Advertisement

ಸ್ಯಾಂಡಲ್‌ವುಡ್‌‌ ಮಾದಕ ವಸ್ತು ಮಾರಾಟ ಪ್ರಕರಣ: ಇಂದು ಇಂದ್ರಜಿತ್‌ ವಿಚಾರಣೆ

04:05 AM Sep 03, 2020 | Hari Prasad |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಪ್ರಸಿದ್ಧ ನಟಿ ರಾಗಿಣಿ ದ್ವಿವೇದಿಗೆ ಕೇಂದ್ರ ಅಪರಾಧ ವಿಭಾಗ ನೋಟಿಸ್‌ ನೀಡಿದೆ.

Advertisement

ಗುರುವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಜತೆಗೆ ರಾಗಿಣಿ ಸ್ನೇಹಿತ ಎನ್ನಲಾದ ರವಿಶಂಕರ್‌ ಅವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಬುಧವಾರ ರಾತ್ರಿ 8ರ ಸುಮಾರಿಗೆ ರವಿಶಂಕರ್‌ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅವರು ನೀಡಿದ ಮಾಹಿತಿ ಮೇರೆಗೆ ರಾಗಿಣಿಗೂ ನೋಟಿಸ್‌ ನೀಡಲಾಗಿದೆ. ಅವರು ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಅಂಟಿರುವ ಈ ಮಾದಕ ನಶೆ ವಿವಾದ ಸಂಬಂಧ ಇದೇ ಮೊದಲ ಬಾರಿಗೆ ನಟಿಯೊಬ್ಬರ ಹೆಸರು ತಳಕುಹಾಕಿಕೊಂಡಿದೆ.

Advertisement

ಅಖಾಡಕ್ಕಿಳಿದ ಸಿಸಿಬಿ
ಎನ್‌ಸಿಬಿ ತನಿಖಾ ಮಾಹಿತಿ ಮತ್ತು ಕುಖ್ಯಾತ ಡ್ರಗ್‌ ಪೆಡ್ಲರ್‌ಗಳನ್ನು ವಿಚಾರಣೆಗೆ ಒಳಪಡಿಸಿ ಸಿಕ್ಕಿದ ಮಾಹಿತಿ ಅನ್ವಯ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರೇ ಖುದ್ದು ಅಖಾಡಕ್ಕಿಳಿದಿದ್ದಾರೆ. ಡ್ರಗ್ಸ್‌ ಜಾಲದಲ್ಲಿ ತೊಡಗಿರುವ ಸುಮಾರು 10-12 ಮಂದಿ ನಟ, ನಟಿಯರು ಹಾಗೂ ಸಂಗೀತಗಾರರಿಗೆ ನೋಟಿಸ್‌ ಕೊಡಲು ನಿರ್ಧರಿಸಿದ್ದಾರೆ.

ಸಿಸಿಬಿ ನೋಟಿಸ್‌ ಪ್ರಕಾರ ವಿಚಾರಣೆಗೆ ಒಳಗಾಗಿದ್ದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ರಿಂದ ಯಾವುದೇ ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಸಿಸಿಬಿ ಸ್ವಯಂ ಕಾರ್ಯಾಚರಣೆಗೆ ಇಳಿದಿದೆ. ಹೀಗಾಗಿ ಸಿಸಿಬಿಯ ಡಿಸಿಪಿ ರವಿಕುಮಾರ್‌ ಮತ್ತು ಎಸಿಪಿ ಗೌತಮ್‌ ಕುಮಾರ್‌, ಇನ್‌ಸ್ಪೆಕ್ಟರ್‌ ಮಲ್ಲೇಶ್‌ ಬೊಳೆತ್ತೀನ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

10-12 ಮಂದಿ ಪಟ್ಟಿ ಸಿದ್ಧ
ಎನ್‌ಸಿಬಿ ಅಧಿಕಾರಿಗಳ ವಶದಲ್ಲಿರುವ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ಪೂರೈಕೆ ಮಾಡಿದ್ದ ಅನಿಕಾ ಹೇಳಿಕೆಯನ್ನಾಧರಿಸಿ ಕೆಲವೊಂದು ಮಾಹಿತಿ ಸಂಗ್ರಹಿಸಲಾಗಿದೆ. ಇದರೊಂದಿಗೆ ನಗರದಲ್ಲಿ ಐಷಾರಾಮಿ ಡ್ರಗ್ಸ್‌ ಮಾರಾಟ ಮಾಡುವ ಪೆಡ್ಲರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ನಟ, ನಟಿಯರು ಹಾಗೂ ಸಂಗೀತಗಾರರು ಮಾದಕ ವಸ್ತು ಖರೀದಿಸಿರುವುದು ಗೊತ್ತಾಗಿದೆ. ಮುಖ್ಯವಾಗಿ ಲಾಕ್‌ಡೌನ್‌ ಸಂದರ್ಭದಲ್ಲಿಯೇ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಸರಬರಾಜು ಆಗಿರುವುದು ಪತ್ತೆಯಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದರು.

