Advertisement

ಭಿನ್ನಮತ ವಿಸ್ತರಣೆ: ಯೋಗೇಶ್ವರ್‌ಗೆ ಸ್ಥಾನ; ವಿರೋಧ

09:51 AM Feb 05, 2020 | mahesh |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿರುವಂತೆಯೇ ಸಚಿವ ಸ್ಥಾನಾಕಾಂಕ್ಷಿ ಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಸಿ.ಪಿ. ಯೋಗೇಶ್ವರ್‌ಗೆ ಸ್ಥಾನ ನೀಡುವ ಬಗ್ಗೆ ಮೂಲ ಬಿಜೆಪಿಗರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಎಚ್‌.ವಿಶ್ವನಾಥ್‌ ಮತ್ತು ಎಂಟಿಬಿ ನಾಗರಾಜ್‌ ಅಸಮಾಧಾನ ಶಮನವಾಗುವ ಮುನ್ನವೇ ಈ ಭಿನ್ನಮತ ಸಿಎಂ ಬಿಎಸ್‌ವೈಗೆ ಹೊಸ ಸಂಕಟ ತಂದಿರಿಸಿದೆ. ಚುನಾವಣೆಯಲ್ಲಿ ಸೋತಿರುವ ಸಿ.ಪಿ. ಯೋಗೇಶ್ವರ್‌ಗೆ
ಮೂಲ ಬಿಜೆಪಿ ಕೋಟಾದಡಿ ಸಚಿವ ಸ್ಥಾನ ನೀಡುವ ಮಾತು ಕೇಳಿಬಂದ ಬೆನ್ನಲ್ಲೇ ಮೂಲ ಬಿಜೆಪಿ ಶಾಸಕರು ಬಂಡೆದಿದ್ದು, ಪ್ರತ್ಯೇಕ ಸಭೆ ನಡೆಸುವ ಮೂಲಕ ಪ್ರತಿರೋಧ ತೋರಿರುವುದು ಸಂಚಲನ ಮೂಡಿಸಿದೆ.

Advertisement

ಕಲ್ಯಾಣ ಕರ್ನಾಟಕಕ್ಕೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಶಾಸಕರ ಭವನದಲ್ಲೇ 10ಕ್ಕೂ ಹೆಚ್ಚು ಶಾಸಕರು ಸಭೆ ಸೇರಿ ಚರ್ಚಿಸಿದ್ದಾರೆ. ಇದು ಮೇಲ್ನೋಟದ ಕಾರಣವಾದರೂ ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ನೈಜ ಕಾರಣ. ಮಂಗಳವಾರ ಮತ್ತೂಮ್ಮೆ ಸಭೆ ಸೇರಲು ನಿರ್ಧರಿಸಿದ್ದು, ಬಿಜೆಪಿಯ ಆಂತರಿಕ ಬಿಕ್ಕಟ್ಟು ತೀವ್ರವಾಗುವ ಲಕ್ಷಣ ಕಾಣುತ್ತಿದೆ.

ಈ ಮಧ್ಯೆ ಎಚ್‌. ವಿಶ್ವನಾಥ್‌ ಸೋಮವಾರ ಸಿಎಂ ನಿವಾಸಕ್ಕೆ ತೆರಳಿ ಅವರ ಜತೆಗೆ ಚರ್ಚಿಸಿದ್ದಾರೆ. ಬಳಿಕ ಸಮಾಧಾನದಿಂದಲೇ ಪ್ರತಿಕ್ರಿಯಿಸಿದ ಅವರು, ಕಾದು ನೋಡೋಣ ಎಂದರು. ಎಂಟಿಬಿ ನಾಗರಾಜ್‌ ಕೂಡ ಅದೇ ಧಾಟಿಯಲ್ಲಿ ಮಾತನಾಡಿದ್ದಾರೆ.

