Advertisement

ನಿರ್ದೇಶಕ, ನಿರ್ಮಾಪಕರ ಬಂಧನಕ್ಕೆ ವಿಶೇಷ ತಂಡ

12:23 PM Mar 31, 2019 | Team Udayavani |

ಬೆಂಗಳೂರು: ಬಾಗಲೂರಿನಲ್ಲಿ “ರಣಂ’ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಕಂಪ್ರಸ್ಡ್ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಚಿತ್ರತಂಡದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದೆ.

Advertisement

ಘಟನೆಯಲ್ಲಿ ಮೃತಪಟ್ಟ ಸುಮೈರಾ ಬಾನು ಅವರ ಪತಿ ತಬ್ರೇಜ್‌ ಖಾನ್‌ ನೀಡಿರುವ ದೂರಿನ ಅನ್ವಯ, ರಣಂ ಚಿತ್ರದ ನಿರ್ಮಾಪಕ ಆರ್‌.ಶ್ರೀನಿವಾಸ್‌, ನಿರ್ದೇಶಕ ವಿ.ಸಮುದ್ರಂ, ಚಿತ್ರದ ಮ್ಯಾನೇಜರ್‌ ಕಿರಣ್‌, ಸಾಹಸ ನಿರ್ದೇಶಕ ವಿಜಯನ್‌ ಮತ್ತು ತಂತ್ರಜ್ಞರ ವಿರುದ್ಧ ಐಪಿಸಿ 304 (ಉದ್ದೇಶಪೂರ್ವಕವಲ್ಲದ ಕೊಲೆ) 338 (ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಗಂಭೀರ ಗಾಯಕ್ಕೆ ಕಾರಣ) ಸ್ಫೋಟಕ ವಸ್ತುಗಳ ಬಳಕೆ ಕಾಯಿದೆ ಅನ್ವಯ ಬಾಗಲೂರು ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಸಂಪಿಗೆಹಳ್ಳಿ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಕಲಾ ಕೃಷ್ಣಸ್ವಾಮಿ “ಉದಯವಾಣಿಗೆ’ ತಿಳಿಸಿದರು.

ಚಿತ್ರತಂಡದ 9 ವಾಹನಗಳು ಜಪ್ತಿ: ದುರ್ಘ‌ಟನೆ ಬಳಿಕ ಚಿತ್ರತಂಡ ಸ್ಥಳದಿಂದ ಪರಾರಿಯಾಗಿದ್ದು, ಕಾರವಾನ್‌, ಎರಡು, ಕಾರುಗಳು ಸೇರಿದಂತೆ 9 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಜತೆಗೆ. ಘಟನಾ ಸ್ಥಳದಲ್ಲಿ ದೊರೆತ ಸ್ಫೋಟಕ್ಕೆ ಸಂಬಂಧಿಸಿದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಸಾಹಸ ದೃಶ್ಯದಲ್ಲಿ ಕಾರು ಸ್ಫೋಟಿಸಲು ಬಳಸಿದ್ದ ಕಂಪ್ರಸ್ಡ್ ಗ್ಯಾಸ್‌ ಸಿಲಿಂಡರ್‌ ಯಾವ ಮಾದರಿಯದ್ದು, ಜತೆಗೆ ಅದಕ್ಕೆ ತುಂಬಿಸುತ್ತಿದ್ದ ಗ್ಯಾಸ್‌ ಎಷ್ಟು ಅಪಾಯಕಾರಿ ಎಂಬುದು ಎಫ್ಎಸ್‌ಎಲ್‌ ವರದಿ ಬಳಿಕ ಖಚಿತವಾಗಲಿದೆ.

Advertisement

ಚಿತ್ರತಂಡ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ಸ್ಫೋಟ ಸಂಭವಿಸಿದೆ. ಸಿಲಿಂಡರ್‌ನ ಕ್ಯಾಪ್‌ ಬಡಿದು ಮಹಿಳೆ ಹಾಗೂ ಮಗು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿ ತಿಳಿಸಿದರು.

ಪ್ರಾಣಾಪಾಯದಿಂದ ಪಾರಾದ ಜೈನಬ: ದುರ್ಘ‌ಟನೆಯಲ್ಲಿ ಗಾಯಗೊಂಡಿದ್ದ ತಬ್ರೇಜ್‌ ಖಾನ್‌ರ ಮಗಳು ಜೈನಬ (8) ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರಾದ ಸುಮೈರಾ ಬಾನು ಹಾಗೂ ಮಗಳು ಆಯೆರಾ ಖಾನ್‌ (5) ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಕೋಲಾರದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು. ವೈದ್ಯರ ಸಲಹೆ ಮೇರೆಗೆ ಜೈನಬಳನ್ನು ತಾಯಿ ಹಾಗೂ ತಂಗಿಯ ಅಂತ್ಯ ಸಂಸ್ಕಾರಕ್ಕೆ ಕರೆದುಕೊಂಡು ಹೋಗಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next