ಮೈಸೂರು: ವಿಕಲಚೇತನರಿಗೆ ತರಬೇತಿ ನೀಡುವುದಕ್ಕಿಂತಲೂ ಮುಖ್ಯವಾಗಿ ವಿಕಲಚೇತನದಿಂದ ಬಳಲುತ್ತಿರುವವರ ಪೋಷಕರಿಗೆ ಸೂಕ್ತ ತರಬೇತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಕಲಚೇತನರ ರಾಜ್ಯ ಇಲಾಖೆ ಆಯುಕ್ತ ಬಸವರಾಜು ಹೇಳಿದರು.
ನಗರದ ಅಖೀಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ನಡೆದ ಸಂಸ್ಥೆಯ 53ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಕಲಚೇತನರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಇನ್ನು ಹೆಚ್ಚಿನ ಜನರಿಗೆ ಈ ಸೇವೆ ಒದಗಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ವಿಕಲಚೇತರನರ ಬದಲಿಗೆ ವಿಕಲಚೇತನರ ಪೋಷಣೆ ಮಾಡುವವರಿಗೆ ಹೆಚ್ಚಿನ ತರಬೇತಿ ನೀಡಬೇಕೆಂದು ಹೇಳಿದರು.
ವಿಕಲಚೇತನರ ಅನುಕೂಲಕ್ಕಾಗಿ ಸೂಕ್ತ ಕಾಯ್ದೆ, ಕಾನೂನುಗಳಿದ್ದರೂ, ಅವರಿಗೆ ನ್ಯಾಯ ಒದಗಿಸುವ ಅಗತ್ಯವಿದ್ದು, ಈ ಬಗ್ಗೆ ಆಲೋಚಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಆಯುಷ್‌ನಂತಹ ಸಂಸ್ಥೆಗಳು ಪ್ರಮುಖ ಪಾತ್ರವಹಿಸುವ ಮೂಲಕ ವಿಕಲಚೇತನ ನಿವಾರಣೆಗೆ ಇರುವ ತಾಂತ್ರಿಕತೆ ಎಲ್ಲರಿಗೂ ತಲಪಿಸಬೇಕಿದೆ. ಇಂತಹ ಸೇವೆಗಳು ಕೆಲವರಿಗಷ್ಟೇ ಸೀಮಿತವಾಗದೆ, ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ತಲುಪಿಸಬೇಕಿದೆ ಎಂದರು.
ಎಲ್ಲರಿಗೂ ತಲುಪಬೇಕು: ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಪ್ರಧಾನ ನಿರ್ದೇಶಕ ಡಾ.ಕಪಿಲ್ ಮೋಹನ್ ಮಾತನಾಡಿ, ಆಯುಷ್ ಬಿಡುಗಡೆ ಮಾಡಿರುವ ವರದಿಯಲ್ಲಿ ಶೇ.2.67 ಮಂದಿ ಸಂವಹನ ಸಮಸ್ಯೆಯಿಂದ ಬಳಲುತ್ತಿರುವುದು ಆಘಾತಕಾರಿ ಸಂಗತಿ. ಹೀಗಾಗಿ ನ್ಯೂ ಬಾರ್ನ್ ಸ್ಕ್ರೀನಿಂಗ್ ಕಾರ್ಡ್‌ನ್ನು ಆರೋಗ್ಯ ಇಲಾಖೆಯೊಂದಿಗೆ ಸೇರ್ಪಡೆಗೊಳಿಸಿದರೆ ಎಲ್ಲರಿಗೂ ಸೇವೆ ತಲುಪಿಸಬಹುದು. ಇಂತಹ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂವಹನ ಸಮಸ್ಯೆಯಿಂದ ಬಳಲುತ್ತಿರುವವರ ಕುರಿತು ಆಯುಷ್ ಹೊರತಂದಿರುವ ಸಮೀಕ್ಷೆ ವರದಿ ಹಾಗೂ ಸಂಸ್ಥೆಯ ವಾರ್ಷಿಕ ವರದಿ ಬಿಡುಗಡೆ ಮಾಡಲಾಯಿತು. ಪಿಎಚ್‌ಡಿ ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಯುಷ್ ನಿರ್ದೇಶಕಿ ಡಾ.ಎಸ್.ಆರ್. ಸಾವಿತ್ರಿ, ಡಾ.ಎನ್. ಶ್ರೀದೇವಿ ಹಾಜರಿದ್ದರು.