ಮುಂಬಯಿ: ಬಾಲಿವುಡ್ ನಿರ್ದೇಶಕ ಕರನ್ ಜೋಹರ್ 7 ವರ್ಷದ ಬಳಿಕ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಇತ್ತ ಸಿನಿಮಾ ತಂಡ ಪ್ರತಿಕಾಗೋಷ್ಠಿ ನಡೆಸಿ ಸಿನಿಮಾದ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಸ್ತ್ರೀವಾದ, ಪುರುಷ ಸಮಾಜದ ವಿಚಾರವನ್ನು ಸಿನಿಮಾದಲ್ಲಿ ಆಧುನಿಕ ರೀತಿಯಲ್ಲಿ ತೋರಿಸಲಾಗಿದೆ.
ಸಿನಿಮಾದಲ್ಲಿ ರಾಕಿ (ರಣವೀರ್) ರಾಣಿಯ ತಾಯಿ (ಚುರ್ನಿ ಗಂಗೂಲಿ) ಜೊತೆಗೆ ಒಳ ಉಡುಪುಗಳ ಶಾಪಿಂಗ್‌ಗೆ ಹೋಗುವ ದೃಶ್ಯವೊಂದಿದೆ. ಮೊದಲು ಎಲ್ಲಿಗೆ ಹೋಗುವುದೆಂದು ತಿಳಿಯದೇ, ಆ ಬಳಿಕ ರಾಕಿಗೆ ರಾಣಿಯ ತಾಯಿಅವರ ಕುಟುಂಬದ ಎಲ್ಲಾ ಹೆಣ್ಣುಮಕ್ಕಳು ಇದನ್ನು ಧರಿಸುತ್ತಾರೆ ಮತ್ತು ಅದರಲ್ಲಿ ಯಾವುದೇ ಮುಜುಗರವಿಲ್ಲ ಎಂದು ಹೇಳುವ ಡೈಲಾಗ್ ಇದೆ.
ಇದೇ ವಿಚಾರವಾಗಿ ನಿರ್ದೇಶಕ ಕರಣ್ ಜೋಹರ್ ಮಾತನಾಡಿದ್ದು, ತಾನು ಈ ರೀತಿ ಶಾಪಿಂಗ್ ಹೋಗುವ ವೇಳೆ ಏನಾಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
“ಇದು ನಿಷೇಧ ಹೇರುವ ವಿಚಾರವಲ್ಲ. ನಾನೂ ಕೂಡ ನನ್ನ ತಾಯಿಗೆ ಬ್ರಾ ಖರೀದಿಸಲು ಶಾಪಿಂಗ್ ಗೆ ಹೋಗಿದ್ದೇನೆ. ನನಗಿದು ಸಮಸ್ಯೆಯಾಗಿಲ್ಲ. ಆದರೆ ಈ ವೇಳೆ ನನ್ನ ಜೊತೆ ಸ್ನೇಹಿತರಿದ್ದರು. ನಾನು ಅದನ್ನು ಖರೀದಿಸುವಾಗ ಅವರು ಗಾಬರಿಗೊಂಡಿದ್ದರು. ನಾನು ಈ ಕೆಲಸವನ್ನು ಮಹಿಳಾ ಸ್ನೇಹಿತರಿಗೆ ಯಾಕೆ ಕೊಟ್ಟಿಲ್ಲ? ಎಂದಿದ್ದರು. ಆದರೆ ಇದ್ಯಾಕೆ? ನನ್ನ ತಾಯಿಗೆ 81 ವರ್ಷವಾಗಿದೆ. ಅವಳು ಕೇಳಿದ್ದನ್ನು ನಾನ್ಯಾಕೆ ಮಾಡಬಾರದು. ಬೇರೆ ಅವರಿಗೆ ಯಾಕೆ ನೀಡಬೇಕು? ಅವಳಿಗೆ ಒಳ ಉಡುಪು ಬೇಕೋ ಅಥವಾ ಬೇರೆ ಏನೋ ಬೇಕೋ ಅದನ್ನು ನಾನೇ ತಂದುಕೊಡಬೇಕು. ನನ್ನ ಪ್ರಕಾರ ಸಿನಿಮಾದಲ್ಲಿನ ಈ ದೃಶ್ಯ ಸ್ವಾಭಾವಿಕವಾದುದು. ಈ ದೃಶ್ಯದಲ್ಲಿ “ ಮದುವೆಯಾದ ಬಳಿಕ ಹೆಂಗಸರು ಗಂಡಸರ ಒಳ ಉಡುಪು ತೊಳೆಯುತ್ತಿದ್ದಾರೆ, ನೀನು ಈ ಬ್ರಾ ಟಚ್ ಮಾಡಲ್ವಾ? ಎನ್ನುವ ಡೈಲಾಗ್ ಇದೆ ನನಗೆ ಗೊತ್ತು ಇದರ ಬಗ್ಗೆ ಜನ ಏನು ಭಾವಿಸುತ್ತಾರೆ” ಎಂದು ಕರಣ್ ಜೋಹರ್ ಹೇಳಿದರು.
ರೊಮ್ಯಾಂಟಿಕ್ ಕಥಾ ಹಂದರವನ್ನು ಹೊಂದಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಜುಲೈ 28 ರಂದು ತೆರೆಗೆ ಬಂದಿದೆ. ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಮುಂತಾದವರು ನಟಿಸಿದ್ದಾರೆ.