Advertisement

ಆತಂಕ ಹೆಚ್ಚಿಸಿದ ನಿಜಾಮುದ್ದೀನ್‌ ಘಟನೆ…

09:13 AM Apr 03, 2020 | sudhir |

ಕೋವಿಡ್ 19 ವೈರಸ್‌ ಹಾವಳಿಯ ಈ ಸಮಯದಲ್ಲಿ ದಿಲ್ಲಿಯ ನಿಜಾಮುದ್ದೀನ್‌ ಪ್ರದೇಶವು ಚರ್ಚೆಯ ಮುನ್ನೆಲೆಗೆ ಬಂದಿದೆ. ಮಾರ್ಚ್‌ ತಿಂಗಳಲ್ಲಿ ಈ
ಪ್ರದೇಶದಲ್ಲಿರುವ ತಬ್ಲೀ ಜಮಾತ್‌ ಮರ್ಕಜ್‌ನಲ್ಲಿ ಧಾರ್ಮಿಕ ಸಮಾವೇಶ ನಡೆದಿತ್ತು. ಇದರಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಈಗ ಈ ಪ್ರದೇಶ ದೇಶದ ವೈರಸ್‌ ಹಾಟ್‌ಸ್ಪಾಟ್‌ ಆಗಿ ಬದಲಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸಿದ್ದವರು ದೇಶಾದ್ಯಂತ ಸಂಚರಿಸಿರುವುದರಿಂದ, ಅವರಲ್ಲಿ ಕೆಲವರು ಮೃತಪಟ್ಟಿರುವುದರಿಂದ 20ಕ್ಕೂ ಅಧಿಕ ರಾಜ್ಯಗಳ ಆಡಳಿತ ಯಂತ್ರಗಳು ರೋಗ ಪತ್ತೆ ಪ್ರಯತ್ನವನ್ನು ಹೆಚ್ಚಿಸಿವೆ. ಸರಕಾರದ ಸೂಚನೆಗಳನ್ನು ಉಲ್ಲಂ ಸಿ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ದಿಲ್ಲಿ ಪೊಲೀಸರು ಮಂಗಳವಾರ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿ¨ªಾರೆ.

Advertisement

ಏನಿದು ತಬ್ಲೀ ಜಮಾತ್‌?
ಇಂದು ಪ್ರಪಂಚದಾದ್ಯಂತ ತನ್ನ ನೆಲೆಯನ್ನು ವಿಸ್ತರಿಸಿರುವ ತಬ್ಲೀ ಜಮಾತ್‌ನ ಮೂಲವಿರುವುದು ಭಾರತದಲ್ಲಿ. 1926ರಲ್ಲಿ ಸ್ಥಾಪನೆಯಾದ ತಬ್ಲೀ ಜಮಾತ್‌ ದೇವ್‌ಬಂದ್‌ (Deoband) ಪರಂಪರೆಯ ಒಂದು ಶಾಖೆಯಾಗಿದ್ದು, ಭಾರತೀಯ ಇಸ್ಲಾಮಿಕ್‌ ವಿದ್ವಾಂಸ ಮೌಲಾನಾ ಮೊಹಮ್ಮದ್‌ ಇಲಿಯಾಸ್‌ ಇದರ ಸ್ಥಾಪಕರು. ಸಾಮಾನ್ಯ ಮುಸಲ್ಮಾನರಲ್ಲಿ, ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯನ್ನು ಪುನರ್ಜೀವಿತಗೊಳಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತ¤ದೆ.

ತಬ್ಲೀ ಜಮಾತ್‌ನ ಮೊದಲ ಸಭೆಯು ಭಾರತದಲ್ಲಿ 1941ರಲ್ಲಿ ಆಗಿತ್ತು. ಆಗ 25000 ಜನರು ಇದರಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಈ ಸಂಸ್ಥೆಯ ಕಾರ್ಯವ್ಯಾಪ್ತಿ ಭಾರತಕ್ಕಷ್ಟೇ ಸೀಮಿತವಾಗಿತ್ತು. ವಿಭಜನೆಯ ಅನಂತರ, ಇದರ ಶಾಖೆಗಳು ಹಾಗೂ ಅನುಯಾಯಿಗಳ ಸಂಖ್ಯೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ವಿಸ್ತರಣೆಗೊಂಡವು.

