ಬೆಂಗಳೂರು: ಪರಿಸರದ ಮೇಲೆ ನಾವು ನಡೆಸುತ್ತಿರುವ ನಿರಂತರ ದಾಳಿ ನಿರೀಕ್ಷೆಗೂ ಮೀರಿದ ಅವಾಂತರಗಳ ಸೃಷ್ಟಿಗೆ ಕಾರಣವಾಗಿದೆ. ಇದು ಹೀಗೇ ಮುಂದುವರಿದರೆ, ದೊಡ್ಡ ಅನಾಹುತಗಳು ಎದುರಾಗಲಿವೆ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಕಳವಳ ವ್ಯಕ್ತಪಡಿಸಿದರು.
ನಗರದ ಭಾರತೀಯ ವಿದ್ಯಾ ಭವನದಲ್ಲಿ ಭಾನುವಾರ ವಿನಾಯಕ ಗೋಕಾಕ್ ವಾಙ್ಮ ಯ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರಿಗೆ “ಪ್ರೊ.ವಿ.ಕೃ.ಗೋಕಾಕ್ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಪರಿಸರಕ್ಕೆ ಮಾಡುತ್ತಿರುವ ಹಾನಿಯಿಂದ ಇಡೀ ಮನುಕುಲ ನಿರೀಕ್ಷೆ ಮಾಡಲಾಗದಷ್ಟು ಬದಲಾವಣೆ ಆಗುತ್ತಿದೆ. ಆದ್ದರಿಂದ ಈಗಿನಿಂದಲೇ ಎಲ್ಲರೂ ಪರಿಸರವನ್ನು ಉಳಿಸುವ ಪ್ರಯತ್ನಕ್ಕೆ ಕೈಜೋಡಿಸಬೇಕು. ಆ ಮೂಲಕ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಪುರಾತನ ಕಾಲದಿಂದಲೂ ಅನುಸರಿಸಿಕೊಂಡು ಬರುತ್ತಿರುವ ಪದ್ಧತಿ ಹಾಗೂ ಸಂಪ್ರದಾಯಗಳು ವಿಜ್ಞಾನ ಮತ್ತು ನೈಸರ್ಗಿಕ ವಿಧಾನಗಳೊಂದಿಗೆ ನಡೆದುಕೊಂಡು ಬಂದಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ ಎಂದರು.
ಪರಿಸರ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ನಾಗೇಶ್ ಹೆಗಡೆ ಅವರ ಲೇಖನಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅತ್ಯಂತ ಸರಳ ಭಾಷೆಯಲ್ಲಿ ಬರೆಯುವುದರಿಂದ ಮಕ್ಕಳು ಕೂಡ ಎಲ್ಲ ವಿಷಯಗಳನ್ನು ತಿಳಿಯಲು ಸುಲಭವಾಗಿದೆ. ಕನ್ನಡದಲ್ಲಿ ಇಂತಹ ಲೇಖಕರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.
ವಿದೇಶಿ ಸಂಸ್ಕೃತಿ ಒತ್ತಡ: ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಮಾತನಾಡಿ, ದೇಸಿ ಸಂಸ್ಕೃತಿ ಮರೆಮಾಚಿ ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಮಕ್ಕಳ ಮೇಲೆ ನಾವೇ ಒತ್ತಡ ಹೇರುತ್ತಿರುವುದು ದುರಂತ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ವಿದೇಶಿ ವಸ್ತುಗಳು ಇಡೀ ದೇಶದ ಮಾರುಕಟ್ಟೆಯನ್ನೇ ವ್ಯಾಪಿಸುತ್ತವೆ. ಅದಕ್ಕೆ ಮುಖ್ಯ ಕಾರಣ ಜಾಹೀರಾತು.
ಮಕ್ಕಳನ್ನೇ ಕೇಂದ್ರಿಕೃತಗೊಳಿಸುವ ಇಂತಹ ಜಾಹೀರಾತುಗಳಿಂದ ಪೋಷಕರು ಮಕ್ಕಳ ಒತ್ತಡಕ್ಕೆ ಮಣಿದು ಅಂತಹ ವಸ್ತುಗಳನ್ನು ಕೊಂಡು ತರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಹೇಳಿದರು. ಇವುಗಳ ಬಗ್ಗೆ ಎಚ್ಚರ ವಹಿಸಲು ಮಕ್ಕಳಿಗೆ ಸರಳವಾಗಿ ತಿಳಿಸುವ ಅಗತ್ಯವಿದ್ದು, ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.
ಜಾಹೀರಾತುಗಳನ್ನು ಆಧರಿಸಿ ವಸ್ತುಗಳ ಗುಣಮಟ್ಟ ಅಳೆಯುತ್ತಿರುವ ಇಂದಿನ ಪೀಳಿಗೆಗೆ ನೂರಾರು ವರ್ಷಗಳ ಹಿಂದಿನ ದೇಸಿ ವಸ್ತುಗಳ ಮಹತ್ವ ತಿಳಿಸಿಕೊಡುವ ಅಗತ್ಯವಿದೆ ಎಂದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್, ಟ್ರಸ್ಟ್ ಅಧ್ಯಕ್ಷ ವೈ.ಎನ್. ಗಂಗಾಧರ ಶೆಟ್ಟಿ, ವಿ.ಕೃ.ಗೋಕಾಕ್ ಪುತ್ರ ಅನಿಲ್ ಗೋಕಾಕ್ ಮತ್ತಿತರರು ಉಪಸ್ಥಿತರಿದ್ದರು.