Advertisement

ಮತಗಟ್ಟೆಯಲ್ಲಿ ಅವ್ಯವಸ್ಥೆ-ಮಧ್ಯಾಹ್ನ ಸರಿಯಾಯ್ತು

03:29 PM May 13, 2018 | |

ಮುದ್ದೇಬಿಹಾಳ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶನಿವಾರ ಕೆಲ ಕಡೆ ಮತಯಂತ್ರ ಕೈಕೊಟ್ಟು ಮತದಾನ ತಡವಾಗಿದ್ದು ಹೊರತು ಪಡಿಸಿ ಎಲ್ಲ 239 ಮತಗಟ್ಟೆಗಳಲ್ಲಿ ಶಾಂತಯುತವಾಗಿ ಮತದಾನ ನಡೆಯಿತು. ಮತದಾನ ಸಂದರ್ಭದಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನವಿಲ್ಲದ ಕಾರಣ ಮತದಾರರು ಬಿಸಿಲಿನಿಂದ ಮುಕ್ತವಾಗಿ ಸಾಲಾಗಿ ನಿಂತು ಮತದಾನ ಮಾಡಿದರು.

Advertisement

ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ 121ನೇ ಮತಗಟ್ಟೆಯನ್ನು ಸಖೀ ಪಿಂಕ್‌ ಮಹಿಳಾ ಮತಗಟ್ಟೆ ಕೇಂದ್ರವನ್ನಾಗಿ ಮಾಡಿ ಕೋಣೆಯನ್ನು ಗುಲಾಬಿ ಬಣ್ಣದಿಂದಲೇ ಅಲಂಕರಿಸಿದ್ದು ಗಮನ ಸೆಳೆಯಿತು. ಇನ್ನುಳಿದಂತೆ ಆಯಾ ಪಕ್ಷದ ಏಜೆಂಟರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದು ಹಾಗೂ ಮತದಾರರಿಗೆ ಬಡಾವಣೆಯಿಂದ ಮತಗಟ್ಟೆಗೆ ಬರಲು ಆಟೋ ವ್ಯವಸ್ಥೆ ಮಾಡಿದ್ದು ಕಂಡು ಬಂತು.

ಮತಗಟ್ಟೆಯಲ್ಲಿ ಅವ್ಯವಸ್ಥೆ: ಇಲ್ಲಿನ ಬಜಾರ್‌ನಲ್ಲಿರುವ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿನ 140, 141ನೇ ಮತಗಟ್ಟೆಯಲ್ಲಿ ವಿದ್ಯುತ್‌ ಬಲ್ಬ್ ವ್ಯವಸ್ಥೆ ಇಲ್ಲದ್ದರಿಂದ ಮತಗಟ್ಟೆಯೊಳಗೆ ಬೆಳಕಿನ ಸಮಸ್ಯೆ ಕಾಡಿತು. ನಂತರ ಚುನಾವಣಾ ಧಿಕಾರಿ ಗಮನಕ್ಕೆ ಬಂದ ತಕ್ಷಣ ಮಧ್ಯಾಹ್ನದ ನಂತರ ಸರಿಪಡಿಸಲಾಯಿತು. 

ಕೈ ಕೊಟ್ಟ ಮತಯಂತ್ರ: ಮುದ್ದೇಬಿಹಾಳ ಪಟ್ಟಣದ ಕೆಬಿಎಂಪಿಎಸ್‌ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟು ಅರ್ಧಗಂಟೆ, ನಾಲತವಾಡ ಪಟ್ಟಣದಲ್ಲಿನ 194ನೇ ಮತಗಟ್ಟೆಯಲ್ಲಿ 2 ಗಂಟೆ ತಡವಾಗಿ ಮತದಾನ ಶುರುವಾಯಿತು.