ಬ್ಲ್ಯಾಕ್‌ ಲಿಸ್ಟ್‌ಗೆ ವಿದೇಶಿಯರು
ಸಾವಿರಕ್ಕೂ ಅಧಿಕ ವಿದೇಶಿಯರು ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂಡೋನೇಷ್ಯಾ, ಥಾಯ್ಲೆಂಡ್‌, ಮಲೇಷ್ಯಾ, ನೇಪಾಲ, ಮ್ಯಾನ್ಮಾರ್‌, ಶ್ರೀಲಂಕಾ, ಬಾಂಗ್ಲಾದೇಶ, ಕಿರ್ಗಿಸ್ಥಾನ, ಫಿಜಿ, ಇಂಗ್ಲೆಂಡ್‌, ಫ್ರಾನ್ಸ್‌ನಿಂದ ಬಂದ ಇವರಲ್ಲಿ ಅನೇಕರು ದೇಶಾದ್ಯಂತ ಸಂಚರಿಸಿದ್ದಾರೆ. ಇನ್ನು ಪ್ರವಾಸಿ ವೀಸಾದ ಮೇಲೆ ಬಂದು ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ 824ಕ್ಕೂ ಅಧಿಕ ವಿದೇಶಿಯರನ್ನು ಗೃಹ ಸಚಿವಾಲಯ ಕಪ್ಪು ಪಟ್ಟಿಗೆ ಸೇರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಒಮ್ಮೆ ಕಪ್ಪುಪಟ್ಟಿಗೆ ಸೇರಿ ರಿಪೋರ್ಟ್‌ ಆದರೆ, ಅವರು ಮತ್ತೆ ಭಾರತಕ್ಕೆ ಬರುವುದು ಅಸಾಧ್ಯವಾಗುತ್ತದೆ.

Advertisement

ಎಲ್ಲಿಯವರೆಗೂ ವಿಸ್ತರಿಸಿದೆ?
ಈಗ ಪಾಕಿಸ್ಥಾನ, ಬಾಂಗ್ಲಾದೇಶ, ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ, ಮಧ್ಯಪ್ರಾಚ್ಯ-ಐರೋಪ್ಯ-ಆಫ್ರಿ ಕನ್‌ ರಾಷ್ಟ್ರಗಳು ಸೇರಿದಂತೆ 140 ರಾಷ್ಟ್ರಗಳಲ್ಲಿ ಇದರ ಕೇಂದ್ರಗಳಿವೆ. ತಬ್ಲೀ ಜಮಾತ್‌ ಬೆಂಬಲಿಗರಾಗಿರುವ ಮೌಲಾನಾ ಆಜಾದ್‌ ನ್ಯಾಶನಲ್‌ ಉರ್ದು ಯೂನಿವರ್ಸಿಟಿಯ ವೈಸ್‌ ಚಾನ್ಸಲರ್‌ ಜಫ‌ರ್‌ ಸರೇಶ್‌ವಾಲಾರ ಪ್ರಕಾರ, ಇದು ವಿಶ್ವದಲ್ಲೇ ಅತೀ ದೊಡ್ಡ ಮುಸ್ಲಿಂ ಸಂಸ್ಥೆಯಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಇದರ ಅನುಯಾಯಿಗಳು ಹಾಗೂ ಶಾಖೆಗಳು ಇವೆ.

