Advertisement

ನದಿ ಜೋಡಣೆಗೆ ಅಸಮ್ಮತಿ

12:02 PM Apr 30, 2019 | Team Udayavani |

ಕಾರವಾರ: ಕಾಳಿ, ಘಟಪ್ರಭಾ ಮತ್ತು ಮಲಪ್ರಭಾ ನದಿ ಜೋಡಣೆ ಬಗ್ಗೆ ಸಂಗಮೇಶ ನಿರಾಣಿ ವರದಿ ಅನುಷ್ಠಾನಕ್ಕೆ ತರುವಂತೆ ಕೆಲವು ಸಂಘಟನೆಗಳು ನಡೆಸುತ್ತಿರುವ ಪ್ರಯತ್ನಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.

Advertisement

ಉಕ ಜಿಲ್ಲೆಯ ಜೀವನದಿ ಕಾಳಿ ನದಿಯನ್ನು ಬಯಲು ಸೀಮೆ ಕಡೆಗೆ ತಿರುಗಿಸುವ ಈ ಪ್ರಯತ್ನ ಇನ್ನೊಂದು ಎತ್ತಿನಹೊಳೆ ಹೋರಾಟಕ್ಕೆ ಕಾರಣವಾದರೂ ಅಚ್ಚರಿಪಡಬೇಕಿಲ್ಲ ಎನ್ನಲಾಗುತ್ತಿದೆ. ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿ ಕಾರವಾರದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ನದಿಗೆ ಅಡ್ಡಲಾಗಿ ಸುಮಾರು ಐದು ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದ್ದು ಈ ನದಿ ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಜೀವವಲಯವಾದ ಮಧ್ಯ ಪಶ್ಚಿಮ ಘಟ್ಟದ ಪ್ರದೇಶದಿಂದ ಹಾದು ಹೋಗುತ್ತದೆ. ಇಂಥ ನದಿಯನ್ನು ತಿರುಗಿಸಲು ಯತ್ನಿಸುತ್ತಿರುವುದು ಅತ್ಯಂತ ಅಪಾಯಕಾರಿ ಹಾಗೂ ಬುದ್ಧಿಯಿಲ್ಲದ ಕೆಲಸ ಎಂದು ಬಹುತೇಕ ಪರಿಸರವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಕಾಳಿ ನದಿ ನೀರು ಕೈಗಾ ಅಣುವಿದ್ಯುತ್‌ ಕೇಂದ್ರದ ರಿಯಾಕ್ಟರ್‌ನಲ್ಲಿ ಉರಿದ ಯುರೇನೇಯಂ ತ್ಯಾಜ್ಯವನ್ನು ತಂಪಾಗಿಸಲು ಬಳಸಲಾಗುತ್ತಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿದ ಡ್ಯಾಂಗಳಿಂದ ಭಾರೀ ಪ್ರಮಾಣದ ವಿದ್ಯುತ್‌ ಉತ್ಪಾದನೆ ನಡೆಯುತ್ತಿದೆ. ಅಲ್ಲದೇ ಕಾರವಾರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಇದೇ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿದ್ದಾರೆ. ಸಹ್ಯಾದ್ರಿ ಪರ್ವತದ ಜೋಯಿಡಾ, ದಾಂಡೇಲಿ, ಕಾರವಾರ ಭಾಗದ ಕಾಡುಗಳಲ್ಲಿ ಪ್ರಾಣಿಗಳ ಕುಡಿಯುವ ನೀರಿಗೂ ಬಳಕೆಯಾಗುತ್ತಿದ್ದು ಈ ನದಿ ತಿರುಗಿಸಿದರೆ ಕೈಗಾ ಹಾಗೂ ಕಾಳಿ ವಿದ್ಯುತ್‌ ಯೋಜನೆಗಳನ್ನೇ ನಿಲ್ಲಿಸಬೇಕಾದಿತು. ಅಲ್ಲದೇ ಕಾಡು ಪ್ರಾಣಿಗಳು ನಾಶವಾಗಬಹುದು. ಹೀಗಾಗಿ ಯಾವ ಕಾರಣಕ್ಕೂ ಈ ಯೋಜನೆಗೆ ಅನುಮತಿ ನೀಡಬಾರದೆಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇಡೀ ಭಾರತಕ್ಕೆ ಮುಂಗಾರು ಮಳೆಯನ್ನು ತರುವ ಪಶ್ಚಿಮಘಟ್ಟ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಅದರಲ್ಲೂ ಜೋಯಿಡಾ ಹಾಗೂ ದಾಂಡೇಲಿಗಳು ಸೂಕ್ಷ್ಮ ಜೀವ ವಲಯವಾಗಿದ್ದು ಪಶ್ಚಿಮಘಟ್ಟವನ್ನು ಪಾರಂಪರಿಕ ತಾಣವೆಂದು ಯುನೆಸ್ಕೊ ಈಗಾಗಲೇ ಘೋಷಿಸಿದೆ. ಈ ಭಾಗದಲ್ಲಿ ರೈಲು ಮಾರ್ಗಕ್ಕೆ ಇಷ್ಟೊಂದು ಅಡಚಣೆ ಇರುವಾಗ ಇಡೀ ನದಿಯನ್ನೇ ತಿರುಗಿಸಿಕೊಂಡು ಬಯಲು ಸೀಮೆಗೆ ಕೊಂಡೊಯ್ಯುವುದು ಮೂರ್ಖತನವಲ್ಲದೇ ಬೇರೇನೂ ಅಲ್ಲ.