ಮಹೇಶ್‌ ಕುಮಟಳ್ಳಿಗೂ ಸಚಿವಗಿರಿ ಕೊಡಿಸಲು ರಮೇಶ್‌ ಜಾರಕಿಹೊಳಿ ಕಸರತ್ತು ಮುಂದುವರಿಸಿದ್ದಾರೆ. ಒಂದೆಡೆ ಉಪಚುನಾವಣೆ ಗೆದ್ದವರು- ಸೋತವರು, ಮತ್ತೂಂದೆಡೆ ಮೂಲ ಬಿಜೆಪಿಗರನ್ನು ಸಮಾಧಾನಿಸ ಬೇಕಾದ ಸವಾಲು ಬಿಎಸ್‌ವೈ ಮುಂದಿದ್ದು, ಎಷ್ಟು ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರತ್ಯೇಕ ಸಭೆ
ಸೋಮವಾರ ಶಾಸಕರ ಭವನದಲ್ಲಿಯೇ ನಡೆದ ದಿಢೀರ್‌ ಪ್ರತ್ಯೇಕ ಸಭೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವರಾದ ರಾಜುಗೌಡ, ಮುರುಗೇಶ್‌ ನಿರಾಣಿ, ಶಾಸಕರಾದ ಹಾಲಪ್ಪ ಆಚಾರ್‌, ಪರಣ್ಣ ಮುನವಳ್ಳಿ, ಆನಂದ ಮಾಮನಿ, ಶಿವರಾಜ ಪಾಟೀಲ್‌, ದತ್ತಾತ್ರೇಯ ಪಾಟೀಲ್‌ ರೇವೂರ, ಬಸವರಾಜ್‌ ಮತ್ತಿಮೋಡ್‌ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಇದ್ದರು.

Advertisement

ಕಲ್ಯಾಣ ಕರ್ನಾಟಕದ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಲು ನಿರ್ಧರಿಸಿದ ಶಾಸಕರು, ಯೋಗೇಶ್ವರ್‌ಗೆ ಸ್ಥಾನ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆಪರೇಷನ್‌ ಕಮಲಕ್ಕೆ ನೆರವಾದವರಿಗೆ ಸಂಪುಟದಲ್ಲಿ ಅವಕಾಶ ನೀಡುತ್ತ ಹೋದರೆ ಚುನಾವಣೆ ಗೆದ್ದ 104 ಶಾಸಕರಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಸಭೆಯಲ್ಲಿ ಕೇಳಿಬಂತು.

ಮಂಗಳವಾರವೂ ಸಭೆ
ನಮ್ಮ ಮನವಿಗೆ ಸ್ಪಂದಿಸದಿದ್ದರೂ ಪಕ್ಷದ ಕೆಲಸ ಮಾಡಿಕೊಂಡು ಹೋಗುತ್ತೇವೆ. ರಾಜೀನಾಮೆ ನೀಡುವುದಿಲ್ಲ. ಸಚಿವ ಸ್ಥಾನಕ್ಕೆ ಮನವಿ ಮಾಡುತ್ತಿದ್ದೇವೆ. ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಯೋಗೇಶ್ವರ್‌ಗೆ ಮಣೆ ಹಾಕುವುದು ಸರಿಯಲ್ಲ. ಮಂಗಳವಾರ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಸಭೆಯ ಬಳಿಕ ಮಾತನಾಡಿದ ರಾಜುಗೌಡ ತಿಳಿಸಿದರು.

ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅನೇಕ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ ಸಭೆ ಸೇರಿ ಮನವಿ ಸಲ್ಲಿಸಲು ನಿರ್ಧರಿ ಸಿದ್ದೇವೆ. ಇದು ಅಸಮಾಧಾನವಲ್ಲ. ಆ ಭಾಗಕ್ಕೂ ಪ್ರಾತಿನಿಧ್ಯ ಕೊಡಿ ಎಂಬ ಮನವಿಯಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next