Advertisement

ಕಣ್ಮರೆಯಾದ ಮೋಹಕ ತಾರೆ, ಎಣೆಯಿಲ್ಲದ ಪ್ರತಿಭೆ ಶ್ರೀದೇವಿ

08:25 AM Feb 26, 2018 | Harsha Rao |

ಮೋಹಕ ತಾರೆ ಶ್ರೀದೇವಿ ನಿಧನದಿಂದ ಹಿಂದಿ ಚಿತ್ರರಂಗ ಮಾತ್ರವಲ್ಲದೆ ಇಡೀ ದೇಶ ಆಘಾತಕ್ಕೊಳಗಾಗಿದೆ. ಬಾಲಿವುಡ್‌ನ‌ಲ್ಲಂತೂ ಅಕ್ಷರಶಃ ಸೂತಕದ ವಾತಾವರಣವಿದೆ. 54 ಸಾಯುವ ವಯಸ್ಸೇನೂ ಅಲ್ಲ ಹಾಗೂ ಶ್ರೀದೇವಿಗೆ ಸಾಯುವಂತಹ ಕಾರಣಗಳೂ ಇರಲಿಲ್ಲ. ಬಂಧುವಿನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ದುಬಾಯಿಗೆ ಹೋಗಿದ್ದ ನಟಿಯನ್ನು ಜವರಾಯ ಅಲ್ಲಿಂದಲೇ ಸದ್ದಿಲ್ಲದೆ ಕರೆದೊಯ್ದಿದ್ದಾನೆ. ಭಾರತೀಯ ಚಿತ್ರರಂಗದಲ್ಲಿ ಅನೇಕ ಪ್ರತಿಭಾವಂತ, ಚೆಲುವಿನ, ಬೆಡಗು ಬಿನ್ನಾಣದ ನಟಿಯರು ಬಂದು ಹೋಗಿದ್ದಾರೆ. ಆದರೆ ಅವರು ಯಾರಿಂದಲೂ ತಲುಪಲಾಗದ ಎತ್ತರವನ್ನು ತಲುಪಿದ್ದರು ಎಂಬ ಕಾರಣಕ್ಕೆ ಶ್ರೀದೇವಿ ಮುಖ್ಯರಾಗುತ್ತಾರೆ.

