ಮಂಗಳೂರು/ಉಡುಪಿ: ಮಾರ್ಚ್ ನಿಂದ ತೊಡಗಿ ಮೇ ಅಂತ್ಯದವರೆಗೆ ತೀವ್ರವಾದ ಬಿಸಿಲು ಹಾಗೂ ಕೆಲವೆಡೆ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ನೀಡಿದ್ದು, ಜನರು ಜಾಗರೂಕತೆ ವಹಿಸುವಂತೆ ದ.ಕ ಮತ್ತು ಉಡುಪಿ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಸೂಚಿಸಿದೆ.
ಬಿಸಿಗಾಳಿ(ಹೀಟ್‌ವೇವ್) ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಿಸಿಲು ಇರುವಾಗ ಕೊಡೆ ಬಳಸುವುದು, ತಂಪಿರುವ ಸ್ಥಳದಲ್ಲಿರುವುದು, ತೆಳುವಾದ ಮತ್ತು ಸಡಿಲವಾದ ಹತ್ತಿ ಉಡುಪು ಬಳಸುವುದು, ಆದಷ್ಟು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ ಎಂದು ತಿಳಿಸಿದೆ..
ಹಿರಿಯ ನಾಗರಿಕರು ಮತ್ತು ಮಕ್ಕಳು ಹೆಚ್ಚು ನೀರು ಕುಡಿಯಬೇಕು, ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಹೊರಾಂಗಣ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಿ, ಸಾಕಷ್ಟು ನೀರು, ಮಜ್ಜಿಗೆಯಂತಹ ದ್ರವ ಪದಾರ್ಥ ಸೇವಿಸಬೇಕು. ಹತ್ತಿ ಅಥವಾ ಟರ್ಬನ್ ಟೋಪಿ ಧರಿಸಬೇಕು. ಮನೆಯೊಳಗೆ ಸಾಕಷ್ಟು ಗಾಳಿಯಾಡುವಂತೆ ನೋಡಿಕೊಳ್ಳಬೇಕು.
ಹೀಟ್ ಸ್ಟ್ರೋಕ್‌ಗೆ ಒಳಗಾದ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ, ತಣ್ಣೀರಿನಿಂದ ಸ್ಪಾಂಜ್‌ಬಾತ್ ಮಾಡಿಸಬೇಕು. ಸುಧಾರಣೆ ಕಂಡುಬರದಿದ್ದರೆ ಕೂಲಿಂಗ್ ವ್ಯವಸ್ಥೆಯೊಂದಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು.
ಹೊರಗೆ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡ್ಡಾಯ ವಿರಾಮವನ್ನು ನಿಗದಿಪಡಿಸಬೇಕು. ಬಿಸಿಲಿನಿಂದ ವಿಟಮಿನ್ ಸಿ ಕೊರತೆ ಎದುರಾಗುವುದರಿಂದ ಹೆಚ್ಚು ನಿಂಬೆ ಹಣ್ಣಿನ ಪಾನಕ ಸೇವಿಸುವುದು ಉತ್ತಮ. ಸಕ್ಕರೆ ಬದಲಿಗೆ ಬೆಲ್ಲ ಸೂಕ್ತ. ಬೆಳಗ್ಗೆ ಎದ್ದ ಬಳಿಕ ತುಳಸಿ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟ ನೀರು ಬೆರೆಸಿ ಕುಡಿದರೆ ಕೆಲಸ ಮಾಡುವಾಗ ಸುಸ್ತಾಗುವುದಿಲ್ಲ. ಆಹಾರದಲ್ಲಿ ಮಸಾಲೆ ಪದಾರ್ಥ ಹೆಚ್ಚು ಬಳಸಬಾರದು. ತಣ್ಣೀರ ಸ್ನಾನ ಹೆಚ್ಚು ಸೂಕ್ತ. 5 ವರ್ಷದೊಳಗಿನ ಮಕ್ಕಳಿಗೆ ಪ್ರತಿ ಅರ್ಧಗಂಟೆಗೊಮ್ಮೆ ಒಂದು ಚಿಟಿಕೆ ಅಯೋಡಿನ್ ಉಪ್ಪು ಬೆರೆಸಿದ ನೀರು ಕುಡಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ತುರ್ತು ಸೇವೆಗಾಗಿ 1077 ಅಥವಾ 0824 – 2442590 (ಮಂಗಳೂರು) ಅಥವಾ 0820-2574802 (ಉಡುಪಿ) ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.