ಬೆಂಗಳೂರು: ಹಿರಿಯ ನಿರ್ದೇಶಕ ಟಿ.ಎಸ್.ರಂಗ (69) ಅವರು ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಪತ್ನಿ ಅಶ್ವಿನಿ ಹಾಗೂ ಪುತ್ರಿ ತನ್ವಿ ಸೇರಿ ಅಪಾರ ಗೆಳೆಯರು, ಬಂಧುಗಳನ್ನು ಅಗಲಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ
ಅನಾರೋಗ್ಯದಿಂದ ಬಳಲುತ್ತಿದ್ದ ಟಿ.ಎಸ್.ರಂಗ ಅವರು ಭಾನುವಾರ ಬೆಳಗ್ಗೆಯಷ್ಟೇ ಆಸ್ಪತ್ರೆಗೆ ಹೋಗಿ ಮನೆಗೆ ಹಿಂದಿರುಗಿದ ಬಳಿಕ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.
ರಂಗ ಸಂಘಟಕರಾಗಿದ್ದ ಟಿ.ಎಸ್.ರಂಗ ಅವರು,ಕೆಲ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ “ಬೆನಕ’ ತಂಡವನ್ನು ಹುಟ್ಟುಹಾಕಿದ್ದರು. ಬೆನಕ ತಂಡದೊಂದಿಗೆ ವಿವಿಧ ರಾಜ್ಯಗಳಲ್ಲಿ ಹಲವು ನಾಟಕ ಪ್ರದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. “ಹಯವದನ’,”ಜೋಕುಮಾರಸ್ವಾಮಿ’, “ಸತ್ತವರ ನೆರಳು’, “ಟಿಂಗರ ಬುಡ್ಡಣ್ಣ’ ಮತ್ತು ಲಂಕೇಶರ ಹಲವು ನಾಟಕಗಳನ್ನು ಪೂನಾ, ಮುಂಬೈ ಹಾಗು ಚೆನ್ನೈನಲ್ಲಿ ಪ್ರದರ್ಶನ ಮಾಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ನಾಟಕದ ಜತೆಗೆ ಸಿನಿಮಾ ನಿರ್ದೇಶನದ ಕಡೆಯೂ ವಾಲಿದ ಟಿ.ಎಸ್.ರಂಗ ಅವರು ಮೊದಲು ನಿರ್ದೇಶನ ಮಾಡಿದ್ದು “ಗಿಜಗನ ಗೂಡು’. ಈ ಚಿತ್ರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿತ್ತು. ಎಸ್. ರಾಮಚಂದ್ರ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು.
ಅವರ ಗೆಳೆಯ ಸುಂದರ್‌ರಾಜ್ ಅಸೋಸಿಯೇಟ್ ಆಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದರು. ವಿಶೇಷವೆಂದರೆ, ಕೋಕಿಲ ಮೋಹನ್ ಅವರನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ರಂಗ ಅವರದ್ದು. ತಮ್ಮ ಎರಡನೇ ನಿರ್ದೇಶನದ “ಸಾವಿತ್ರಿ’ ಚಿತ್ರಕ್ಕೂ ರಾಜ್ಯ ಪ್ರಶಸ್ತಿ ಬಂದಿತ್ತು. ಅವರ ಪತ್ನಿ ಅಶ್ವಿನಿ ಅವರೇ “ಸಾವಿತ್ರಿ’ ಚಿತ್ರದ ನಾಯಕಿಯಾಗಿದ್ದು ವಿಶೇಷ. “ರಾಮಾಯಣ’ ಎಂಬ ಚಿತ್ರ ನಿರ್ದೇಶನಕ್ಕೆ ಅಣಿಯಾದರೂ ಅದು ಸಾಧ್ಯವಾಗಲಿಲ್ಲ. ಈ ನಡುವೆ ಅವರು ಹಿಂದಿಯಲ್ಲಿ “ಗಿದ್‌ಟಛಿ'(ಗಿಡುಗ) ಎಂಬ
ಚಿತ್ರವನ್ನೂ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಈ ಚಿತ್ರದಲ್ಲಿ ಓಂಪುರಿ, ನಾನಾ ಪಾಟೇಕರ್, ಸ್ಮಿತಾ ಪಾಟೀಲ್ ಇತರರು ನಟಿಸಿದ್ದರು.
ಅಶೋಕ್ ಬಾದರದಿನ್ನಿ ಹಾಗು ಶ್ರೀನಿವಾಸ್ ಪ್ರಭು ಅಂತಹ ಪ್ರತಿಭೆಗಳನ್ನೂ ಟಿ.ಎಸ್.ರಂಗ ಪರಿಚಯಿಸಿದವರು. ಸಿನಿಮಾ, ನಾಟಕ ಜತೆಗೆ ಹಲವು ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದಾರೆ. “ಕಾಕನ ಕೋಟೆ’ ಚಿತ್ರದಲ್ಲಿ ರಂಗ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. “ಗ್ರಹಣ’ ಚಿತ್ರದ ಚಿತ್ರಕಥೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು. ಸಾಕಷ್ಟು ರಂಗಪ್ರತಿಭೆಗಳಿಗೆ ಪ್ರೇರಣೆಯಾಗಿ ಉತ್ಸಾಹ ತುಂಬುತ್ತಿದ್ದ ಟಿ.ಎಸ್.ರಂಗ ಅವರು ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳಿಂದ ದೂರ ಉಳಿದಿದ್ದರು.
ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ಗುಡ್ಡದಹಳ್ಳಿಯಲ್ಲಿರುವ ಚಿತಾಗಾರದಲ್ಲಿ ನೆರವೇರಿತು. ಈ ವೇಳೆ ಅವರ ಆಪ್ತಗೆಳೆಯರಾದ ಸುಂದರ್‌ರಾಜ್, ಟಿ.ಎನ್.ಸೀತಾರಾಮ್, ದತ್ತಣ್ಣ,ಟಿ.ಎಸ್ .ನಾಗಾಭರಣ ಸೇರಿ ಚಿತ್ರರಂಗದ ಅನೇಕ ಗಣ್ಯರು,ರಂಗಭೂಮಿಯ ಕಲಾವಿದರು, ತಂತ್ರಜ್ಞರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.