ಅನ್ಯ ದೇಶಗಳಲ್ಲೂ ಸೋಂಕು
ಭಾರತದಂತೆಯೇ ನೆರೆಯ ಪಾಕಿಸ್ಥಾನದಲ್ಲೂ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ತಬ್ಲೀ ಜಮಾತ್‌ ನಡೆಸಿದ ಧಾರ್ಮಿಕ ಸಮಾವೇಶಗಳು ಕಾರಣವಾಗಿದೆ. ಮಾರ್ಚ್‌ 2ನೇ ವಾರದಲ್ಲಿ ಲಾಹೋರ್‌ ಸಮೀಪದ ರಾಯ್‌ವಿಂಡ್‌ ನಗರದಲ್ಲಿ 2,500ಕ್ಕೂ ಅಧಿಕ ಜನರು ಸೇರಿ, ಧಾರ್ಮಿಕ ಸಭೆ ನಡೆಸಿದ್ದರು. ಕೂಡಲೇ ಎಚ್ಚೆತ್ತ ಪಾಕ್‌ ಸರಕಾರ ಇಡೀ ರಾಯ್‌ವಿಂಡ್‌ ಪ್ರದೇಶವನ್ನು ಲಾಕ್‌ಡೌನ್‌ ಮಾಡಿತು. ಅದರಲ್ಲಿ ಅನೇಕರಲ್ಲೀಗ ಕೋವಿಡ್ 19 ಪತ್ತೆಯಾಗಿದೆ. ಅಂತೆಯೇ ಪಾಕಿಸ್ಥಾನದ ಹೈದ್ರಾಬಾದ್‌ನಲ್ಲಿಯೂ ತಬ್ಲೀ ನಡೆಸಿದ ಸಭೆಯಲ್ಲಿ 800ಕ್ಕೂ ಜನ ನೆರೆದಿದ್ದರು. ಅವರಲ್ಲಿ 54 ಜನರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆಯಲ್ಲದೇ ಸಿಂಧ್‌ ಪ್ರಾಂತ್ಯವೊಂದರಲ್ಲೇ 100 ವಿದೇಶಿ ತಬ್ಲೀ ಅನುಯಾಯಿಗಳನ್ನು ಪಾಕ್‌ ಸರಕಾರ ದಿಗ್ಬಂಧನದಲ್ಲಿ ಇಟ್ಟಿದೆ, ಇವರಲ್ಲಿ ಚೀನಿ ಮೂಲದವರೊಬ್ಬರಲ್ಲಿ ಸೋಂಕು ಖಾತ್ರಿಯಾಗಿದೆ. ಸುದ್ದಿ ಪತ್ರಿಕೆ ಹಾರೀ ಟ್ಸ್‌ನ ಪ್ರಕಾರ, ಅಂದು ರಾಯ್‌ವಿಂಡ್‌ ಸಭೆಯಲ್ಲಿ ಭಾಗವಹಿಸಿದವರೆಲ್ಲ ಕಿರ್ಗಿಸ್ತಾನದಿಂದ ಹಿಡಿದು ಗಾಜಾವರೆಗೆ ಸೋಂಕು ಹರಡಿಸಿರುವ ಸಾಧ್ಯತೆ ಇದೆ. ಇನ್ನು ಬಾಂಗ್ಲಾದೇಶದಲ್ಲಿ ಪ್ರತಿವರ್ಷ ಅತೀ ದೊಡ್ಡ ತಬ್ಲೀ ಸಭೆ ನಡೆಯುತ್ತದೆ. ಸದ್ಯಕ್ಕೆ ಅಲ್ಲಿಂದ ಸೋಂಕು ಹರಡಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಮಲೇಷ್ಯಾದಿಂದ ತಬ್ಲೀ ಸಭೆಯಲ್ಲಿ ಭಾಗವಹಿಸಿ ಬಂದವರು ಈ ವೈರಸ್‌ ಅನ್ನು ತಂದಿರಬಹುದು ಎಂದು ಬಾಂಗ್ಲಾದೇಶದಲ್ಲಿ ಆತಂಕ ವ್ಯಕ್ತಪಡಿಸಲಾಗುತ್ತಿದೆ. ದಿಲ್ಲಿಯಲ್ಲಿ ಕಾರ್ಯಕ್ರಮಕ್ಕೂ ಮುನ್ನ, ಮಲೇಷ್ಯಾದ ಪೆಟಾಲಿಂಗ್‌ ಮಸೀದಿಯಲ್ಲಿ ತಬ್ಲೀ ಜಮಾತ್‌ ಬೃಹತ್‌ ಸಮಾವೇಶ ನಡೆಸಿತ್ತು. ಅದರಲ್ಲಿ 16000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಫೆಬ್ರವರಿ 27ರಿಂದ ಮಾರ್ಚ್‌ 1ರ ವರೆಗೆ ನಡೆದ ಈ ಧಾರ್ಮಿಕ ಸಮಾವೇಶದಲ್ಲಿ 1500 ಜನ ಕೆನಡಾ, ನೈಜಿರಿಯಾ, ಭಾರತ, ಚೀನ, ದಕ್ಷಿಣ ಕೊರಿಯಾ, ಸಿಂಗಾಪುರ, ಇಂಡೋನೇಷ್ಯಾ ಸಹಿತ ವಿವಿಧ ರಾಷ್ಟ್ರಗಳಿಂದ ಹೋದವರಿದ್ದರು. ಮಲೇಷ್ಯಾದಲ್ಲಿ ಆ ವೇಳೆಯಲ್ಲಿ ಅಜಮಾಸು ಮುಕ್ಕಾಲು ಪ್ರತಿಶತ ಕೋವಿಡ್ ಪ್ರಕರಣಗಳು ಈ ಸಭೆಯಿಂದ ಹರಡಿರುವ ಶಂಕೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next