ಹೊನ್ನಾವರ: ಒಂದು ಕಾಲದಲ್ಲಿ ಒಟ್ಟು ಕುಟುಂಬವಿದ್ದಾಗ ಮನೆಗೆ ಬಾಗಿಲು ಹಾಕಿದರೂ ಬೀಗ ಹಾಕುವ ಪರಿಸ್ಥಿತಿ ಇರಲಿಲ್ಲ. ಒಬ್ಬರಲ್ಲ ಒಬ್ಬರು ಇರುತ್ತಿದ್ದರು. ಕುಟುಂಬದಲ್ಲಿ ಸಂಖ್ಯೆ ಕಡಿಮೆಯಾಗುತ್ತ ಬಂದಂತೆ ಕಳ್ಳರ ಕಾಟವೂ ಹೆಚ್ಚಾಗ ತೊಡಗಿತು. ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿ ಬೀಗ ಹಾಕುವುದನ್ನು ಕಲಿತುಕೊಳ್ಳಲಾಯಿತು. ಈ ವಿದೇಶಿ ತಂತ್ರಜ್ಞಾನ ಅರಿತುಕೊಂಡ ಶರಾವತಿ ನಡುಗಡ್ಡೆ ಮಾವಿನಕುರ್ವೆ ಮತ್ತು ಚಿನಕೋಡ ಭಾಗದ ವಿಶ್ವಕರ್ಮರು ಬೀಗ ತಯಾರಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡರು.
ಆ ಕಾಲದಲ್ಲಿ ಅವಶ್ಯಕತೆಗೆ ತಕ್ಕಂತೆ 1-5 ಲಿವರ್‌ಗಳ ಬೀಗ ತಯಾರಿಕೆಯಲ್ಲಿ ಇವರು ಪರಿಣಿತರಾದರು. ಬೀಗದೊಳಗೆ ಬೀಗ, ಹಲವು ಬಾರಿ ತಿರುಗಿಸಿದರೆ, ಎಡಬಲಕ್ಕೆ ನಿರ್ದಿಷ್ಟ ಸುತ್ತು ತಿರುಗಿಸಿದರೆ ತೆರೆದುಕೊಳ್ಳುವ ಬೀಗ ಹೀಗೆ ಹಲವು ವೈಶಿಷ್ಟ್ಯಗಳ ಬೀಗ ತಯಾರಾಗುತ್ತಿದ್ದವು. ಮಾವಿನಕುರ್ವೆ ಬೀಗ ಹಾಕಿದ್ದೇನೆ, ಮುರಿಯುವುದು ಸಾಧ್ಯವಿಲ್ಲ ಎಂದು ಹೇಳುತ್ತ ಕಾಶಿಯಾತ್ರೆಗೆ ಹೋಗಿಬರುವವರಿದ್ದರು. ಅಷ್ಟೊಂದು ವ್ಯವಸ್ಥಿತವಾಗಿ, ಶಕ್ತಿಯುತವಾದ ಬೀಗಗಳು ತಯಾರಾಗುತ್ತಿದ್ದವು.
ಪ್ರತಿಮನೆಗೂ ಅಗತ್ಯವಿರುವ ಬೀಗ ತಯಾರಿಕೆಗೆ ಹಲವು ಕಂಪನಿಗಳು ಮುಂದಾದವು. ಗೊಡ್ರೇಜ್‌ನಂತಹ ಕಂಪನಿಗಳ ಬೀಗ ಈಗಲೂ ಪ್ರಥಮ ಸ್ಥಾನದಲ್ಲಿದೆ. ಬಣ್ಣಬಣ್ಣದ, ನುಣ್ಣಗಿನ ಮೇಲ್ಮೈ, ಬೆಸುಗೆ ಕಾಣದ ಬೀಗಗಳ ಮುಂದೆ ಮಾವಿನಕುರ್ವೆ ಬೀಗ ತನ್ನ ಸ್ಥಾನ ಕಳೆದುಕೊಂಡಿತು. ಕಬ್ಬಿಣದ ತಗಡುಗಳನ್ನು ತಂದು, ಅವುಗಳನ್ನು ಕತ್ತರಿಸಿ, ಒಳಗಡೆ ದಪ್ಪ ತಗಡಿನ ಸ್ಪ್ರಿಂಗ್‌ನಂತಹ ತಗಡು ಕೂರಿಸಿ, ಅದರ ಅಳತೆಯಂತೆ ಚಾವಿ ತಯಾರಿಸಿ ಹೊರಗಡೆ ಬೆಸೆಯುವ ತಂತ್ರಜ್ಞಾನ ಶ್ರಮದಾಯಕವಾಗಿತ್ತು. ಕಳ್ಳರು ಬುದ್ಧಿವಂತರಾದರು. ಮಾವಿನಕುರ್ವೆ ಬೀಗ ಮುರಿಯುವುದು ಸುಲಭವಾಯಿತು. ಈಗ ಕಂಪನಿ ಬೀಗಗಳನ್ನು ಸುಲಭವಾಗಿ ಮುರಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಾವಿನಕುರ್ವೆ ವಿಶ್ವಕರ್ಮರು ಒಬ್ಬೊಬ್ಬರಾಗಿ ಬೇರೆ ವೃತ್ತಿ ಆಯ್ದುಕೊಂಡರು. ಆದರೂ ಕೆಲವರು ಬೀಗ ತಯಾರಿಕೆಯನ್ನು ಮುಂದುವರಿಸಿದ್ದಾರೆ. ಇವರಿಗೆ ಸರ್ಕಾರದ ಸಹಾಯಧನ, ಕಡಿಮೆ ಬಡ್ಡಿಯಲ್ಲಿ ಆಧುನಿಕ ಉಪಕರಣಗಳನ್ನು ಕೊಡಿಸುವವರಿಲ್ಲ. ಬೇರೆ ಕೆಲಸವನ್ನು ಮಾಡುತ್ತ ಬಿಡುವಿನಲ್ಲಿ ಮಾವಿನಕುರ್ವೆ ಚಾವಿಯ ಪರಂಪರೆಯನ್ನು ಉಳಿಸಿದ್ದಾರೆ. ಅವರಲ್ಲಿ ಚಿತ್ರದಲ್ಲಿರುವ ಚಿನಕೋಡಿನ ಅರುಣ ಆಚಾರ್ಯ ಒಬ್ಬರು.