Advertisement

ವಿಪತ್ತು ನಿರ್ವಹಣೆ: ಕರಾವಳಿಗೆ ಎನ್‌ಡಿಆರ್‌ಎಫ್ ತಂಡ

12:55 AM Apr 23, 2019 | sudhir |

ಉಡುಪಿ: ಮಳೆಗಾಲದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ರಾಷ್ಟ್ರೀಯ ವಿಪತ್ತು ಪರಿಹಾರ ತಂಡದ (ಎನ್‌ಡಿಆರ್‌ಎಫ್) ಒಂದು ಬೆಟಾಲಿಯನ್‌ ಮೇ ತಿಂಗಳ ಅಂತ್ಯಕ್ಕೆ ಆಗಮಿಸಲಿದೆ ಎಂದು ರಾಜ್ಯ ಸರಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ರಾಜ್‌ಕುಮಾರ್‌ ಖತ್ರಿ ತಿಳಿಸಿದ್ದಾರೆ.

Advertisement

ಅವರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರಾವಳಿಯ ಮೂರು ಜಿಲ್ಲೆಗಳ ವಿಪತ್ತು ನಿರ್ವಹಣೆ ಕಾರ್ಯಕ್ರಮಗಳ ಮತ್ತು ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದರು.

ಎನ್‌ಡಿಆರ್‌ಎಫ್ ದಕ್ಷಿಣ ವಲಯದ ಕಚೇರಿ ಆಂಧ್ರಪ್ರದೇಶದ ಗುಂಟೂರಿನಲ್ಲಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ತಂಡವು ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಕ್ಷಿಪ್ರವಾಗಿ ತಲುಪಲು ವಿಳಂಬವಾಗುತ್ತಿದೆ. ಕಳೆದ ವರ್ಷ ಉಭಯ ಜಿಲ್ಲೆಗಳಲ್ಲಿ ತೀವ್ರ ಅತಿವೃಷ್ಟಿ ಸಂಭವಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ನೆರವಾಗಲು ಎನ್‌ಡಿಆರ್‌ಎಫ್ನ ಒಂದು ತಂಡವನ್ನು ನಿಯೋಜಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಎರಡೂ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಎನ್‌ಡಿಆರ್‌ಎಫ್ ತಂಡವು ಸುರತ್ಕಲ್‌ನಲ್ಲಿ ಮೊಕ್ಕಾಂ ಹೂಡುವುದು ಎಂದರು.

ವಿಪತ್ತು ತಂಗುದಾಣ, ಸಮುದಾಯ ಭವನ
ವಿಪತ್ತು ನಿರ್ವಹಣೆ ಯೋಜನೆಗಳ ವಿವರ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣ ಯೋಜನೆಯ ಯೋಜನ ನಿರ್ದೇಶಕ ರಾಜ್‌ಕುಮಾರ್‌ ಪೂಜಾರಿ, ವಿಪತ್ತುಗಳ ತುರ್ತು ಸಂದರ್ಭಗಳಿಗೆ ಬಳಕೆಯಾಗಲು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಒಂಬತ್ತುಕೆರೆಯಲ್ಲಿ ಸುಮಾರು 270 ಲ.ರೂ. ವೆಚ್ಚದಲ್ಲಿ ವಿವಿಧೋದ್ದೇಶ ವಿಪತ್ತು ತಂಗುದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Advertisement

ಇದು ಶಾಲಾ ಕಟ್ಟಡವಾಗಿದ್ದು, ತುರ್ತು ಸಂದರ್ಭಗಳಲ್ಲಿ ವಿಪತ್ತು ನಿರ್ವಹಣ ಕಾರ್ಯಗಳಿಗೆ ಬಳಸಲಾಗುವುದು. ಸುರತ್ಕಲ್‌ ಹೊಸಬೆಟ್ಟು ಸಮೀಪ ಸುಮಾರು 380 ಲ.ರೂ. ವೆಚ್ಚದಲ್ಲಿ ಇದೇ ಉದ್ದೇಶಕ್ಕಾಗಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ ಎಂದರು.

ಈ ಕಟ್ಟಡಗಳು ಉಳಿದ ಸಮಯದಲ್ಲಿಯೂ ಇತರ ಸದುದ್ದೇಶಗಳಿಗೆ ಬಳಕೆಯಾಗುವಂತೆ ನೋಡಿ ಕೊಳ್ಳಲು ಕಂದಾಯ ಪ್ರಧಾನ ಕಾರ್ಯ ದರ್ಶಿ ಸೂಚಿಸಿದರು. ಎಡಿಸಿ ವಿದ್ಯಾಕುಮಾರಿ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಲಹೆ
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಒಂದೇ ಉಪವಿಭಾಗ ಇದ್ದು, ಏಳು ತಾಲೂಕುಗಳು ಇರುವುದರಿಂದ ಆಡಳಿತಾತ್ಮಕವಾಗಿ ಎರಡು ಉಪವಿಭಾಗ ರಚನೆ ಮಾಡುವ ಅಗತ್ಯವಿದೆ. ಅದೇ ರೀತಿ ನೂತನ ಹೋಬಳಿಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಹೊಸದಾಗಿ 4 ತಾಲೂಕುಗಳು ಸ್ಥಾಪನೆಯಾಗಿದ್ದು, ಇಲ್ಲಿ ಆಡಳಿತ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ ಎಂದರು. ಇದಕ್ಕೆ ಸ್ಪಂದಿಸಿದ ಡಾ| ರಾಜ್‌ಕುಮಾರ್‌ ಖತ್ರಿ, ನೂತನ ತಾಲೂಕುಗಳಿಗೆ ಮೂಲಸೌಕರ್ಯ ವ್ಯವಸ್ಥೆಗಳನ್ನು ಒದಗಿಸಿಕೊಡಲು ಮಂಜೂರಾತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next