ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿಕ್ಕಣ್ಣ ಅಭಿನಯದ “ಡಬ್ಬಲ್ ಇಂಜಿನ್’ ಚಿತ್ರವನ್ನು ಉದಯ್ ಮೆಹ್ತಾ ನಿರ್ಮಿಸಬೇಕಿತ್ತಂತೆ. ನಿರ್ದೇಶಕ ಚಂದ್ರಮೋಹನ್ ಒಂದು ಕಥೆ ಹೇಳಿ, ಆ ಕಥೆ ಉದಯ್ ಮೆಹ್ತಾಗೂ ಇಷ್ಟವಾಗಿತ್ತಂತೆ. ಆದರೆ, ಆ ಸಂದರ್ಭದಲ್ಲಿ ಅವರು ಬೇರೊಂದು ಚಿತ್ರ ಮಾಡುತ್ತಿದ್ದರಿಂದ, ಈ ಚಿತ್ರ ಬಿಟ್ಟರಂತೆ. ಹಾಗಂತ ಸಂಪೂರ್ಣ ದೂರವಾಗಿಲ್ಲ. ಚಿತ್ರದ ವಿತರಣೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಇಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಉದಯ್ ಮೆಹ್ತಾ ವಿತರಣೆ ಮಾಡುತ್ತಿದ್ದಾರೆ.
ಚಿತ್ರ ಬಿಡುಗಡೆಯಾಗುವ ವಿಷಯ ಹೇಳುವುದಕ್ಕೆ ಚಿತ್ರತಂಡದವರು ಒಂದು ಕಡೆ ಜಮಾಯಿಸಿದ್ದರು. ನಿರ್ದೇಶಕ ಚಂದ್ರಮೋಹನ್, ನಿರ್ಮಾಪಕರಾದ ಮಂಜುನಾಥ್ ನಂಜಪ್ಪ, ಅರುಣ್ ಕುಮಾರ್ ಮತ್ತು ರಾಜು, ಕಲಾವಿದರಾದ ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕಾ ಮಲಾ°ಡ್ ಮುಂತಾದವರು ವೇದಿಕೆಯ ಮೇಲಿದ್ದರು. ಅಂದು ಸುಮನ್ ರಂಗನಾಥ್ ಒಬ್ಬರು ಮಿಸ್ ಆಗಿದ್ದು.
ಚಂದ್ರಮೋಹನ್‌ಗೆ ಚಿತ್ರ ಜನರಿಗೆ ತಲಪುತ್ತದೆ ಎಂಬ ನಂಬಿಕೆ ಬಂದಿದೆಯಂತೆ. “ಕಳೆದ ಕೆಲವು ದಿನಗಳಿಂದ ಪಬ್ಲಿಸಿಟಿ ಜೋರಾಗಿ ಮಾಡಿದ್ದೀವಿ. ಜನರಿಗೆ ತಲುಪುವ ಹಾಗೆ ಮಾಡಿದ್ದೇವೆ. ಟ್ರೇಲರ್ ಹಿಟ್ ಆಗಿದೆ. ಚಿತ್ರದ ಬಗ್ಗೆ ಮೌಥ್‌ಟಾಕ್ ಇದೆ. ಹಾಗಾಗಿ ವಿಶ್ವಾಸ ಬಂದಿದೆ. ಈ ಚಿತ್ರ ಆಗೋಕೆ ಕಾರಣ ಚಿಕ್ಕಣ್ಣ. ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ. ಈ ಚಿತ್ರದಲ್ಲಿ ಮೂವರು ಅಮಾಯಕರು ಶಾರ್ಟ್‌ಕಟ್°ಲ್ಲಿ ದುಡ್ಡು ಮಾಡೋಕೆ ಹೋಗಿ ಏನೆಲ್ಲಾ ಆಗುತ್ತದೆ’ ಎಂಬುದು ಚಿತ್ರದ ಕಥೆ. ಇದೊಂದು ಮನರಂಜನೆಯ ಚಿತ್ರ. ಇಲ್ಲಿ ಮಾಮೂಲಿ ಕಾಮಿಡಿ ಇಲ್ಲ, ಸೀರಿಯಸ್ ಕಾಮಿಡಿ ಇದೆ. “ಡಬ್ಬಲ್ ಇಂಜಿನ್’ ಅಂದರೆ ಏನು ಅಂತ ಸಿನಿಮಾ ನೋಡಬೇಕು’ ಎಂದರು.
ಚಂದ್ರಮೋಹನ್ ಅವರ ಜೊತೆಗೆ “ಬಾಂಬೆ ಮಿಠಾಯಿ’ ಎಂಬ ಚಿತ್ರ ಮಾಡಿದ್ದು ನೆನಪಿಸಿಕೊಂಡ ಚಿಕ್ಕಣ್ಣ, “ಆ ಚಿತ್ರ ಚೆನ್ನಾಗಿ ವರ್ಕ್ ಆಗಿತ್ತು. ಅದೇ ನಂಬಿಕೆಯಿಂದ ಈ ಚಿತ್ರ ಮಾಡಿದ್ದೇವೆ. ಈ ಚಿತ್ರದಲ್ಲಿ ಬಹಳಷ್ಟು ಜನರ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರು ಡಬ್ಬಲ್ ಇಂಜಿನ್ ಆದರೆ, ನಾವೆಲ್ಲಾ ಬೋಗಿಗಳು’ ಎಂದರು.