ಈ ಕಾಳಿ ನದಿಯು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಜೊಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದು ಅದನ್ನು ತಿರುಗಿಸಲು ಯತ್ನಿಸಿದರೆ ದೇಶದ ಪರಿಸರದ ಮೇಲೆ ಕಂಡುಕೇಳಿರಿಯದ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಇಂಥ ಯಾವುದೇ ಪ್ರಯತ್ನಕ್ಕೂ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ. ಅಲ್ಲದೇ ಇಂಥ ಕೃತ್ಯಗಳು ಭವಿಷ್ಯದಲ್ಲಿ ಉ.ಕ. ಮತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ ಸೇರಿ ಪ್ರತ್ಯೇಕ ಕರಾವಳಿ ರಾಜ್ಯ ಮಾಡಬೇಕೆಂಬ ಕೂಗಿಗೆ ಇನ್ನಷ್ಟು ಬಲ ನೀಡಬಹುದು ಎನ್ನುತ್ತಾರೆ ವಾಣಿಜ್ಯ ತೆರಿಗೆ ಸಲಗೆಗಾರ ಜಗದೀಶ ಬಿರ್ಕೋಡಿಕರ್‌.

Advertisement

ಅರಬ್ಬೀ ಸಮುದ್ರಕ್ಕೆ ಕಾಳಿ ನದಿಯ ನೀರು ಸೇರುವುದರಿಂದ ಈ ನೀರು ವ್ಯರ್ಥವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಿರುವವರಿಗೆ ಸಮುದ್ರದ ಲಕ್ಷಣಗಳ ಕಿಂಚಿತ್ತು ಜ್ಞಾನ ಇದ್ದಂತಿಲ್ಲ. ಸಮುದ್ರದ ನೀರು ಲವಣಯುಕ್ತವಾಗಿದ್ದು ಅದಕ್ಕೆ ನಿರ್ದಿಷ್ಟ ಪ್ರಮಾಣದ ಸಿಹಿ ನೀರು ನದಿಗಳ ಮೂಲಕ ಸೇರ್ಪಡೆಯಾಗದೇ ಇದ್ದಲ್ಲಿ ಸಮುದ್ರದ ನೀರಿನಲ್ಲಿ ಉಪ್ಪಿನಾಂಶ ಏರಿಕೆಯಾಗಿ ಅಲ್ಲಿಂದ ಜಲಜಂತುಗಳು ನಾಶವಾಗುತ್ತದೆ. ಅಲ್ಲದೇ ಸಮುದ್ರವು ಡೆಡ್‌ ಸೀ ತರಹ ಯಾವುದೇ ಕೆಲಸಕ್ಕೂ ಉಪಯೋಗಿವಿಲ್ಲದಂತಾಗುತ್ತದೆ. ಇದು ಕಾಳಿ ನದಿಯನ್ನು ತಿರುಗಿಸಿ ಬಯಲು ಸೀಮೆಗೆ ಒಯ್ಯಲಿಕ್ಕೆ ವರದಿಯನ್ನು ಮಂಡಿಸಿದ ಸಂಗಮೇಶ ನಿರಾಣಿಯವರಿಗೆ ತಿಳಿದಿಲ್ಲದಿರುವುದು ನಿಜಕ್ಕೂ ವಿಷಾದನೀಯ. ಇಂಥ ಪ್ರಯತ್ನ ಕರಾವಳಿ ಭಾಗದಲ್ಲಿ ಹಾಗೂ ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಇಂಥ ಯೋಜನೆಯನ್ನು ಮಾಡಬೇಕೆಂದು ಒತ್ತಾಯಿಸುವುದೇ ಒಂದು ಪ್ರಚೋದನಾ ಕೆಲಸವಾಗಿದೆ ಎಂದು ಪರಿಸರವಾದಿ ಗಣೇಶ್‌ ಅಭಿಪ್ರಾಯಪಟ್ಟರು.

