ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಕಾಂಗ್ರೆಸ್ ಶಾಸಕರು ಫಲಿತಾಂಶದ ನಂತರ ರಾಜೀನಾಮೆ ನೀಡಬೇಕೆ ಅಥವಾ ಬೇಡವೆ ಎನ್ನುವ ಕುರಿತು ಗೊಂದಲಕ್ಕೊಳಗಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಬಂಡಾಯ ಶಾಸಕರ ನಾಯಕ ರಮೇಶ್ ಜಾರಕಿಹೊಳಿ ಮತಗಟ್ಟೆ ಸಮೀಕ್ಷೆ ಬಂದ ತಕ್ಷಣವೇ ಸಕ್ರಿಯರಾಗಿ ತಮ್ಮ ಆಪ್ತ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ ಮೇ 24ರ ನಂತರ ಎಲ್ಲರೂ ಒಟ್ಟಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಚರ್ಚಿಸಲು ಒಟ್ಟುಗೂಡಿಸುವ ಪ್ರಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆದರೆ, ಮೇ 23ರಂದು ಲೋಕಸಭೆ ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಆಗುವ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಬಿ.ನಾಗೇಂದ್ರ, ಮಹೇಶ್ ಕುಮಠಳ್ಳಿ ಸೇರಿ ರಮೇಶ್ ಜಾರಕಿಹೊಳಿ ಆಪ್ತ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಮಾನ, ರಾಜಕಾರಣದಲ್ಲಿ ಅವರ ಅಧಿಕಾರ ಎಷ್ಟು ದಿನ ಇರುತ್ತದೆ. ಯಡಿಯೂರಪ್ಪ ಅವರ ಅಧಿಕಾರ ಮುಗಿದ ಮೇಲೆ ಬಿಜೆಪಿಯಲ್ಲಿ ತಮ್ಮ ರಾಜಕೀಯ ಭವಿಷ್ಯ ಏನು ಎನ್ನುವ ಕುರಿತಂತೆಯೂ ಅತೃಪ್ತ ಶಾಸಕರು ಲೆಕ್ಕ ಹಾಕುತ್ತಿದ್ದಾರೆ. ಅಲ್ಲದೇ ಈಗಾಗಲೇ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಉಮೇಶ್ ಜಾಧವ್ ಅವರು ಚುನಾವಣೆಯಲ್ಲಿ ಸೋತರೆ, ಪಕ್ಷದಲ್ಲಿ ಅವರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎನ್ನುವುದನ್ನೂ ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿಯೇ ಇರುವ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳಗಳಲ್ಲಿ ತಮ್ಮ ಆಪ್ತರನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಬುಧವಾರ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಸಂಜೆವರೆಗೂ ರಮೇಶ್ ಜಾರಕಿಹೊಳಿಗಾಗಿ ಅವರ ಸರ್ಕಾರಿ ನಿವಾಸದಲ್ಲಿ ಕಾದು ಕುಳಿತರೂ ರಮೇಶ್ ಆಗಮಿಸದೇ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಸಂಜೆವರೆಗೂ ಕಾದು ಕೃಷ್ಣಾ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲು ಆಗಮಿಸಿದ್ದೆ ಎಂದು ಮಹೇಶ್ ಕುಮಠಳ್ಳಿ ಹೇಳಿದರು.
ಚುನಾವಣೆ ಫಲಿತಾಂಶ ಬಂದ ನಂತರ ಕೇಂದ್ರದಲ್ಲಿನ ಬೆಳವಣಿಗೆ ನೋಡಿಕೊಂಡು ರಮೇಶ್ ಜಾರಕಿಹೊಳಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.