Advertisement

ಕಣ್ಮರೆಯಾಗುತ್ತಿದೆ ಅವಿಭಕ್ತ ಪರಂಪರೆ

02:34 PM May 20, 2019 | pallavi |

ನರಗುಂದ: ಅವಿಭಕ್ತ ಕುಟುಂಬಗಳು ಈ ದೇಶದ ಸಾಂಸ್ಕೃತಿಕ ಹಿನ್ನೆಲೆಗೆ ಜೀವನಾಡಿ ಇದ್ದಂತೆ. ಅಂತಹ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿರುವುದರಿಂದ ಸಮಾಜದಲ್ಲಿ ಸಾಮರಸ್ಯ ಬಾಂಧವ್ಯ ಕ್ಷೀಣಿಸುತ್ತಿದೆ. ವಿಭಕ್ತ ಕುಟುಂಬ ಇದು ಪಾಶ್ಚಿಮಾತ್ಯ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನು ಭಾರತೀಯರಾದ ನಾವು ಅನುಕರಣೆ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಹಾಗೂ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 294ನೇ ಮಾಸಿಕ ಶಿವಾನುಭವ ಹಾಗೂ ವಿಶ್ವ ಕುಟುಂಬ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಕೌಟುಂಬಿಕ ವ್ಯವಸ್ಥೆಗೆ ವಿಶಿಷ್ಟ ಸ್ಥಾನವಿದೆ. ಜಗತ್ತಿಗೆ ಕೂಡಿ ಬಾಳುವ ಪರಂಪರೆಯನ್ನು ಹೇಳಿಕೊಟ್ಟ ಭಾರತದಲ್ಲಿಯೇ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ಇತ್ತೀಚೆಗೆ ನಮ್ಮ ದೇಶದಲ್ಲಿ ಏಕ ಪೋಷಕ ಕುಟುಂಬ ನಿರ್ಮಾಣವಾಗುತ್ತಿರುವುದು ಆಶ್ಚರ್ಯದ ಸಂಗತಿ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಶಿಕ್ಷಕ ಜಿ.ಬಿ. ಕಂಠೆನ್ನವರ ಉಪನ್ಯಾಸ ನೀಡಿ, ಆಧುನಿಕ ಜೀವನ ಶೈಲಿಗೆ ಮಾರುಹೋದ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳೆ ಹೆಚ್ಚಾಗುತ್ತಿವೆ. ಮಕ್ಕಳಲ್ಲಿ ಮಾನವೀಯ ಮೌಲ್ಯ, ಹೊಂದಾಣಿಕೆ ಸ್ವಭಾವದ ಕೊರತೆ ಇದಕ್ಕೆ ಮುಖ್ಯ ಕಾರಣ ಎಂದರು.

ಈ ಸಂದರ್ಭದಲ್ಲಿ ಕೊಣ್ಣೂರಿನ ಅವಿಭಕ್ತ ಕುಟುಂಬದ ಮುಖ್ಯಸ್ಥೆ ತುಳಸವ್ವ ಅನ್ನಪ್ಪಗೌಡ್ರ, ಚಿಕ್ಕನರಗುಂದದ ಪಾರಂಪರಿಕ ಪಶು ವೈದ್ಯ ಶಿವಾನಂದ ಭಾಚಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ತಾ.ಪಂ ಸದಸ್ಯ ಪಿ.ಬಿ.ಪಿ. ಶಿರಿಯಪ್ಪಗೌಡ್ರ, ತಾ.ಪಂ ಮಾಜಿ ಅಧ್ಯಕ್ಷ ಗುರಪ್ಪ ಆದೆಪ್ಪನವರ, ನಿವೃತ್ತ ಶಿಕ್ಷಕ ಪಿ.ಬಿ. ಕುಂಬಾರ, ಚಂದ್ರು ದಂಡಿನ, ಶಿಶು ಅಭಿವೃದ್ಧಿ ಇಲಾಖೆಯ ಬಸಮ್ಮ ಹೂಲಿ, ಜಗದೀಶ ಜ್ಞಾನೋಪಂಥ, ತಿರ್ಥಗೌಡ ಪಾಟೀಲ, ತುಳಸಿಗೇರಿ ಇದ್ದರು. ಪ್ರೊ| ಆರ್‌.ಬಿ. ಚಿನಿವಾಲರ ನಿರೂಪಿಸಿದರು. ಪ್ರೊ| ಆರ್‌.ಕೆ. ಐನಾಪುರ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next