ಇಂದ್ರಜಿತ್‌ ಲಂಕೇಶ್‌ಗೆ ನೋಟಿಸ್‌
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮತ್ತೊಮ್ಮೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಗಾಗಲಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್‌ ಲಂಕೇಶ್‌ ಯಾವುದೇ ಸಾಕ್ಷ್ಯಗಳು ನೀಡಿರಲಿಲ್ಲ. ಇಂದ್ರಜಿತ್‌ ವಿಚಾರಣೆ ಸಂದರ್ಭದಲ್ಲಿ 10-12 ಮಂದಿಯ ಸ್ಟಾರ್‌ಗ‌ಳ ಹೆಸರು ಉಲ್ಲೇಖೀಸಿದ್ದಾರೆ. ಜತೆಗೆ ಹಳೆಯ ಫೋಟೋ ಹಾಗೂ ವೀಡಿಯೋಗಳನ್ನು ನೀಡಿದ್ದಾರೆ ಹೊರತು, ಸೂಕ್ತ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮಾತ್ರೆಗಳು ಪತ್ತೆ?
ಸಿಸಿಬಿ ದಾಳಿ ಸಂದರ್ಭ ಶ್ವಾನದಳ ಎಚ್‌ಎಸ್‌ಆರ್‌ ಲೇಐಟ್‌ನಲ್ಲಿ ತಪಾಸಣೆ ನಡೆಸು ವಾಗ ಮಾದಕ ಮಾತ್ರೆಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಅವು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ.

ಶ್ವಾನದಳದಿಂದ ನಗರದೆಲ್ಲೆಡೆ ತಪಾಸಣೆ
ಬುಧವಾರ ನಗರದ ಎಲ್ಲ ವಿಭಾಗಗಳಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ಗಳು, ಆಟೋಗಳು, ಕಾರುಗಳು ಸೇರಿ ಎಲ್ಲ ಮಾದರಿಯ ವಾಹನಗಳು, ಬಸ್‌ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಶ್ವಾನದಳದ ಮೂಲಕ ಪೊಲೀಸರು ತಪಾಸಣೆ ನಡೆಸಿದರು. ಶ್ವಾನದಳದಲ್ಲಿ ಮಾದಕ ವಸ್ತುಗಳ ಪತ್ತೆಗಾಗಿಯೇ ತರಬೇತಿ ಪಡೆದುಕೊಂಡಿರುವ ಒಂಬತ್ತು ಶ್ವಾನಗಳಿಂದ ಬೆಂಗಳೂರಿನ ಎಲ್ಲ ವಿಭಾಗಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ಕೇರಳ ನಂಟು?
ಎನ್‌ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಕೇರಳ ಮೂಲದ ಅನೂಪ್‌ ಆರ್‌.ರವೀಂದ್ರನ್‌ನಿಂದ ಕೆಲವೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆತ ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದು, ಬಂದ ಹಣದಲ್ಲಿ ಕೇರಳದ ಕೊಚ್ಚಿಯಲ್ಲಿ ತನ್ನದೆ ಪಬ್‌ ಸೇರಿ ಕೆಲವು ವ್ಯವಹಾರ ಆರಂಭಿಸಿದ್ದ. ಆದರೆ ಲಾಕ್‌ಡೌನ್‌ನಿಂದ ಸಂಪೂರ್ಣವಾಗಿ ನಷ್ಟ ಹೊಂದಿದ್ದಾನೆ. ಅನಂತರ ಮತ್ತೆ ಬೆಂಗಳೂರಿಗೆ ಬಂದು ದಂಧೆ ಆರಂಭಿಸಿದ್ದಾನೆ. ಇದೀಗ ಆತ ಕೇರಳದ ರಾಜಕಾರಣಿಯೊಬ್ಬರ ಪುತ್ರನೂ ಕೂಡ ದಂಧೆಯಲ್ಲಿ ತೊಡಗಿದ್ದಾನೆ ಎಂಬ ಸ್ಫೋಟಕ ವಿಚಾರವನ್ನು ಬಾಯಿಬಿಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next