Advertisement

ಬಾಲಿವುಡ್‌ನ‌ಲ್ಲಿ 80 ಮತ್ತು 90ರ ದಶಕ ಶ್ರೀದೇವಿಯದ್ದು. ಜನಪ್ರಿಯತೆ ಯಲ್ಲಿ ಆ ಕಾಲದ ನಟಿಯರು ಬಿಡಿ ನಟರನ್ನು ಕೂಡ ಮೀರಿಸಿದ್ದರು ಈ ನಟಿ. ಮುಗ್ಧ ಮುಖ, ಭಾವಪೂರ್ಣ ಕಣ್ಣುಗಳು, ಚಿಗರೆಯಂತೆ ಕುಣಿ ಯುವ ಹುಬ್ಬುಗಳು, ತುಟಿಯಂಚಿನಲ್ಲಿ ತುಂಟ ನಗು… ಇದರ ಒಡತಿ ಯನ್ನು ನೋಡಲು ಸಿನೇಮಾ ರಸಿಕರು ಮುಗಿಬೀಳುತ್ತಿದ್ದರು. ಶ್ರೀದೇವಿ ಇದ್ದರೆ ಕನಿಷ್ಠ ಹಾಕಿದ ಅಸಲಿಗೆ ಮೋಸವಾಗುವುದಿಲ್ಲ ಎಂಬ ಖಾತರಿ ಯಿತ್ತು. ಆಕೆಯನ್ನು ಮಿನಿಮಮ್‌ ಗ್ಯಾರಂಟಿ ನಟಿ ಎಂದು ಕರೆಯುತ್ತಿದ್ದರು. ನಾಯಕರ ಪಾರಮ್ಯವಿದ್ದ ಸಿನೇಮಾ ಲೋಕದಲ್ಲಿ ಈ ಟ್ರೆಂಡನ್ನು ಉಲ್ಟಾ ಮಾಡಿ ನಾಯಕಿಯೂ ಸಿನೇಮಾ ಗೆಲ್ಲಿಸಬಲ್ಲಳು ಎಂದು ತೋರಿಸಿಕೊಟ್ಟದ್ದು ಶ್ರೀದೇವಿ ಸಾಧನೆ. ಸರಿಸುಮಾರು ಎರಡು ದಶಕ ಶ್ರೀದೇವಿಯದ್ದೇ ಕಾರುಬಾರು. ಅಮಿತಾಭ್‌ ಬಚ್ಚನ್‌ನಂತಹ ಮೇರುನಟನೇ ಶ್ರೀದೇವಿ ಜತೆಗೆ ನಟಿಸುವ ಅವಕಾಶ ಸಿಗಬೇಕೆಂದು ಅಪೇಕ್ಷಿಸಿದ್ದು ಇದೆ. ಎರಡು ಪೀಳಿಗೆಯ ಬಹುತೇಕ ನಟರಿಗೆ ನಾಯಕಿಯಾಗಿದ್ದಾರೆ ಶ್ರೀದೇವಿ. ಕನ್ನಡದ ಬೆರಳೆಣಿಕೆಯ ಚಿತ್ರಗಳೂ ಸೇರಿದಂತೆ ಐದು ಭಾಷೆಗಳಲ್ಲಿ 300 ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಖಾತೆಯಲ್ಲಿ ಸೋಲುಗಳ ಲೆಕ್ಕ ಬಹಳ ಕಡಿಮೆ. ನೃತ್ಯ ಮತ್ತು ಅಭಿನಯ ಎರಡರಲ್ಲೂ ಸೈ ಎನಿಸಿದ್ದ ಅಪರೂಪದ ಕಲಾವಿದೆ ಈಕೆ. ಹವಾ ಹವಾಯಿಯಂತಹ ಶ್ರೀದೇವಿಯ ನೃತ್ಯಗಳು ಈಗಲೂ ಜನಪ್ರಿಯವಾಗಿವೆ. 1983 ಮತ್ತು 1987ರ ನಡುವೆ ಬರೀ ನಾಲ್ಕು ವರ್ಷಗಳಲ್ಲಿ ಶ್ರೀದೇವಿ ನಟಿಸಿದ್ದ 33 ಚಿತ್ರಗಳು ಬಿಡುಗಡೆಯಾಗಿದ್ದವು ಎನ್ನುವುದು ಆ ಕಾಲದಲ್ಲಿ ಈ ನಟಿ ಎಷ್ಟು ಜನಪ್ರಿಯರಾಗಿದ್ದರು ಮತ್ತು ಉದ್ಯಮಕ್ಕೆ ಎಷ್ಟು ಅನಿವಾರ್ಯವಾಗಿದ್ದರು ತಿಳಿಸುತ್ತದೆ.

ವೈಜಯಂತಿಮಾಲಾ, ದಿವ್ಯಭಾರತಿ, ಹೇಮಮಾಲಿನಿ, ರೇಖಾ ಹೀಗೆ ಬಾಲಿವುಡ್‌ ಆಳಿದ ದಕ್ಷಿಣದ ನಾಯಕಿಯರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಶ್ರೀದೇವಿ. ಆದರೆ ಅಲ್ಲಿಗೆ ಈ ಪರಂಪರೆಯೂ ನಿಂತು ಹೋಯಿತು. ಶ್ರೀದೇವಿ ಬಳಿಕ ದಕ್ಷಿಣದ ಬೇರೆ ಯಾವ ನಟಿಗೂ ನಂಬರ್‌ ಒನ್‌ ಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ. ಇದಕ್ಕೆ ಚಿತ್ರರಂಗದ ಬದಲಾದ ಸ್ವರೂಪವೂ ಕಾರಣವಾಗಿರಬಹುದು.

