Advertisement

ದಿವ್ಯಾಂಗ ಮಕ್ಕಳು ಶಾಪಗ್ರಸ್ತರಲ್ಲ: ಹಂಚಾಟೆ

05:35 PM Dec 06, 2021 | Team Udayavani |

ಧಾರವಾಡ: ಸಾಮಾಜಿಕ ವ್ಯವಸ್ಥೆಯಲ್ಲಿ ದಿವ್ಯಾಂಗ ಮಕ್ಕಳ ಕುರಿತು ತಪ್ಪು ಗ್ರಹಿಕೆಗಳು ಇನ್ನೂ ಉಳಿದುಕೊಂಡಿದ್ದು, ಯಾವುದೇ ಕಾರಣಕ್ಕೂ ದಿವ್ಯಾಂಗ ಮಕ್ಕಳು ಶಾಪಗ್ರಸ್ತರಲ್ಲ ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.

Advertisement

ನಗರದಲ್ಲಿ ಡಿಡಿಪಿಐ ಕಾರ್ಯಾಲಯ ಸಹಯೋಗದಲ್ಲಿ ನಗರ ವಲಯದ ಬಿಇಒ-ಬಿಆರ್‌ಸಿ ಕಚೇರಿಗಳು ಮತ್ತು ಶಹರದ ಎಸ್‌ ಆರ್‌ಪಿ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವ ದಿವ್ಯಾಂಗ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದಿವ್ಯಾಂಗ ಮಕ್ಕಳ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮತ್ತು ಅವರ ಸ್ವಾವಲಂಬಿ ಬದುಕು ರೂಪಿಸಲು ಬಿಐಇಆರ್‌ಟಿಗಳು ಆಸಕ್ತಿಯಿಂದ ಶ್ರಮಿಸಬೇಕು ಎಂದರು.

ಅತಿಥಿಯಾಗಿದ್ದ ಗ್ರಾಮೀಣ ಬಿಇಒ ಉಮೇಶ ಬಮ್ಮಕ್ಕನವರ ಮಾತನಾಡಿ, ದಿವ್ಯಾಂಗ ಮಕ್ಕಳ ವಿದ್ಯಾರ್ಜನೆ ಮತ್ತು ಅವರ ವ್ಯಕ್ತಿತ್ವ ವಿಕಾಸಕ್ಕೆಂದೇ ತೆರೆಯಲಾಗಿರುವ ಎಸ್‌ಆರ್‌ಪಿ ಮತ್ತು ಹೆಚ್‌ಬಿಇ ಕೇಂದ್ರಗಳನ್ನು ಬಿಐಇಆರ್‌ಟಿಗಳು ಹೆಚ್ಚು ಕ್ರಿಯಾಪ್ರೇರಕಗೊಳಿಸಿ ದಿವ್ಯಾಂಗ ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಬೇಕು ಎಂದರು. ಡಾ|ಶ್ರೀಕಾಂತ ಸಾಲಿಮನಿ ಫಿಜಿಯೋಥೆರಪಿಯ ಮಹತ್ವ ವಿವರಿಸಿದರು. ಬಿಐಇಆರ್‌ಟಿ ಸುಮಿತಾ ಹಿರೇಮಠ ಕೇಂದ್ರ ಮತ್ತು
ರಾಜ್ಯ ಸರ್ಕಾರಗಳ ಅಂಗವಿಕಲ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ದೊರೆಯುವ ವಿಶೇಷ ಚೇತನರ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪ್ರಕಾಶ ಭೂತಾಳಿ ಮತ್ತು ಶಿವಲೀಲಾ ಕಳಸಣ್ಣವರ ದಿವ್ಯಾಂಗರ ಶಿಕ್ಷಣ ಕುರಿತು ಮಾತನಾಡಿದರು.

ಕಲೋತ್ಸವದಲ್ಲಿ ಪಾಲ್ಗೊಂಡಿದ್ದ ಸುಶೀಲಕುಮಾರಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಬಿಆರ್‌ಪಿ ಡಿ.ವಿ. ಸಜ್ಜನರ ದಿವ್ಯಾಂಗ ಮಕ್ಕಳಿಗೆ ಬಿಸ್ಕೀಟ್‌ -ಸ್ಟೀಲ್‌ ಲೋಟಾ ವಿತರಿಸಿದರು. ಶಹರ ಬಿಇಒ ಗಿರೀಶ ಪದಕಿ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಸಿ ಸಮನ್ವಯಾಧಿಕಾರಿ ಎಂ.ವಿ.ಅಡವೇರ ಸ್ವಾಗತಿಸಿದರು. ಎಸ್‌.ಎಸ್‌.ಜೋಶಿ ಮತ್ತು ಎಂ.ಪಿ.ದೊಡ್ಡಮನಿ ನಿರೂಪಿಸಿದರು. ಗಿರಿಜಾ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next