ಕರವೇ ವಿರೋಧ

ಕಾರವಾರ: ಕಾಳಿ, ಘಟಪ್ರಭಾ ಮತ್ತು ಮಲಪ್ರಭಾ ನದಿ ಜೋಡಣೆ ಬಗ್ಗೆ ಸಂಗಮೇಶ ನಿರಾಣಿ ವರದಿಯನ್ನು ಅನುಷ್ಠಾನಕ್ಕೆ ತರಲು ಉತ್ತರ ಕರ್ನಾಟಕದ ರಾಜಕಾರಣಿಗಳು, ಮಠಾಧಿಧೀಶರು ಮಾಡುತ್ತಿರುವ ಪ್ರಯತ್ನ ಖಂಡನೀಯ ಎಂದು ಕರುನಾಡ ರಕ್ಷಣಾ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ. ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿ ಕಾರವಾರದಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ.
ಈ ನದಿಗೆ ಅಡ್ಡಲಾಗಿ ಸೂಪಾ, ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಕುಡಿಯುವ ನೀರಿಗಾಗಿ ಹಲವಾರು ಸಣ್ಣ ಸಣ್ಣ ಚೆಕ್‌ಡ್ಯಾಮಗಳಿವೆ. ಕೈಗಾ ಅಣುವಿದ್ಯುತ್‌ ಕೇಂದ್ರ ಇದೆ. ಈ ನದಿ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ಜತೆಗೆ ಅತ್ಯಂತ ಸೂಕ್ಷ್ಮ ಜೀವವಲಯವಾದ ಮಧ್ಯ ಪಶ್ಚಿಮ ಘಟ್ಟದ ಪ್ರದೇಶದಿಂದ ಹರಿಯುತ್ತಿದೆ. ಇಂತಹ ನದಿಯನ್ನು ತಿರುಗಿಸಲು ಯತ್ನಿಸುತ್ತಿರುವುದು ಅತ್ಯಂತ ಅಪಾಯಕಾರಿ. ಇದರಿಂದ ಪ್ರಕೃತಿ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ. ಇಡೀ ಭಾರತಕ್ಕೆ ಮುಂಗಾರು ಮಳೆಯನ್ನು ತರುವ ಪಶ್ಚಿಮಘಟ್ಟ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಅದರಲ್ಲೂ ಜೋಯಿಡಾ ಹಾಗೂ ದಾಂಡೇಲಿ ಭಾಗಗಳು ಸೂಕ್ಷ್ಮಜೀವ ವಲಯ ವ್ಯಾಪ್ತಿಯಲ್ಲಿ ಬರುತ್ತವೆ.
ಪಶ್ಚಿಮಘಟ್ಟವನ್ನು ಪಾರಂಪರಿಕ ತಾಣವೆಂದು ಯುನೆಸ್ಕೊ ಈಗಾಗಲೇ ಘೋಷಿಸಿದೆ. ಈ ಕಾಳಿ ನದಿಯು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಜೊಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿದೆ. ಈ ನದಿಯನ್ನು ತಿರುಗಿಸಲು ಯತ್ನಿಸಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಇಂತಹ ಯಾವುದೇ ಪ್ರಯತ್ನಕ್ಕೂ ಸಂಘಟನೆಯು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next