ಎಲ್ಲರಿಗೂ ಆಗುವಂತೆ ಶ್ರೀದೇವಿ ಮೇಲೂ ವಯಸ್ಸು ಪ್ರಭಾವ ಬೀರ ತೊಡಗಿತು. 90ರ ದಶಕದ ಉತ್ತರಾರ್ಧದಲ್ಲಿ ಬಾಲಿವುಡ್‌ ಆಗಲೇ ಮಾಧುರಿ ದೀಕ್ಷಿತ್‌ ಆಕರ್ಷಣೆಗೊಳಗಾಗಿತ್ತು. ಜೂಹಿ ಚಾವ್ಲಾ ಅವರಂತಹ ಹೊಸ ನಟಿಯರೂ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ಶ್ರೀದೇವಿ ನೇಪಥ್ಯಕ್ಕೆ ಸರಿಯುವುದು ಅನಿವಾರ್ಯವಾಗಿತ್ತು. ಕೊನೆಯ ಚಿತ್ರ ಎಂದು ಭಾವಿಸಿ ನಟಿಸಿದ್ದ ಭಾರೀ ಬಜೆಟ್ಟಿನ ರೂಪ್‌ ಕಿ ರಾಣಿ ಚೋರೋಂ ಕಿ ರಾಜಾ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿದಾಗ ಶ್ರೀದೇವಿ ಯುಗ ಮುಗಿಯಿತು ಎಂದು ಹೇಳಲಾಗಿತ್ತು. ಆದರೆ ಹಠ ಬಿಡದ ಶ್ರೀದೇವಿ 1997ರಲ್ಲಿ ಜುಡಾಯಿ ಎಂಬ ಹಿಟ್‌ ಚಿತ್ರ ನೀಡಿಯೇ ಬಾಲಿವುಡ್‌ಗೆ ವಿದಾಯ ಹೇಳಿದರು. ನಿರ್ಮಾ ಪಕ ಬೋನಿ ಕಪೂರ್‌ ಅವರನ್ನು ವಿವಾಹವಾಗುವ ಮೂಲಕ ಸಾಂಸಾ ರಿಕ ಜೀವನ ಪ್ರಾರಂಭಿಸಿದ ಶ್ರೀದೇವಿ ಅಪ್ಪಟ ಗೃಹಿಣಿಯಾಗಿ ಬದಲಾ ದರು. ಇಬ್ಬರು ಹೆಣ್ಣು ಮಕ್ಕಳಿಗೆ ತಾಯಿಯಾದರು. ಸಿನೇಮಾ ಲೋಕ ದಿಂದ ಸಂಪೂರ್ಣ ದೂರವಿದ್ದು, ಮಕ್ಕಳ ಲಾಲನೆಪಾಲನೆ ಮಾಡಿದರು.

15 ವರ್ಷದ ಸುದೀರ್ಘ‌ ಇಂಟರ್‌ವಲ್‌ ಬಳಿಕ ಇಂಗ್ಲೀಶ್‌ ವಿಂಗ್ಲೀಶ್‌ ಚಿತ್ರದಲ್ಲಿ ಮಾಗಿದ ಪಾತ್ರವನ್ನು ಮಾಡಿ ತನ್ನೊಳಗಿನ ಅಭಿನೇತ್ರಿಗಿನ್ನೂ ವಯಸ್ಸಾಗಿಲ್ಲ ಎಂದು ಸಾಬೀತುಪಡಿಸಿದರು.ಅನಂತರ ಮಾಮ್‌ ಎಂಬ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸಿದರು. ಇದೀಗ ಹಿರಿಯ ಮಗಳು ಜಾಹ್ನವಿ ನಾಯಕಿಯಾಗಿದ್ದಾಳೆ. ಮಗಳ ಚೊಚ್ಚಲ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗ ಲಿದೆ. ಆದರೆ ಅದನ್ನು ನೋಡುವ ಭಾಗ್ಯ ಮಾತ್ರ ಶ್ರೀದೇವಿ ಹಣೆಯಲ್ಲಿ ಬರೆದಿಲ್ಲ ಎಂದು ಕಾಣಿಸುತ್ತದೆ. ಬೋನಿ ಕಪೂರ್‌ ಮೊದಲ ಪತ್ನಿ ಮೋನಾ ಕಪೂರ್‌ ಕೂಡ ಮಗ ಅರ್ಜುನ್‌ ಕಪೂರ್‌ ನಟಿಸಿದ ಚಿತ್ರ ಬಿಡುಗಡೆಯಾ ಗುವ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಇದೀಗ ಶ್ರೀದೇವಿಗೂ ಅದೇ ರೀತಿಯ ಸಾವು ಬಂದಿರುವುದು ಕಾಕತಾಳೀಯವೇ?

Advertisement
Advertisement

Udayavani is now on Telegram. Click here to join our channel and stay updated with the latest news.

Next