ ಸಮಯದಾಯದ ರೈತರಿಗೆ ಕೃಷಿ ಸಮ್ಮಾನ್‌ ಅಡಿಯಲ್ಲಿ ಸಹಾಯಧನ ವಿತರಣೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ವಿಧಾನ ಪರಿಷತ್‌ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ದಲಿತರಿಗೆ ಕೃಷಿ ಸಮ್ಮಾನ್‌ ಸಹಾಯಧನ ಸಿಗದಿರುವ ಕುರಿತು  “ಉದಯವಾಣಿ’ಯಲ್ಲಿ ಗುರುವಾರ ಪ್ರಕಟವಾದ ವರದಿ ಕುರಿತಂತೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ  ಪ್ರಸ್ತಾವಿಸಿ, ರಾಜ್ಯದ ಎಸ್ಸಿ/ಎಸ್ಟಿ ಸಮುದಾಯದ ಅರ್ಧದಷ್ಟು ರೈತರಿಗೆ ಕೃಷಿ ಸಮ್ಮಾನ್‌ ಸಹಾಯಧನ ಪಾವತಿಯಾಗಿಲ್ಲ. ಖಾತೆ ಬದಲಾವಣೆ ಸಹಿತ ಇನ್ನಿತರ ಸಮಸ್ಯೆಗಳಿಂದಾಗಿ ಕೃಷಿ ಸಮ್ಮಾನ್‌ ಸಹಾಯಧನ ಪಾವತಿಯಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತು ಉದಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟವಾಗಿದೆ. ಎಸ್ಸಿ/ಎಸ್ಟಿ ಸಮುದಾಯದವರಿಗೆ ಸಹಾಯಧನ ನೀಡಲು ಇಲಾಖೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಸಚಿವರು, ಕೃಷಿ ಸಮ್ಮಾನ್‌ ಯೋಜನೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದು. ಎಲ್ಲ ವರ್ಗದ ರೈತರಿಗೂ ಸಹಾಯಧನ ನೀಡುವುದು ಅದರ ಉದ್ದೇಶ. ಎಸ್ಸಿ/ಎಸ್ಟಿ ಸಮುದಾಯದವರಿಗೆ ಕೃಷಿ ಸಮ್ಮಾನ್‌ ಲಾಭ ದೊರೆಯದಿರುವ ಬಗ್ಗೆ ಕೃಷಿ ಸಚಿವರೊಂದಿಗೆ ಚರ್ಚಿಸಲಾಗುವುದು. ಮೃತ ರೈತರ ಹೆಸರಿನಲ್ಲಿರುವ ಖಾತೆ ಅವರ ಮಕ್ಕಳ ಹೆಸರಿಗೆ ಬದಲಾಗದಿರುವುದರಿಂದ ಈ ರೀತಿ ಸಮಸ್ಯೆಯಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಕುರಿತು ಪರಿಶೀಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಅವಧಿ ಮುಗಿದ ಕಿಟ್‌ ಬಳಕೆ: ಸಚಿವರೊಂದಿಗೆ ಚರ್ಚಿಸಿ ಕ್ರಮ

ಬೆಳಗಾವಿ: ಕೊರೊನಾ ಸೋಂಕು ಪತ್ತೆಗೆ ಸಂಬಂಧಿಸಿದ ಖರೀದಿಸಲಾದ ಕಿಟ್‌ಗಳ ಅವಧಿ ಮುಕ್ತಾಯವಾಗಿದ್ದರೂ ಅದನ್ನು ಬಳಸುತ್ತಿರುವ ಕುರಿತಂತೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಕ್ರಮದ ಕುರಿತು ತಿಳಿಸಲಾಗುವುದು ಎಂದು ವಿಧಾನ ಪರಿಷತ್‌ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಕೊರೊನಾ ಸೋಂಕು ಪತ್ತೆಯ ಕಿಟ್‌ಗಳ ಅವಧಿ ಮುಗಿದಿದ್ದರೂ ಅದರಲ್ಲೇ ಜನರನ್ನು ಪರೀಕ್ಷೆಗೊಳಪಡಿಸುತ್ತಿರುವ ಕುರಿತಂತೆ ಉದಯವಾಣಿಯಲ್ಲಿ ಮಂಗಳವಾರ ಪ್ರಕಟವಾದ ವರದಿ ಕುರಿತಂತೆ ಕಾಂಗ್ರೆಸ್‌ನ ಕೆ. ಹರೀಶ್‌ಕುಮಾರ್‌ ಪ್ರಸ್ತಾವಿಸಿ, ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿದೆ. ಅದರ ನಡುವೆ  ಸೋಂಕು ಪತ್ತೆಗಾಗಿ ಬಳಸುವ ಕಿಟ್‌ಗಳ ಅವಧಿ ಮುಗಿದಿದ್ದರೂ ಅದನ್ನೇ ಬಳಸಲಾಗುತ್ತಿದೆ. ಹೀಗೆ ಕಿಟ್‌ಗಳನ್ನು ಬಳಸುವುದಕ್ಕೂ ಮುನ್ನ ಐಸಿಎಂಆರ್‌ನಿಂದ ಅನುಮತಿ ಪಡೆಯಬೇಕಿತ್ತು. ಆದರೆ  ಅಂಥ ಯಾವುದೇ ಕ್ರಮ ಕೈಗೊಳ್ಳದೆ ಕಿಟ್‌ಗಳನ್ನು ಬಳಸಲಾಗುತ್ತಿದೆ. ಈ ಕುರಿತು ಆರೋಗ್ಯ ಸಚಿವರು ಉತ್ತರಿಸಬೇಕು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ಬಂದಿದೆಯೇ ಎಂಬ ಬಗ್ಗೆ ಚರ್ಚಿಸುತ್ತೇನೆ. ಜತೆಗೆ ಆರೋಗ್ಯ ಸಚಿವರೊಂದಿಗೆ ಮಾತನಾಡಿ ಸೂಕ್ತ ಉತ್ತರ ಕೊಡಿಸುತ್ತೇನೆ ಎಂದರು.

ಆಗ ಸಭಾಪತಿ ಹೊರಟ್ಟಿ ಅವರು, ಕೊರೊನಾ ಸೋಂಕಿನ ತೀವ್ರತೆ ಮತ್ತೆ ಹೆಚ್ಚುತ್ತಿದೆ. ಹೀಗಾಗಿ ಕೊರೊನಾ ಬಗೆಗಿನ ಪ್ರಶ್ನೆಗಳಿಗೆ ಒಂದು ದಿನದಲ್ಲಿ ಉತ್ತರಿಸಿ ಹಾಗೂ ಕೊರೊನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next