ಯರಝರಿಯ 179ನೇ ಮತಗಟ್ಟೆಯಲ್ಲಿ ಮಧ್ಯಾಹ್ನ 12:30ರ ಸುಮಾರು 373 ಮತ ಚಲಾವಣೆ ಆಗಿದ್ದ ವೇಳೆ ಮತಯಂತ್ರ ಕೈಕೊಟ್ಟು ಅಂದಾಜು 2 ಗಂಟೆವರೆಗೆ ಮತದಾನ ಸ್ಥಗಿತಗೊಂಡಿತ್ತು. ಇಲ್ಲಿ 1060 ಮತಗಳಿದ್ದು ಮತ ಹಾಕಲು ಬಂದ ಮತದಾರರು ಮತದಾನ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಉಳಿದಂತೆ ಕೆಲವೆಡೆ ಇಂಥ ಘಟನೆಗಳು ಬೆಳಕಿಗೆ ಬಂದಿದ್ದು ತಜ್ಞರು ಸ್ಥಳಕ್ಕೆ ದೌಡಾಯಿಸಿ ಸಮಸ್ಯೆ ಬಗೆಹರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

Advertisement

ಮತದಾನ ಸಿಬ್ಬಂದಿಗೆ ತರಾಟೆ: ಸರೂರ ಗ್ರಾಮದಲ್ಲಿನ ಮತಗಟ್ಟೆಯೊಂದರಲ್ಲಿ ಮತದಾನ ಸಿಬ್ಬಂದಿಯೊಬ್ಬರು ಕಾಂಗ್ರೆಸ್‌ ಪರ ನಿಲುವು ತಾಳಿದ್ದಾರೆ ಎನ್ನುವ ಮಾಹಿತಿ ದೊರೆತ ಹಿನ್ನೆಲೆ ಅದೇ ಗ್ರಾಮದವರಾಗಿರುವ ಜನಸಾಮಾನ್ಯರ ಪಕ್ಷದ ಅಭ್ಯರ್ಥಿ ಡಾ| ಅಯ್ಯಪ್ಪ ದೊರೆ ಸ್ಥಳಕ್ಕೆ ಧಾವಿಸಿ ಆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಿಷ್ಪಕ್ಷಪಾತವಾಗಿ ಕೆಲಸ ಮಾಡದಿದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳಿಂದ ಮತದಾನ: ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಸ್‌. ನಾಡಗೌಡ ಪತ್ನಿ ಸುವರ್ಣ ಸಮೇತ ಬಲದಿನ್ನಿಯ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಎ.ಎಸ್‌. ಪಾಟೀಲ ನಡಹಳ್ಳಿ ಪತ್ನಿ ಮಹಾದೇವಿ ಸಮೇತ ನಡಹಳ್ಳಿಯ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ, ಜೆಡಿಎಸ್‌ ಅಭ್ಯರ್ಥಿ ಮಂಗಳಾದೇವಿ ಬಿರಾದಾರ ಪತಿ ಶಾಂತಗೌಡ ಸಮೇತ ನಾಗರಾಳ ಗ್ರಾಮದ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

 ಮತವಂಚಿತ ಅಭ್ಯರ್ಥಿಗಳು: ಜನಸಾಮಾನ್ಯರ ಪಕ್ಷದ ಅಭ್ಯರ್ಥಿ ಡಾ| ಅಯ್ಯಪ್ಪ ದೊರೆ ಅವರ ಮತ ಬೆಂಗಳೂರಿನಲ್ಲಿ, ನಮ್ಮ ಕಾಂಗ್ರೆಸ್‌ ಅಭ್ಯರ್ಥಿ ವರ್ತೂರು ರಕ್ಷಿತ್‌ ಮತ ಕೋಲಾರ ಜಿಲ್ಲೆ ಬಿ.ಹೊಸಹಳ್ಳಿಯಲ್ಲಿ ಇವೆ. ಇವರು ಇಲ್ಲಿ
ಸಕ್ರಿಯರಾಗಿದ್ದರಿಂದ ಅಲ್ಲಿಗೆ ಹೋಗಿ ಮತ ಚಲಾಯಿಸುವುದು ಸಾಧ್ಯವಾಗದೆ ಮತ ಹಕ್ಕಿನಿಂದ ವಂಚಿತರಾದರು. 

ಕೋಳೂರಲ್ಲಿ ಶಾಂತಿ: ತಾಲೂಕಿನ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರವಾದ ಕೋಳೂರು ಗ್ರಾಮದಲ್ಲಿ ಶಾಂತಿಯುತ ಮತದಾನ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next